
ಸಂಜೆವಾಣಿ ವಾರ್ತೆ,
ವಿಜಯಪುರ,ಜು.೬:ಕರ್ನಾಟಕದಲ್ಲಿ ದ್ವಿಭಾಷಾ ಶಿಕ್ಷಣ ನೀತಿ ಜಾರಿಗೆ ತರುವಂತೆ ಒತ್ತಾಯಿಸಿ ಎಚ್. ಶಿವರಾಮೇಗೌಡರ ಕರ್ನಾಟಕ ರಕ್ಷಣಾ ವೇದಿಕೆ ಜಿಲ್ಲಾಧ್ಯಕ್ಷ ಶೇಷರಾವ ಮಾನೆ ನೇತೃತ್ವದ ಕರವೇ ಜಿಲ್ಲಾ ಪದಾಧಿಕಾರಿಗಳು ಜಿಲ್ಲಾಧಿಕಾರಿಗಳ ಕಚೇರಿ ಮುಂದೆ ಪ್ರತಿಭಟನೆ ನಡೆಸಿ ಶನಿವಾರ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಜಿಲ್ಲಾಧಿಕಾರಿಗಳ ಮೂಲಕ ಮನವಿ ಸಲ್ಲಿಸಿದರು.
ಈ ವೇಳೆ ಮಾತನಾಡಿದ ಕರವೇ ಜಿಲ್ಲಾಧ್ಯಕ್ಷ ಶೇಷರಾವ ಮಾನೆ, ರಾಜ್ಯದ ಭಾಷೆಯಲ್ಲಿ ಹೆಚ್ಚಿನ ಮಕ್ಕಳು ಅನುತ್ತೀರ್ಣರಾಗಿರುವುದು ದೃಢವಾಗಿದೆ. ಬಿಜೆಪಿ ಆಡಳಿತವಿರುವ ಮಹಾರಾಷ್ಟçದಲ್ಲಿ ದ್ವಿಭಾಷಾ ನೀತಿ ಜಾರಿಯಾಗಿದೆ. ತ್ರಿಭಾಷಾ ನೀತಿಗೆ ಬಾರಿ ವಿರೋಧ ವ್ಯಕ್ತವಾದ ಹಿನ್ನಲೆಯಲ್ಲಿ ಹೋರಾಟಗಾರರಿಗೆ ಮಣಿದು ಅಲ್ಲಿನ ಸರಕಾರ ತ್ರಿಭಾಷಾ ನೀತಿಯನ್ನು ಕೈಬಿಟ್ಟಿದೆ. ಈ ಹಿನ್ನಲೆಯಲ್ಲಿ ನಮ್ಮ ರಾಜ್ಯ ಸರಕಾರ ಕೂಡಾ ತ್ರಿಭಾಷಾ ನೀತಿಯನ್ನು ಕೈಬಿಟ್ಟು ದ್ವಿಭಾಷಾ ನೀತಿ ಜಾರಿಗೊಳಿಸಬೆಕು ಎಂದು ಒತ್ತಾಯಿಸಿದರು. ಕರ್ನಾಟಕ ಶಿಕ್ಷಣ ವ್ಯವಸ್ಥೆ ರಾಜ್ಯದ ಭಾಷಿಕ ಅಸ್ಮಿತೆಯನ್ನು ಗೌರವಿಸುವ ವಿದ್ಯಾರ್ಥಿಗಳ ಶೈಕ್ಷಣಿಕ ಯಶಸ್ಸನ್ನು ಖಾತ್ರಿ ಪಡಿಸುವ ಮತ್ತು ಜಾಗತಿಕ ಸ್ಪರ್ಧೆಗೆ ಸಿದ್ದವಾಗಿರುವಂತಹ ಒಂದು ವ್ಯವಸ್ಥೆಯಾಗಬೇಕು. ತ್ರಿಭಾಷಾ ನೀತಿಯಿಂದ ಕರ್ನಾಟಕದ ವಿದ್ಯಾರ್ಥಿಗಳಿಗೆ ಉಂಟಾಗುತ್ತಿರುವ ಅನೇಕ ಅನಗತ್ಯ ಒತ್ತಡ ತೊಡೆದು ಹಾಕಿ ತಮಿಳುನಾಡು ಮತ್ತು ಮಹಾರಾಷ್ಟçದಂತಹ ರಾಜ್ಯಗಳ ದ್ವಿಭಾಷಾ ನೀತಿ ಅನುಸರಿಸುವ ಮೂಲಕ ಕರ್ನಾಟಕ ತನ್ನ ಭಾಷಿಕ ಗುರುತನ್ನು ರಕ್ಷಿಸಬೇಕು ಎಂದರು.
ತಮಿಳುನಾಡು ಮತ್ತು ಮಹಾರಾಷ್ಟç ರಾಜ್ಯದಲ್ಲಿ ತ್ರಿಭಾಷಾ ನೀತಿಗೆ ಭಾರಿ ವಿರೋಧ ವ್ಯಕ್ತವಾದ ಹಿನ್ನಲೆಯಲ್ಲಿ ಹೋರಾಟಗಾರರಿಗೆ ಮಣಿದು ಅಲ್ಲಿನ ಸರಕಾರಗಳು ತ್ರಿಭಾಷಾ ನೀತಿಯನ್ನು ಕೈ ಬಿಟ್ಟಿದೆ. ನಮ್ಮ ರಾಜ್ಯ ಸರಕಾರ ಕೂಡಾ ತ್ರಿಭಾಷಾ ನೀತಿಯನ್ನು ಕೈಬಿಟ್ಟು ದ್ವಿಬಾಷಾ ನೀತಿ ಜಾರಿಗೊಳಿಸಬೇಕು. ರಾಜ್ಯದಲ್ಲಿರುವ ವಿದ್ಯಾರ್ಥಿಗಳ ಹಿತದೃಷ್ಟಿಯಿಂದ ದ್ವಿಭಾಷಾ ನೀತಿ ಜಾರಿಗೊಳಿಸಬೆಕು. ಈ ನಿಟ್ಟಿನಲ್ಲಿ ತಕ್ಷಣದ ಕ್ರಮ ಕೈಗೊಳ್ಳಬೇಕು ಎಂದು ಪ್ರತಿಭಟನೆಕಾರರು ಒತ್ತಾಯಿಸಿದರು.
ಇದೇ ಸಂದರ್ಭದಲ್ಲಿ ಸಾಧಿಕ ಶೇಖ, ಮೈನು ವಾಲಿಕಾರ, ಭಾರತಿ ಟಂಕಸಾಲಿ, ಗುರುರಾಜ ಪಂಚಾಳ, ಕೆ.ಕೆ. ಬನ್ನೆಟ್ಟಿ, ಸಂತೋಷ ಕವಲಗಿ, ವಸಂತರಾವ ಕುಲಕರ್ಣಿ, ಬಾಬು ಲಮಾಣಿ, ಎಸ್.ಆರ್. ಹಾದಿಮನಿ, ಎಸ್.ಆರ್. ನಾಯ್ಕೋಡಿ, ಕಾಂತು ಕಾಂಬಳೆ, ಅರ್ಜುನ ಬಳಗಾನೂರ, ಜಯಶ್ರೀ ನಂದಿಕೋಲ, ಮಶಾಕ ವಾಲಿಕಾರ, ಜೆ.ಕೆ. ಮನಿಯಾರ, ಶಶಿಕಾಂತ ಯಂಭತ್ನಾಳ, ಅಫಾನ ಶೇಖ, ಸೈಬಾಸ ಜಹಾಗೀರದಾರ, ಅನ್ವರ ಪಟೇಲ, ಖೈಪ ಖಲಿಫಾ ಮತ್ತಿತರರು ಉಪಸ್ಥಿತರಿದ್ದರು.