Home ಜಿಲ್ಲೆ ಕಲಬುರಗಿ ಧೂಮಪಾನದಿಂದ ದೈಹಿಕ, ಮಾನಸಿಕ ಅನಾರೋಗ್ಯ

ಧೂಮಪಾನದಿಂದ ದೈಹಿಕ, ಮಾನಸಿಕ ಅನಾರೋಗ್ಯ

ಕಲಬುರಗಿ:ಮಾ.11: ನಮ್ಮ ದೇಶದ ಒಟ್ಟು ಜನಸಂಖ್ಯೆಯಲ್ಲಿ ಅರ್ಧದಷ್ಟು ಯುವ ಶಕ್ತಿಯಿದೆ. ರಾಷ್ಟ್ರ ಅಭಿವೃದ್ಧಿಯಲ್ಲಿ ಸದೃಢ ಮಾನವ ಸಂಪನ್ಮೂಲ ತುಂಬಾ ಅಗತ್ಯವಾಗಿದೆ. ಅದರಲ್ಲಿಯೂ ಯುವಕರು ರಾಷ್ಟ್ರದ ಶಕ್ತಿಯಾಗಿದ್ದಾರೆ. ಆದರೆ ನಮ್ಮ ಯುವಕರು ವಿವಿಧ ಕಾರಣಗಳಿಂದ ಧೂಮಪಾನ ವ್ಯಸನಿಗಳಾಗಿ, ಅದಕ್ಕೆ ಬಲಿಯಾಗುತ್ತಿರುವುದು ವಿಷಾದನೀಯ ಸಂಗತಿಯಾಗಿದೆ. ಧೂಮಪಾನ ಸೇವನೆಯಿಂದ ವ್ಯಕ್ತಿಯ ದೈಹಿಕ ಮತ್ತು ಮಾನಸಿಕದ ಮೇಲೆ ದುಷ್ಪರಿಣಾಮವಾಗುತ್ತದೆ ಎಂದು ವೈದ್ಯಾಧಿಕಾರಿ ಡಾ.ಅನುಪಮಾ ಎಸ್.ಕೇಶ್ವಾರ ಹೇಳಿದರು.
ನಗರದ ಶೇಖರೋಜಾದಲ್ಲಿರುವ ಶಹಾಬಜಾರ ನಗರ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ‘ಬಸವೇಶ್ವರ ಸಮಾಜ ಸೇವಾ ಬಳಗ’ದ ವತಿಯಿಂದ ಬುಧವಾರ ಜರುಗಿದ ‘ರಾಷ್ಟ್ರೀಯ ಧೂಮಪಾನ ನಿಷೇಧ ದಿನಾಚರಣೆ’ಯಲ್ಲಿ ಅವರು ಮಾತನಾಡುತ್ತಿದ್ದರು.
ತಂಬಾಕು ಒಳಗೊಂಡ ಬೀಡಿ, ಸಿಗರೇಟ್ ಹಾಗೂ ಗುಟಕಾ ಸೇವನೆಯಿಂದ ಸೇವನೆಯಿಂದ ಕ್ಯಾನ್ಸರ್ ರೋಗ ಉಂಟಾಗುತ್ತದೆ. ಜೊತೆಗೆ ಅನ್ನನಾಳಕ್ಕೆ ಆಸಿಡ್ ಸುರಿದು, ಹೊಟ್ಟೆ ನೋವು, ಗಂಟಲು ಕ್ಯಾನ್ಸರ್, ಪಾರ್ಕಿನಸನ್ ರೋಗ, ನಪುಂಸತತ್ವದಂತಹ ರೋಗಗಳು ಉಂಟಾಗುತ್ತವೆ. ಗುಟಕಾ ಸೇವಿಸುವುದರಿಂದ ಬಾಯಿಯ ಲೋಳೆಪರೆಯು ಗಡುಸಾಗಿ, ಬಾಯಿಯ ಚಟುವಟಿಕೆಗಳಿಗೆ ಅಡ್ಡಿ ಉಂಟಾಗಿ, ಕೊನೆಗೆ ಅದರ ಚಟುವಟಿಕೆ ಸ್ಥಗಿತಗೊಳಿಸುತ್ತದೆ. ಇದರಲ್ಲಿರುವ ಮೆಂಥೋಲ್ ಅಂಶ ಬಾಯಿಯ ಕ್ಯಾನ್ಸರ್‍ಗೆ ಕಾರಣವಾಗುತ್ತದೆ. ಅನ್ನ ನಾಳದಲ್ಲಿ ಹುಣ್ಣಾಗುವುದು, ಆಹಾರ ಸೇವಿಸಿದರೆ ವಾಂತಿಯಾಗುವುದು ಸೇರಿದಂತೆ ಅನೇಕ ಸಮಸ್ಯೆಗಳು ಉಂಟಾಗುತ್ತವೆ. ಆದ್ದರಿಂದ ತಂಬಾಕು ಸೇವನೆಯಿಂದ ದೂರವಿರಬೇಕು ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಬಳಗದ ಅಧ್ಯಕ್ಷ ಹಾಗೂ ಉಪನ್ಯಾಸಕ ಎಚ್.ಬಿ.ಪಾಟೀಲ, ಸಮಾಜ ಸೇವಕ ಶಿವಯೋಗೆಪ್ಪಾ ಎಸ್.ಬಿರಾದಾರ, ಸಿಬ್ಬಂದಿಗಳಾದ ಜಗನ್ನಾಥ ಗುತ್ತೇದಾರ, ಗುರುರಾಜ ಕೈನುರ, ಸಂಗಮ್ಮ ಅತನೂರ, ನಾಗೇಶ್ವರಿ ಮುಗಳಿವಾಡಿ, ಚಂದಮ್ಮ ಮರಾಠಾ, ಚಂದ್ರಕಲಾ ಮಠಪತಿ, ಅರ್ಚನಾ ಸಿಂಗೆ, ಲಕ್ಷ್ಮೀ ಮೈಲಾರಿ, ಮಂಗಲಾ ಚಂದಾಪುರೆ, ರೇಷ್ಮಾ ನಕ್ಕುಂದಿ, ಶ್ರೀದೇವಿ ಸಾಗರ, ಸೇವಕಿ ನಾಗಮ್ಮ ಚಿಂಚೋಳಿ ಸೇರಿದಂತೆ ಇನ್ನಿತರರು ಇದ್ದರು.