
ಪುತ್ತೂರು; ಜಿಲ್ಲೆಯಲ್ಲಿಯೇ ಅತೀ ಹೆಚ್ಚಿನ ಭಕ್ತಾಧಿಗಳ ಸಂಗಮವಾಗುವ ‘ಪುತ್ತೂರ್‍ದ ತೇರ್ ಎಂದೇ ಖ್ಯಾತಿ ಪಡೆದ ಇತಿಹಾಸ ಪ್ರಸಿದ್ದ ಮಹತೋಭಾರ ಪುತ್ತೂರು ಮಹಾಲಿಂಗೇಶ್ವರ ದೇವರ ಬ್ರಹ್ಮರಥೋತ್ಸವವು ಶುಕ್ರವಾರ ರಾತ್ರಿ ಭಕ್ತಿಭಾವಗಳ ಸಂಗಮದೊಂದಿಗೆ ಅತ್ಯಂತ ವೈಭವಯುತವಾಗಿ ನಡೆಯಿತು. ಲಕ್ಷಾಂತರ ಮಂದಿ ಭಕ್ತರು ಬ್ರಹ್ಮರಥೋತ್ಸವದಲ್ಲಿ ಪಾಲ್ಗೊಂಡರು. ‘ಪುತ್ತೂರು ಬೆಡಿ’ ಎಂದೇ ಪ್ರಖ್ಯಾತಿ ಪಡೆದಿರುವ ಸುಡುಮದ್ದು ಪ್ರದರ್ಶನವು ಬಾನಂಗಳದಲ್ಲಿ ಬಣ್ಣ ಬಣ್ಣದ ಚಿತ್ತಾರ ಮೂಡಿಸಿತ್ತು. ಜಾತ್ರೆಯಲ್ಲಿ ಪಾಲ್ಗೊಂಡಿದ್ದ ಲಕ್ಷಾಂತರ ಕಣ್ಣುಗಳಿಗೆ ಈ ಬೆಳಕಿನ ರಂಗು ರಸದೌತಣ ನೀಡಿತು. ಓಂ ಶ್ರೀ ಮಹಾಲಿಂಗೇಶ್ವರ ಎಂಬ ಲಕ್ಷಾಂತರ ಮಂದಿಯ ಜಯಘೋಷ ಮುಗಿಲಾಚೆಗೆ ಮುಟ್ಟಿತು.
ಕುಂಟಾರು ರವೀಶ ತಂತ್ರಿಯವರ ನೇತೃತ್ವದಲ್ಲಿ ನಡೆದ ಬ್ರಹ್ಮರಥೋತ್ಸವದಲ್ಲಿ ಆರಂಭದಲ್ಲಿ ಬ್ರಹ್ಮರಥಕ್ಕೆ ಸೇವೆ ನೀಡಿದ ಭಕ್ತರಿಗೆ ಪ್ರಸಾದ ವಿತರಿಸಲಾಯಿತು.
ಏ.೧೭ರಂದು ಬೆಳಿಗ್ಗೆ ದೇವಸ್ಥಾನದಲ್ಲಿ ಉತ್ಸವ, ಕಟ್ಟೆಪೂಜೆ, ಮಧ್ಯಾಹ್ನ ದರ್ಶನ ಬಲಿ, ಬಟ್ಟಲು ಕಾಣಿಕೆ ನಡೆಯಿತು. ಸಂಜೆ ದೇವರ ಮತ್ತು ಉಳ್ಳಾಲ್ತಿ ಅಮ್ಮನವರ ಉತ್ಸವ ನಡೆಯಿತು. ಬಳಿಕ ಬ್ರಹ್ಮರಥದ ಬಳಿ ಕಾಜುಕುಜುಂಬ ದೈವದ ನುಡಿಗಟ್ಟು ನಡೆದು ದೇವರು ರಥಾರೂಢರಾದರು. ಬಳಿಕ ಪುತ್ತೂರು ಬೆಡಿ ಸುಡುಮದ್ದು ಪ್ರದರ್ಶನ ನಡೆದು ರಾತ್ರಿ ಬ್ರಹ್ಮರಥೋತ್ಸವ ನಡೆಯಿತು. ಬಳಿಕ ಬ್ರಹ್ಮರಥದಿಂದ ಇಳಿದ ದೇವರು ಬಂಗಾರ್ ಕಾಯರ್‌ಕಟ್ಟೆ ಸವಾರಿಯ ಬಳಿಕ ಅಂಕೆತ್ತಿಮಾರ್ ಕಟ್ಟೆಯಲ್ಲಿ ಕಟ್ಟೆ ಪೂಜೆ ಸ್ವೀಕರಿಸಿ ದಂಡ ನಾಯಕ ಉಳ್ಳಾಲ್ತಿ ದೈವಗಳ ಬೀಳ್ಕೊಡುಗೆಯ ಬಳಿಕ ದೇವಳದ ಒಳಗೆ ಪ್ರವೇಶ, ಶಯನ ನಡೆಯಿತು.
ಅಚ್ಚುಕಟ್ಟಿಗೆ ಹೆಸರಾದ ಜಾತ್ರೆ
ಪುತ್ತೂರು ಶಾಸಕ ಅಶೋಕ್ ಕುಮಾರ್ ರೈ, ದೇವಳದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಪಂಜಿಗುಡ್ಡೆ ಈಶ್ವರ ಭಟ್ ಹಾಗೂ ಸಮಿತಿ ಸದಸ್ಯರ ನೇತೃತ್ವದಲ್ಲಿ ಅತ್ಯಂತ ಅಚ್ಚುಕಟ್ಟಿನ ವ್ಯವಸ್ಥೆಯೊಂದಿಗೆ ಪುತ್ತೂರ್‍ದಜಾತ್ರೆ ನಡೆಯಿತು. ದೇವಳದ ಆವರಣ ವಿಶಾಲವಾಗಿ ರೂಪುಗೊಂಡ ಕಾರಣ ಭಕ್ತಾಧಿಗಳಿಗೆ ಯಾವುದೇ ಇಕ್ಕಟ್ಟಿನ ಸಮಸ್ಯೆ ಕಂಡುಬರಲಿಲ್ಲ. ದೇವಳದ ಪುಷ್ಕರಿಣಿ ಭಾಗದಲ್ಲಿದ್ದ ಮನೆಗಳ ತೆರವಿನ ಸಾಕಷ್ಟು ಸ್ಥಳ ಜಾತ್ರೆಯ ವಿಶಾಲತೆಗೆ ಕಾರಣವಾಯಿತು. ವಿಶಾಲವಾದ ವ್ಯವಸ್ಥೆಯ ಹಿನ್ನಲೆಯಲ್ಲಿ ಭಕ್ತಾಧಿಗಳಿಗೆ ನಿಲ್ಲಲು ಅನುಕೂಲ ಮಾಡಿಕೊಡಲಾಗಿತ್ತು. ಜತೆಗೆ ಇಲ್ಲಿನ ವಿಶಾಲವಾದ ಜಾಗದಲ್ಲಿ ಅನ್ನಪ್ರಸಾದ ವಿತರಣೆಗೆ ವ್ಯವಸ್ಥೆ ಮಾಡಲಾಗಿತ್ತು.
ಪೊಲೀಸ್ ಬಂದೋಬಸ್ತು
ಜಾತ್ರೋತ್ಸವವನ್ನು ಯಶಸ್ವಿಗೊಳಿಸುವ ನಿಟ್ಟಿನಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ವ್ಯವಸ್ಥೆ ಮಾಡಲಾಗಿತ್ತು. ವಿವಿಧ ಜಿಲ್ಲೆಗಳ ಪೊಲೀಸರ ಜೊತೆಗೆ ಸಶಸ್ತ್ರ ಮೀಸಲು ಪಡೆ, ಗೃಹ ರಕ್ಷಕ ದಳ ಬಂದೋಬಸ್ತ್ ನಿರತರಾಗಿದ್ದರು. ಅದರೊಂದಿಗೆ ನೂರಾರು ಪೊಲೀಸ್ ಸಿಬ್ಬಂದಿಗಳು ಮಫ್ತಿಯಲ್ಲಿಯೂ ಕಾರ್ಯ ನಿರ್ವಹಿಸುತ್ತಿದ್ದರು. ಹಲವು ಕಡೆಗಳಲ್ಲಿ ಸಿಸಿ ಕ್ಯಾಮರಾ ಅಳವಡಿಸಿ ಕಣ್ಗಾವಲು ನಡೆಸಲಾಗಿತ್ತು. ಪುತ್ತೂರು ಕೆಎಸ್ಸಾರ್ಟಿಸಿ ವತಿಯಿಂದ ಬ್ರಹ್ಮರಥೋತ್ಸವದ ಹಿನ್ನಲೆಯಲ್ಲಿ ಗ್ರಾಮೀಣ ಪ್ರದೇಶಗಳಿಗೆ ಹೆಚ್ಚುವರಿ ಬಸ್ಸಿನ ವ್ಯವಸ್ಥೆಯನ್ನು ಕಲ್ಪಿಸಲಾಗಿತ್ತು.






















