Home ಜಿಲ್ಲೆ ಮಕ್ಕಳು ದೇಶದ ಆಸ್ತಿ, ಅವರನ್ನು ಪ್ರೀತಿಯಿಂದ ಬೆಳೆಸಿ:ಮೇಜರ್ ಎಸ್.ಸಿ. ಆನಂದ

ಮಕ್ಕಳು ದೇಶದ ಆಸ್ತಿ, ಅವರನ್ನು ಪ್ರೀತಿಯಿಂದ ಬೆಳೆಸಿ:ಮೇಜರ್ ಎಸ್.ಸಿ. ಆನಂದ

ವಿಜಯಪುರ,ಮೇ. 8: “ಮಕ್ಕಳನ್ನು ಕೇವಲ ಒಳ್ಳೆಯ ಶಾಲೆಗೆ ಸೇರಿಸಿದರೆ ಪಾಲಕರ ಜವಾಬ್ದಾರಿ ಮುಗಿಯುವುದಿಲ್ಲ. ಅವರ ದೈನಂದಿನ ಚಟುವಟಿಕೆಗಳನ್ನು ಗಮನಿಸಿ, ಅವರಲ್ಲಿ ನಾಗರಿಕ ಪ್ರಜ್ಞೆ ಹಾಗೂ ಸಂಸ್ಕಾರ ಬೆಳೆಸುವುದು ತಂದೆ-ತಾಯಂದಿರ ಆದ್ಯ ಕರ್ತವ್ಯವಾಗಿದೆ,” ಎಂದು ಮೇಜರ್ ಎಸ್ ಸಿ ಆನಂದ ಅಭಿಪ್ರಾಯಪಟ್ಟರು. ವಿಜಯಪುರ ಜಿಲ್ಲೆಯ ಕನ್ನೂರಿನ ಶಾಂತಿ ಕುಟೀರ ಆಶ್ರಮದಲ್ಲಿ, ಶಾಂತಿ ಕುಟೀರ ಟ್ರಸ್ಟ್ ಹಾಗೂ ಶ್ರೀಶೈಲೇಶ್ವರ ವಿದ್ಯಾಕೇಂದ್ರ ಸಂಡೂರು ಮತ್ತು ಭಾರತೀಯ ಸುರಾಜ್ಯ ಸಂಸ್ಥೆ ಇವರ ಸಂಯುಕ್ತ ಆಶ್ರಯದಲ್ಲಿ ನಡೆಯುತ್ತಿರುವ ಉಚಿತ ಶೈಕ್ಷಣಿಕ ಹಾಗೂ ಆಧ್ಯಾತ್ಮಿಕ ಬೇಸಿಗೆ ಶಿಬಿರದಲ್ಲಿ ಪಾಲಕರ ಸಭೆಯನ್ನು ಉದ್ದೇಶಿಸಿ ಮಾತನಾಡುತ್ತಾ ಮಕ್ಕಳು ನಮ್ಮನ್ನು ಅನುಸರಿಸುತ್ತಾರೆ: “ಮಕ್ಕಳು ನಾವು ಹೇಳಿದ್ದನ್ನು ಕೇಳುವುದಕ್ಕಿಂತ ಹೆಚ್ಚಾಗಿ, ನಾವು ಮಾಡುವುದನ್ನು ನೋಡಿ ಕಲಿಯುತ್ತಾರೆ. ಪಾಲಕರು ಮೊದಲು ತಮ್ಮ ನಡವಳಿಕೆಯನ್ನು ಆದರ್ಶಪ್ರಾಯವಾಗಿಸಿಕೊಳ್ಳಬೇಕು. ಮಕ್ಕಳ ಮುಂದೆ ಮೊಬೈಲ್ ಬಳಸುವುದನ್ನು ಬಿಟ್ಟು ಪುಸ್ತಕ ಹಿಡಿಯುವ ಹವ್ಯಾಸ ಬೆಳೆಸಿಕೊಳ್ಳಿ,” ಬಡವ-ಶ್ರೀಮಂತ ಎಂಬ ಭೇದವಿಲ್ಲದೆ ಮಗುವಿನಲ್ಲಿ ಆತ್ಮಸ್ಥೈರ್ಯ ತುಂಬಿದರೆ ಅದು ಎಂತಹ ಕಠಿಣ ಪರಿಸ್ಥಿತಿಯಲ್ಲೂ ಬೆಳೆಯಬಲ್ಲದು. ಅಂಕಗಳಿಗಿಂತ ಮಗುವಿನ ವ್ಯಕ್ತಿತ್ವ ವಿಕಸನಕ್ಕೆ ಒತ್ತು ನೀಡಬೇಕು. ‘ಗುರುಬ್ರಹ್ಮ ಗುರುವಿಷ್ಣು’ ಶ್ಲೋಕವನ್ನು ವಿವರಿಸುತ್ತಾ, ತಂದೆ-ತಾಯಿಯೇ ಮೊದಲ ಗುರುಗಳಾಗಿದ್ದು, ಮನೆಯೇ ಮೊದಲ ಪಾಠಶಾಲೆಯಾಗಿದೆ. ಆಧುನಿಕ ತಂತ್ರಜ್ಞಾನದ ಜೊತೆಗೆ ನೈತಿಕ ಮೌಲ್ಯಗಳನ್ನು ಕಲಿಸುವುದು ಅಗತ್ಯವಾಗಿದೆ. ನಿಮ್ಮ ಮನೆಯಲ್ಲಿ “ಗಂಡ-ಹೆಂಡತಿಯಾಗಿ ಜಗಳವಾಡಿ, ಆದರೆ ಅಪ್ಪ-ಅಮ್ಮನಾಗಿ ಮಕ್ಕಳ ಮುಂದೆ ಕಿತ್ತಾಡಬೇಡಿ. ಕುಟುಂಬದ ಕಲಹಗಳು ಮಕ್ಕಳ ಮನಸ್ಸಿನ ಮೇಲೆ ಗಂಭೀರ ಪರಿಣಾಮ ಬೀರುತ್ತವೆ. ಧಾರಾವಾಹಿಗಳ ಪ್ರಭಾವಕ್ಕೆ ಒಳಗಾಗದೆ ಮನೆಯಲ್ಲಿ ಸೌಹಾರ್ದಯುತ ವಾತಾವರಣ ನಿರ್ಮಿಸಿ,” ಎಂದು ಹೇಳುತ್ತಾ ಹಳೆಯ ಕಾಲ ಮತ್ತು ಇಂದಿನ ತಂತ್ರಜ್ಞಾನದ ಯುಗವನ್ನು ತುಲನೆ ಮಾಡಿ “ನಮ್ಮ ಕಾಲದಲ್ಲಿ ಎಲ್ಲವೂ ಚೆನ್ನಾಗಿತ್ತು ಎಂದು ಸುಳ್ಳು ಹೇಳಬೇಡಿ. ಅಂದು ವೈದ್ಯಕೀಯ ಸೌಲಭ್ಯಗಳ ಕೊರತೆಯಿತ್ತು. ಇಂದು ಭಾರತ ಹಾಲಿನ ಉತ್ಪಾದನೆಯಲ್ಲಿ ಪ್ರಥಮ, ತಂತ್ರಜ್ಞಾನ ಮತ್ತು ರಕ್ಷಣಾ ಪಡೆಯಲ್ಲಿ ಜಗತ್ತಿನ ಮುಂಚೂಣಿಯಲ್ಲಿದೆ. ದೇಶದ ಈ ಸಾಧನೆಗಳ ಬಗ್ಗೆ ಮಕ್ಕಳಿಗೆ ತಿಳಿಸಿ ಹೆಮ್ಮೆ ಮೂಡಿಸಿ,” ಎಂದು ತಿಳಿಸಿದರು.
ಶ್ರೀಶೈಲೇಶ್ವರ ವಿದ್ಯಾಕೇಂದ್ರ ಸಂಡೂರು ಆಡಳಿತಾಧಿಕಾರಿ ಕುಮಾರ್ ಎಸ್ ನಾನಾವಟೆ ಅವರು ಪ್ರಾಸ್ತಾವಿಕ ನುಡಿಗಳನ್ನಾಡಿದರು. ರಾಮರಾಜ್ಯ ಕಲಾ ಮೇಳದ ಅಧ್ಯಕ್ಷ ಶ್ರೀಕೃಷ್ಣ ಸಂಪಗಾಂವಕರ ಅವರು ವಿಶೇಷ ಆಹ್ವಾನಿತರ ಪರಿಚಯದೊಂದಿಗೆ ಸ್ವಾಗತಿಸಿದರು.
ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಪಾಲಕರು ಅನೇಕ ಪ್ರಶ್ನೆಗಳನ್ನು ಕೇಳಿದರು,ಇದಕ್ಕೆ ಮೇಜರ್ ಸಿ ಎಸ್ ಆನಂದ ಇವರು ಸಮರ್ಪಕ ಉತ್ತರ ನೀಡಿದರು. ನಂತರ ಕೆಲವು ಪಾಲಕರು ತಮ್ಮ ಅನಿಸಿಕೆಗಳನ್ನು ಹಂಚಿಕೊಂಡರು.
ಈ ಕಾರ್ಯಕ್ರಮದಲ್ಲಿ ಮಾಜಿ ಸೈನಿಕ ಶಿವನಗೌಡ ಚನ್ನಪ್ಪಗೌಡ್ರು ಬಿರಾದಾರ ಮತ್ತು ಲಕ್ಷ್ಮಣ ಗಂಗಪ್ಪ ಪತ್ತಾರ ಅವರು ಮೇಜರ್ ಆನಂದ ಅವರಿಗೆ ಶಾಲು ಹೊದಿಸಿ, ಸ್ಮರಣಿಕೆ ನೀಡಿ ಸನ್ಮಾನಿಸಿ ಗೌರವಿಸಿದರು.
ಈ ಸಂದರ್ಭದಲ್ಲಿ ಶಿಬಿರದ ಹಳೆಯ ವಿದ್ಯಾರ್ಥಿನಿಯಾದ ಕಾವ್ಯ ಬೆಳ್ಳುಂಡಗಿ ಅವರು 2026 ಎಸ್.ಎಸ್.ಎಲ್.ಸಿ ಪರೀಕ್ಷೆಯಲ್ಲಿ 625ಕ್ಕೆ 603 ಅಂಕಗಳನ್ನು ಪಡೆದು ಶೇ. 96.48 ಶಾಲೆಗೆ ಪ್ರಥಮ ಸ್ಥಾನವನ್ನು ಪಡೆಯುವ ಮೂಲಕ ಶಿಬಿರಕ್ಕೆ ಕೀರ್ತಿ ತಂದಿದ್ದಕ್ಕಾಗಿ, ಮೇಜರ್ ಆನಂದ ಮತ್ತು ರಾಮರಾಜ್ಯ ಕಲಾ ಮೇಳದ ಅಧ್ಯಕ್ಷ ಶ್ರೀಕೃಷ್ಣ ಸಂಪಗಾಂವಕರ ಹಾಗೂ ಶ್ರೀಶೈಲೇಶ್ವರ ವಿದ್ಯಾಕೇಂದ್ರದ ಆಡಳಿತಾಧಿಕಾರಿ ಕುಮಾರ್ ಎಸ್ ನಾನಾವಟೆ ಅವರು ಸನ್ಮಾನಿಸಿ ಆಶೀರ್ವದಿಸಿದರು.
ಈ ಸಂದರ್ಭದಲ್ಲಿ ಆಶ್ರಮದ ನಿವಾಸಿಗಳಾದ ವಿದ್ಯಾ ತಾಯಿ, ಜ್ಞಾನಮಾಲ, ಕ್ಷಮಾಶಾಂತಿ, ಶ್ರೀನಿವಾಸ ಕುಲಕರ್ಣಿ, ಡೊಮನಾಳ ಗ್ರಾಮದ ಶಿಕ್ಷಕರಾದ ಪ್ರಕಾಶ ಪಾಟೀಲ್, ಸಂಡೂರಿನ ಶಿಕ್ಷಕ ಅಶೋಕ ಜಿ ಎಂ, ವೀರೇಂದ್ರ ಕುಮಾರ್ ಸೇರಿದಂತೆ ಇನ್ನಿತರ ಸಹ ಶಿಕ್ಷಕ/ಶಿಕ್ಷಕಿಯರು ಹಾಗೂ ನೂರಾರು ಪಾಲಕರು ಉಪಸ್ಥಿತರಿದ್ದರು.