Home ಜಿಲ್ಲೆ ಬೆಂಗಳೂರು ಗುಜರಾತ್‌ನಲ್ಲಿ ಪಟೇಲ್ ಜನ್ಮದಿನಾಚರಣೆ: ಕೋಲಾರ ಕಲಾವಿದರಿಂದ ನಾದಸ್ವರ ವಾದನ

ಗುಜರಾತ್‌ನಲ್ಲಿ ಪಟೇಲ್ ಜನ್ಮದಿನಾಚರಣೆ: ಕೋಲಾರ ಕಲಾವಿದರಿಂದ ನಾದಸ್ವರ ವಾದನ

ಕೋಲಾರ, ನ. ೩ – ಸರ್ದಾರ್ ವಲ್ಲಭಭಾಯಿ ಪಟೇಲ್ ರವರ ೧೫೧ನೇ ಜನ್ಮ ಜಯಂತಿಯ ಅಂಗವಾಗಿ ಭಾರತ ಸರ್ಕಾರ ಮತ್ತು ಗುಜರಾತ್ ಸರ್ಕಾರ ಜಂಟಿಯಾಗಿ ಹಮ್ಮಿಕೊಂಡಿದ್ದ ರಾಷ್ಟ್ರೀಯ ಏಕತಾ ದಿವಸ್ ಕಾರ್ಯಕ್ರಮದ ಪಥಸಂಚಲನದಲ್ಲಿ (ಪರೇಡ್) ಕೋಲಾರ ಜಿಲ್ಲೆಯ ಕಲಾವಿದರು ನಾದಸ್ವರ ವಾದನ ಪ್ರಸ್ತುತಪಡಿಸಿ ಗಮನ ಸೆಳೆದಿದ್ದಾರೆ. ಕೋಲಾರ ಜಿಲ್ಲೆಯ ಕೆಜಿಎಫ್ ತಾಲ್ಲೂಕಿನ ಕಂಗಾನಲ್ಲೂರು ಗ್ರಾಮದ ಗೋವಿಂದಸ್ವಾಮಿ ಹಾಗೂ ಕೋಲಾರ ತಾಲ್ಲೂಕಿನ ಚಲುವನಹಳ್ಳಿ ಗ್ರಾಮದ ಶ್ರೀನಾಥ್ ರವರು ಈ ಅತ್ಯಂತ ಪ್ರತಿಷ್ಠಿತ ಪರೇಡ್‌ನಲ್ಲಿ ನಾದಸ್ವರ ವಾದಿಸುವ ಮೂಲಕ ಜಿಲ್ಲೆಗೆ ಕೀರ್ತಿ ತಂದಿದ್ದಾರೆ.


ಈ ಕಾರ್ಯಕ್ರಮದಲ್ಲಿ ಕರ್ನಾಟಕ ರಾಜ್ಯದಿಂದ ಒಟ್ಟು ೨೦ ಮಂದಿ ಕಲಾವಿದರ ತಂಡ ನಾದಸ್ವರ ವಾದನ ಮಾಡಿದೆ. ಭಾರತದಾದ್ಯಂತ ಆಗಮಿಸಿದ್ದ ಒಟ್ಟು ೧೨೦ ಮಂದಿ ಕಲಾವಿದರು ಶಹನಾಯಿ, ಡೋಲು ಮತ್ತು ನಾದಸ್ವರ ವಾದನಗಳ ಜುಗಲ್ಬಂದಿ ಮೂಲಕ “ಸಾರೆ ಜಹಾನ್ ಸೇ ಅಚ್ಚಾ” ದೇಶಭಕ್ತಿ ಗೀತೆಯನ್ನು ಪ್ರಸ್ತುತಪಡಿಸಿ ನೆರೆದಿದ್ದ ಸಾರ್ವಜನಿಕರ ಅಪಾರ ಮೆಚ್ಚುಗೆಗೆ ಪಾತ್ರರಾದರು. ಈ ದೇಶಪ್ರೇಮದ ಸುಸ್ವರ ವಾದನಕ್ಕೆ ಸಾಕ್ಷಿಯಾದ ರಾಷ್ಟ್ರೀಯ ಏಕತಾ ದಿವಸ್ ಸಮಾರಂಭದಲ್ಲಿ ದೇಶದ ಪ್ರಧಾನ ಮಂತ್ರಿಗಳಾದ ನರೇಂದ್ರ ಮೋದಿ, ಗುಜರಾತ್ ಮುಖ್ಯಮಂತ್ರಿ, ಮುಖಂಡರು ಹಾಗೂ ಗಣ್ಯರು ಉಪಸ್ಥಿತರಿದ್ದರು.