Home ಜಿಲ್ಲೆ ಕಾಂಗ್ರೆಸ್ ಪಕ್ಷವೆಂಬುದು ಅನುಭವ ಮಂಟಪ:ಎಂಬಿಪಿ

ಕಾಂಗ್ರೆಸ್ ಪಕ್ಷವೆಂಬುದು ಅನುಭವ ಮಂಟಪ:ಎಂಬಿಪಿ

ವಿಜಯಪುರ, ಮೇ. 8: ಕಾಂಗ್ರೆಸ್ ಪಕ್ಷವೆಂಬುದು ಅನುಭವ ಮಂಟಪ. ಈ ಅನುಭವ ಮಂಟಪದಲ್ಲಿ ಎಲ್ಲ ಜಾತಿ-ಜನಾಂಗಗಳಿಗೆ ಸಮಸ್ಥಾನ. ಆ ಸಾಮಾಜಿಕ ಹಿನ್ನಲೆಯನ್ನು ಅನುಸರಿಸಿ ಬಹಳಷ್ಟು ಹಿಂದುಳಿದ ಸಮಾಜಗಳು ಇಂದು ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಗೊಳ್ಳುತ್ತಿದ್ದಾರೆ. ಈ ಕಾರ್ಯ ಮುಂದುವರೆದಿದ್ದು, ಮುಂದಿನ ದಿನಗಳಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಸಮಾಜಗಳು ಕಾಂಗ್ರೆಸ್ ಪಕ್ಷದ ತೆಕ್ಕೆಗೆ ಬರಲಿವೆ ಎಂದು ಕೈಗಾರಿಕೆ, ಮೂಲಸೌಲಭ್ಯ ಅಭಿವೃದ್ಧಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಎಂ. ಬಿ. ಪಾಟೀಲ ಹೇಳಿದ್ದಾರೆ.
ಗುರುವಾರ ವಿಜಯಪುರ ನಗರದ ಗೃಹ ಕಚೇರಿಯಲ್ಲಿ ತಿಕೋಟಾ ಪಟ್ಟಣದ ತಳವಾರ ಸಮುದಾಯದ ನಾನಾ ಮುಖಂಡರನ್ನು ಕಾಂಗ್ರೆಸ್ಸಿಗೆ ಬರಮಾಡಿಕೊಂಡು ಅವರು ಮಾತನಾಡಿದರು.
ಮತಕ್ಷೇತ್ರದಲ್ಲಿ ಕೈಗೊಳ್ಳಲಾದ ಅಭಿವೃದ್ಧಿ ಯೋಜನೆಗಳು ಸಕಲ ಸಮುದಾಯಗಳ ಮೆಚ್ಚುಗೆಗೆ ಪಾತ್ರವಾಗಿದ್ದು, ತಿಕೋಟಾ ತಳವಾರ ಸಮುದಾಯದ ಪ್ರಮುಖ ಮುಖಂಡರು ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಯಾಗಿರುವುದು ಇದಕ್ಕೆ ಸಾಕ್ಷಿಯಾಗಿದೆ. ಬಬಲೇಶ್ವರ ಮತಕ್ಷೇತ್ರದಲ್ಲಿ ಇಂದು ರಾಜಕೀಯ ಚಿತ್ರಣವೇ ಬದಲಾಗಿದೆ. ನುಡಿದಂತೆ ನಡೆಯುವ ನಮ್ಮ ಗ್ಯಾರಂಟಿ ಸರಕಾರದ ಜನಪರ ಆಡಳಿತಕ್ಕೆ ಮನಸೋತು, ಬಿಜೆಪಿಯ ಪ್ರಮುಖರು, ಕಾರ್ಯಕರ್ತರು ತಮ್ಮ ಪಕ್ಷಕ್ಕೆ ಗುಡ್ ಬೈ ಹೇಳಿ ಕಾಂಗ್ರೆಸ್ ಗೆ ಜೈ ಎಂದಿದ್ದಾರೆ. ನಮ್ಮ ಅಭಿವೃದ್ಧಿಯ ಹಾದಿ ಮತ್ತು ಗಟ್ಟಿಯಾದ ಸಿದ್ಧಾಂತವನ್ನು ನಂಬಿ ಬಂದ ಈ ಎಲ್ಲಾ ನಾಯಕರನ್ನು ಆತ್ಮೀಯವಾಗಿ ಸ್ವಾಗತಿಸುತ್ತೇನೆ. ಅವರ ಸೇರ್ಪಡೆಯಿಂದ ಕಾಂಗ್ರೆಸ್ ಪಕ್ಷಕ್ಕೆ ಮತ್ತಷ್ಡು ಬಲ ಬಂದಿದೆ. ಮುಂಬರುವ ದಿನಗಳಲ್ಲಿ ಅವರ ಬೇಡಿಕೆಗಳಿಗೆ ಸ್ಪಂದಿಸಲಾಗುವುದು ಎಂದು ಸಚಿವರು ತಿಳಿಸಿದರು.
ಈ ಸಂದರ್ಭದಲ್ಲಿ ಮುಖಂಡರಾದ ಸುರೇಶ ತೊರವಿ, ಎಚ್. ಎಲ್. ತಳವಾರ, ಪರಶುರಾಮ ಕೋಳಿ, ಗಣಪತಿ ತೋರವಿ, ಅಪ್ಪಸಾಹೇಬ ಡ್ಯಾಬೇರಿ, ದಯಾನಂದ ಶಿರಹಟ್ಟಿ ಪ್ರಕಾಶ ಹಾಲಳ್ಳಿ, ಭೀಮು ಹಾಲಳ್ಳಿ, ರಮೇಶ ಗುಡದಿನ್ನಿ, ವಿಲಾಸ ಮಾಳಿ, ನಾಗಪ್ಪ ಮಾಳಿ, ಶಾಂತಾಭಾಯಿ ತಳವಾರ, ಗೀತಾ ತೋರವ, ಪುಷ್ಪಾ ತೋರವಿ, ಮಂಗಲಾ ತಳವಾರ, ಮನಿಷಾ ತಳವಾರ, ಕವಿತಾ ಹಾಲಳ್ಳಿ ಸೇರಿದಂತೆ ನೂರಾರು ಕಾರ್ಯಕರ್ತರು ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಯಾದರು.
ಈ ವೇಳೆ ಮುಖಂಡರಾದ ಬಿ. ಜಿ. ವಿಭೂತಿ, ಜೆ. ಎಂ. ಪಾಟೀಲ, ಮಮ್ಮು ಮುಜಾವರ, ಬಾಪು ಚೌಧರಿ, ರಾಜೂಗೌಡ ಪಾಟೀಲ, ಬಿ. ಎಲ್. ನಾಟೀಕಾರ ಮುಂತಾದವರು ಉಪಸ್ಥಿತರಿದ್ದರು.