Home ಜಿಲ್ಲೆ ಬೆಂಗಳೂರು ಆಂಧ್ರದ ಬಾಲಕಿಯ ಮೇಲೆ ಭೀಕರ ದಾಳಿ ಬೆಂಗಳೂರಿನಲ್ಲಿ ಚಿಕಿತ್ಸೆ

ಆಂಧ್ರದ ಬಾಲಕಿಯ ಮೇಲೆ ಭೀಕರ ದಾಳಿ ಬೆಂಗಳೂರಿನಲ್ಲಿ ಚಿಕಿತ್ಸೆ

ಬೆಂಗಳೂರು, ನ.೨-ಆಂಧ್ರಪ್ರದೇಶದ ಶಾಲೆಯೊಂದರಲ್ಲಿ ಪ್ರೀತಿಯನ್ನು ನಿರಾಕರಿಸಿದ್ದಕ್ಕೆ ಮರ ಕತ್ತರಿಸುವ ಯಂತ್ರದಿಂದ ನಡೆದ ಭೀಕರ ದಾಳಿಯಲ್ಲಿ ಗಂಭೀರವಾಗಿ ಗಾಯಗೊಂಡಿರುವ ೧೪ ವರ್ಷದ ಬಾಲಕಿಗೆ ನಗರದ ಮಣಿಪಾಲ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಮುಂದುವರಿದಿದೆ. ಬಾಲಕಿಯ ಆರೋಗ್ಯ ಸ್ಥಿತಿ ಇನ್ನೂ ಗಂಭೀರವಾಗಿದ್ದರೂ ಸ್ಥಿರವಾಗಿದೆ ಎಂದು ಆಸ್ಪತ್ರೆಯ ಮೂಲಗಳು ತಿಳಿಸಿವೆ.


ದಾಳಿಯಲ್ಲಿ ಬಾಲಕಿಯ ಮುಖ ಹಾಗೂ ದೇಹದ ವಿವಿಧ ಭಾಗಗಳಿಗೆ ಗಂಭೀರ ಗಾಯಗಳಾಗಿದ್ದು, ಹಲವು ಆಳವಾದ ಗಾಯಗಳಾಗಿವೆ. ತೀವ್ರ ರಕ್ತಸ್ರಾವದಿಂದಾಗಿ ಬಾಲಕಿಯ ಸ್ಥಿತಿ ಅತ್ಯಂತ ಗಂಭೀರವಾಗಿತ್ತು. ಈ ಹಿನ್ನೆಲೆಯಲ್ಲಿ ಬೆಂಗಳೂರಿನ ವೈದ್ಯರು ಸತತ ಸುಮಾರು ೨೦ ಗಂಟೆಗಳ ಕಾಲ ಶಸ್ತ್ರಚಿಕಿತ್ಸೆ ನಡೆಸಿದ್ದಾರೆ. ಗಾಯಗಳಿಗೆ ಹೊಲಿಗೆ ಹಾಕಲು ೧೧೪ ಬಾಕ್ಸ್ ಶಸ್ತ್ರಚಿಕಿತ್ಸಾ ದಾರಗಳನ್ನು ಬಳಸಲಾಗಿದೆ ಎಂದು ವರದಿಯಾಗಿದೆ.


ಬಾಲಕಿಗೆ ಹಲವು ಬಾರಿ ರಕ್ತ ವರ್ಗಾವಣೆ ಮಾಡಲಾಗಿದ್ದು, ಸದ್ಯ ಪೀಡಿಯಾಟ್ರಿಕ್ ಐಸಿಯುನಲ್ಲಿ ವೆಂಟಿಲೇಟರ್ ಬೆಂಬಲದೊಂದಿಗೆ ಚಿಕಿತ್ಸೆ ನೀಡಲಾಗುತ್ತಿದೆ. ಮುಂದಿನ ೪೮ ಗಂಟೆಗಳ ಕಾಲ ವೈದ್ಯರು ಬಾಲಕಿಯ ಆರೋಗ್ಯ ಸ್ಥಿತಿಯನ್ನು ತೀವ್ರವಾಗಿ ನಿಗಾ ವಹಿಸಲಿದ್ದಾರೆ.


ಅಕ್ಟೋಬರ್ ೩೧ರಂದು ಆಂಧ್ರಪ್ರದೇಶದ ರಾಪ್ತಾಡು ಗ್ರಾಮದ ಜಿಲ್ಲಾ ಪರಿಷತ್ ಪ್ರೌಢಶಾಲೆಯಲ್ಲಿ ಈ ಘಟನೆ ನಡೆದಿತ್ತು. ಬಾಲಕಿಯ ಸಂಬಂಧಿಯೇ ಮರ ಕಡಿಯುವ ಯಂತ್ರದಿಂದ ಆಕೆಯ ಮೇಲೆ ಹಲ್ಲೆ ನಡೆಸಿದ್ದ ಎನ್ನಲಾಗಿದೆ. ಈ ವೇಳೆ ದಾಳಿಗೆ ಗುರಿಯಾದ ಬಾಲಕಿ ಸ್ಥಳದಲ್ಲೇ ಮೃತಪಟ್ಟಿದ್ದರೆ, ಆಕೆಯನ್ನು ರಕ್ಷಿಸಲು ಮುಂದಾದ ಮತ್ತೊಬ್ಬ ೧೪ ವರ್ಷದ ಬಾಲಕಿ ಗಂಭೀರವಾಗಿ ಗಾಯಗೊಂಡಿದ್ದರು. ಗಾಯಗೊಂಡ ಬಾಲಕಿಯನ್ನು ಹೆಚ್ಚಿನ ಚಿಕಿತ್ಸೆಗಾಗಿ ಬೆಂಗಳೂರಿಗೆ ಸ್ಥಳಾಂತರಿಸಲಾಗಿತ್ತು.