
ಕೆಂಗೇರಿ,ಏ೧೮:ಹಲವು ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳಿಗೆ ತಮ್ಮ ಪಂಚಾಯಿತಿ ವ್ಯಾಪ್ತಿಯಲ್ಲಿ ಬರುವ ಗ್ರಾಮಗಳೆಷ್ಟು, ಎಷ್ಟು ಅಭಿವೃದ್ಧಿ ಹೊಂದಿದೆ,ಇರುವ ಸಮಸ್ಯೆಗಳೇನು ಎಂಬುದರ ಅರಿವು ಇರುವುದಿಲ್ಲ, ಕೇವಲ ಇ-ಖಾತೆ ಅದರಿಂದ ಬರುವ ಆದಾಯಗಳಿಗೆ ಸೀಮಿತರಾಗಿದ್ದಾರೆ ಎಂದು ಜನಪ್ರತಿನಿಧಿಗಳು ಹಾಗೂ ಮುಖಂಡರು ಆರೋಪಿಸಿದರು.
ನಗರದ ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಶಾಸಕ ಎಸ್.ಟಿ.ಸೋಮಶೇಖರ್ ನೇತೃತ್ವದಲ್ಲಿ ನೀರಿನ ಸಮಸ್ಯೆ ಹಾಗೂ ಕುಂದುಕೊರತೆಗಳ ಬಗ್ಗೆ ವಿವಿಧ ಇಲಾಖೆಗಳ ಅಧಿಕಾರಿಗಳ ಸಮ್ಮುಖದಲ್ಲಿ ನಡೆದ ಸಭೆಯಲ್ಲಿ ಸಮಸ್ಯೆಗಳ ಸುರಿಮಳೆಗೈದ ಮುಖಂಡರು ಜಲಜೀವನ್ ಮಿಷನ್ ಹಳ್ಳ ಹಿಡಿದಿದೆ, ಅರ್ಧಂಬರ್ಧ ಕಾಮಗಾರಿ ಮುಗಿಸಿ ಹಲವೆಡೆ ನೀರಿನ ಸಂಪರ್ಕ ನೀಡದೆ ತೊಂದರೆ ಉಂಟು ಮಾಡುತ್ತಿದ್ದಾರೆ, ತಾವರೆಕೆರೆ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಚರಂಡಿ ಸ್ವಚ್ಛತೆ ಕಾಮಗಾರಿ ಪೂರ್ಣಗೊಳಿಸದೆ ಬಿಲ್ ಪಡೆಯಲಾಗಿದೆ ಎಂದು ದೂರಿದರು.
ನಂತರ ಮಾತನಾಡಿದ ಶಾಸಕ ಎಸ್.ಟಿ.ಸೋಮಶೇಖರ್ ಬಿಸಿಲಿನ ತಾಪಮಾನ ಹೆಚ್ಚಾಗುತ್ತಿದೆ ಕ್ಷೇತ್ರ ವ್ಯಾಪ್ತಿಯಲ್ಲಿ ಕುಡಿಯುವ ನೀರು ಸಮಸ್ಯೆಯಾಗದಂತೆ ಅಗತ್ಯ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳಿ, ಎಲ್ಲೆಲ್ಲಿ ಬೋರ್ ವೆಲ್ ಗಳು ಸಮಸ್ಯೆಯಾಗಿವೆ ಅಂಥವುಗಳನ್ನು ಶೀಘ್ರದಲ್ಲಿ ಸರಿಪಡಿಸಬೇಕು, ಖಾಸಗಿ ಬೋರ್ ವೆಲ್ ಗಳನ್ನು ಬಾಡಿಗೆ ಆಧಾರದ ಮೇಲೆ ಪಡೆದು ಟ್ಯಾಂಕರ್ ಮೂಲಕ ನೀರನ್ನು ಮನೆ ಮನೆಗೆ ತಲುಪಿಸುವ ಕೆಲಸ ಮಾಡಬೇಕೆಂದು ಅಧಿಕಾರಿಗಳಿಗೆ ತಾಕೀತು ಮಾಡಿದರು.
ಮುಖ್ಯ ಕಾರ್ಯನಿರ್ವಹಣಾಧಿಕಾರಿ ಯತೀಶ್, ಬೆಂಗಳೂರು ದಕ್ಷಿಣ ತಾಲ್ಲೂಕು ಇಓ ಎಸ್.ನಾರಾಯಣಾ, ಡಿಎಸ್ ನೋಮೇಶ್ ಕುಮಾರ್ , ಮಾಜಿ ಅಧ್ಯಕ್ಷರಾದ ಕೆಂಪೇಗೌಡ, ಚಿಕ್ಕರಾಜು, ರಾಮಕೃಷ್ಣ, ಅಧ್ಯಕ್ಷರಾದ ವಿನೋದ ನರಸಿಂಹಮೂರ್ತಿ, ಲತಾ ಮಂಜುನಾಥ್, ಬ್ಲಾಕ್ ಅಧ್ಯಕ್ಷ ರೇವಣಸಿದ್ದಪ್ಪ, ಮುಖಂಡರಾದ ತಿಮ್ಮೇಗೌಡ, ಸೋಮಣ್ಣ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.























