Home ಜಿಲ್ಲೆ ತುಮಕೂರು ಪರಿಸರ ರಕ್ಷಣೆ ಪ್ರತಿಯೊಬ್ಬರ ಹೊಣೆ

ಪರಿಸರ ರಕ್ಷಣೆ ಪ್ರತಿಯೊಬ್ಬರ ಹೊಣೆ

ತುಮಕೂರು, ಅ. ೧೦- ತುಮಕೂರು ಮಹಾನಗರ ಪಾಲಿಕೆ ಹಾಗೂ ಪರಿವರ್ತನಾ ಕಲಾ ಮತ್ತು ಕ್ರೀಡಾ ಯುವಕರ ಸಂಘದ ಸಹಯೋಗದಲ್ಲಿ ಅಕ್ಟೋಬರ್ ೨೦೨೬ರ “ಸ್ವಚ್ಛ ಸಂಕಲ್ಪ ಮಾಸ” ಅಭಿಯಾನದ ಪ್ರಯುಕ್ತ ನಗರದ ಎನ್.ಆರ್. ಕಾಲೋನಿಯಲ್ಲಿ ಸ್ವಚ್ಛತಾ ಜಾಗೃತಿ ಕಾರ್ಯಕ್ರಮ ಹಾಗೂ ಜಾಥಾ ಆಯೋಜಿಸಲಾಗಿತ್ತು.


ಈ ಸಂದರ್ಭದಲ್ಲಿ ಮಾತನಾಡಿದ ಅಧ್ಯಕ್ಷ ಕೃಷ್ಣ, ನಮ್ಮ ನಗರದ ನೈರ್ಮಲ್ಯ ಮತ್ತು ಸೌಂದರ್ಯವನ್ನು ಕಾಪಾಡುವುದು ಪ್ರತಿಯೊಬ್ಬ ನಾಗರಿಕನ ಆದ್ಯ ಕರ್ತವ್ಯವಾಗಿದೆ. ಮಹಾನಗರ ಪಾಲಿಕೆಯೊಂದಿಗೆ ಕೈಜೋಡಿಸಿ ಆಯೋಜಿಸಿರುವ ಈ ’ಸ್ವಚ್ಛ ಸಂಕಲ್ಪ ಮಾಸ’ ಅಭಿಯಾನವು ನಮ್ಮ ಎನ್.ಆರ್. ಕಾಲೋನಿ ಹಾಗೂ ಇಡೀ ತುಮಕೂರು ನಗರವನ್ನು ಸ್ವಚ್ಛವಾಗಿಡಲು ಸಹಕಾರಿಯಾಗಲಿದೆ. ಪ್ರತಿಯೊಬ್ಬರೂ ತಮ್ಮ ಮನೆ ಹಾಗೂ ಸುತ್ತಮುತ್ತಲಿನ ಪರಿಸರವನ್ನು ಸ್ವಚ್ಛವಾಗಿಟ್ಟುಕೊಂಡು, ಪ್ಲಾಸ್ಟಿಕ್ ಮುಕ್ತ ನಗರವನ್ನಾಗಿ ಮಾಡಲು ಸಹಕರಿಸಬೇಕು ಎಂದು ಕೋರಿದರು.


ಸಂಘದ ಕಾರ್ಯದರ್ಶಿ ಮೋಹನ್ ಟಿ. ಆರ್. ಮಾತನಾಡಿ, ಸ್ವಚ್ಛತೆಯು ಕೇವಲ ಒಂದು ದಿನದ ಕಾರ್ಯಕ್ರಮವಾಗದೇ ನಮ್ಮ ದೈನಂದಿನ ಜೀವನದ ಭಾಗವಾಗಬೇಕು. ಮನೆಗಳಲ್ಲಿ ಉತ್ಪತ್ತಿಯಾಗುವ ಹಸಿ ಕಸ ಮತ್ತು ಒಣ ಕಸವನ್ನು ಪ್ರತ್ಯೇಕಿಸಿ ಪಾಲಿಕೆಯ ವಾಹನಗಳಿಗೆ ನೀಡುವುದರ ಮೂಲಕ ನೈರ್ಮಲ್ಯ ಕಾಪಾಡಲು ನೆರವಾಗಬೇಕು. ಯುವಜನರು ಮತ್ತು ಸಾರ್ವಜನಿಕರು ಈ ನೈರ್ಮಲ್ಯ ಅಭಿಯಾನದಲ್ಲಿ ಸಕ್ರಿಯವಾಗಿ ಭಾಗವಹಿಸಿ, ತುಮಕೂರು ನಗರವನ್ನು ಮಾದರಿ ಸ್ವಚ್ಛ ನಗರವನ್ನಾಗಿ ಮಾಡಲು ಶ್ರಮಿಸೋಣ ಎಂದರು.


ಸಾರ್ವಜನಿಕರಿಗೆ ಸ್ವಚ್ಛತೆಯ ಮಹತ್ವದ ಕುರಿತು ಅರಿವು ಮೂಡಿಸಲಾಯಿತು. ಪರಿಸರ ನೈರ್ಮಲ್ಯ ಕಾಪಾಡುವುದು, ಹಸಿ ಮತ್ತು ಒಣ ಕಸವನ್ನು ವಿಂಗಡಿಸಿ ಪಾಲಿಕೆಯ ಕಸ ಸಂಗ್ರಹಣಾ ವಾಹನಗಳಿಗೆ ನೀಡುವುದು ಹಾಗೂ ಪ್ಲಾಸ್ಟಿಕ್ ಬಳಕೆಯನ್ನು ತಡೆಯುವ ಕುರಿತು ಸಾರ್ವಜನಿಕರಿಗೆ ಜಾಗೃತಿ ಮೂಡಿಸಲಾಯಿತು.


ಈ ಸಂದರ್ಭದಲ್ಲಿ ಮಹಾನಗರ ಪಾಲಿಕೆಯ ಅಧಿಕಾರಿ ಹೇಮಂತ್, ಸಮುದಾಯ ಸಂಘಟಕರುಗಳಾದ ಅನುಪ್ರಿಯ, ಚಂದ್ರಿಕಾ, ಸುಮಾ, ಗಾಯತ್ರಿ, ಲಕ್ಷ್ಮೀ, ದೀಪಿಕಾ ಪರಿವರ್ತನಾ ಕಲಾ ಮತ್ತು ಕ್ರೀಡಾ ಯುವಕರ ಸಂಘದ ಅಧ್ಯಕ್ಷ ಕೃಷ್ಣ, ಕಾರ್ಯದರ್ಶಿ ಮೋಹನ್ ಟಿ ಆರ್., ಉಪಾಧ್ಯಕ್ಷ ಸಿ. ಮೋಹನ್, ಸಾವಿತ್ರಿ ಬಾಪುಲೆ ಮಹಿಳಾ ಸಂಘಟನಾ ಅಧ್ಯಕ್ಷೆ ಅನುಪಮ, ನಗರದ ಮುಖಂಡರಾದ ಕಿರಣ್‌ಕುಮಾರ್ ಮತ್ತಿತರರು ಉಪಸ್ಥಿತರಿದ್ದರು.