Home ಜಿಲ್ಲೆ ಬೆಂಗಳೂರು ಕುಖ್ಯಾತ ಮನೆಗಳ್ಳನ ಬಂಧನ ೫೦ ಲಕ್ಷ ಮೌಲ್ಯದ ಮಾಲು ಜಪ್ತಿ

ಕುಖ್ಯಾತ ಮನೆಗಳ್ಳನ ಬಂಧನ ೫೦ ಲಕ್ಷ ಮೌಲ್ಯದ ಮಾಲು ಜಪ್ತಿ

ಬೆಂಗಳೂರು,ಮೇ.೧೨-ಬೀಗ ಹಾಕಿರುವ ಮನೆಗಳನ್ನು ಗುರುತಿಸಿ ಕಳವು ಮಾಡುತ್ತಿದ್ದ ಕುಖ್ಯಾತ ಮನೆಗಳ್ಳನನ್ನು ಬಂಧಿಸುವಲ್ಲಿ ಯಶಸ್ವಿಯಾಗಿರುವ ಕೋಣನಕುಂಟೆ ಪೊಲೀಸರು ೫೦ ಲಕ್ಷ ಮೌಲ್ಯದ ವಜ್ರ,ಚಿನ್ನಾಭರಣಗಳನ್ನು ಜಪ್ತಿ ಮಾಡಿದ್ದಾರೆ

ಮಂಡ್ಯ ಮೂಲದ ಕೋಣನಕುಂಟೆಯ ಹರಿನಗರದ ಮಹೇಶ್ ಗೌಡ ಅಲಿಯಾಸ್ ಶಿವಲಿಂಗೇಗೌಡ(೩೬) ಬಂಧಿತ ಆರೋಪಿಯಾಗಿದ್ದು, ಆತನಿಂದ ೫೦ ಲಕ್ಷ ಮೌಲ್ಯದ ೩೧೮ ಗ್ರಾಂ ಚಿನ್ನ ಮತ್ತು ವಜ್ರ ಆಭರಣಗಳು,೨ ಕೆಜಿ ೪೩೫ ಗ್ರಾಂ ಬೆಳ್ಳಿಯ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ನಗರ ಪೊಲೀಸ್ ಆಯುಕ್ತ ಸೀಮಾಂತ್ ಕುಮಾರ್ ಸಿಂಗ್ ಅವರು ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.

ಕೋಣನಕುಂಟೆಯ ಚುಂಚಘಟ್ಟ ಮುಖ್ಯರಸ್ತೆಯ ಮೈಸೂರು ಬ್ಯಾಂಕ್ ಕಾಲೋನಿಯ ರೇಖಾ ಅವರು ಕಳೆದ ಏ.೧೮ರಂದು ರಂದು ಕುಟುಂಬ ಸಮೇತ ಸ್ವಂತ ಊರಿಗೆ ಹೋಗಿದ್ದು, ಮನೆಯ ಗೇಟ್ ಕೀಯನ್ನು ಸಂಬಂಧಿಕರ ಮನೆಗೆ ಕೊಟ್ಟು ಹೋಗಿದ್ದರು.

ಅದೇ ದಿನ ಸಂಬಂಧಿಕರು ಕರೆ ಮಾಡಿ, ಯಾರೋ ಕಳ್ಳರು ಮನೆಯ ಹಿಂಬಾಗಿಲಿನ ಚಿಲಕವನ್ನು ಹೊಡೆದು, ಮನೆಯೊಳಗೆ ಪ್ರವೇಶಿಸಿ ಕೊಠಡಿಯ ಬೀರುವನ್ನು ಸಹ ಹೊಡೆದಿರುವುದಾಗಿ ತಿಳಿಸಿರುತ್ತಾರೆ.

ರೇಖಾ ಅವರು ಸಂಜೆ ಮನೆಗೆ ಬಂದು ನೋಡಲಾಗಿ ಕೊಠಡಿಯ ಬೀರುವಿನಲ್ಲಿಟ್ಟಿದ್ದ ಚಿನ್ನ ಮತ್ತು ಡೈಮೆಂಡ್ ಆಭರಣಗಳು ಹಾಗೂ ನಗದು ಕಳವು ಮಾಡಲಾಗಿತ್ತು,ಈ ಸಂಬಂಧ ಕೋಣನಕುಂಟೆ ಪೊಲೀಸ್ ಠಾಣೆಯಲ್ಲಿ ದಾಖಲಿಸಿದ ಕನ್ನ ಕಳವು ಪ್ರಕರಣದ ತನಿಖೆಯನ್ನು ವಿವಿಧ ಆಯಾಮಗಳಲ್ಲಿ ಕೈಗೊಂಡು ಖಚಿತ ಮಾಹಿತಿಯನ್ನು ಆಧರಿಸಿ ಮಂಡ್ಯ ಜಿಲ್ಲೆಯ ಮದ್ದೂರು ಬಳಿ ಆರೋಪಿಯನ್ನು ಬಂಧಿಸಲಾಗಿದೆ.
ಆರೋಪಿಯು ವಜ್ರ ಚಿನ್ನಾಭರಣಗಳನ್ನು ಹಾಗೂ ನಗದನ್ನು ಕಳವು ಮಾಡಿರುವುದಾಗಿ ತಪ್ಪೆಪ್ಪಿಕೊಂಡಿದ್ದು, ಆರೋಪಿಯನ್ನು ಸುದೀರ್ಘ ವಿಚಾರಣೆಗೊಳಪಡಿಸಿದಾಗ ಕಳವು ಮಾಡಿದ ಚಿನ್ನಾಭರಣ, ಬೆಳ್ಳಿಯ ವಸ್ತುಗಳನ್ನು ಮಂಡ್ಯ ಜಿಲ್ಲೆಯ ಮದ್ದೂರಿನ ಜ್ಯೂವೆಲ್ಲರಿ ಅಂಗಡಿಗಳಲ್ಲಿ ಕೆಲವು ಚಿನ್ನಾಭರಣಗಳನ್ನು ಅಡಮಾನ ಮತ್ತು ಕೆಲವು ಚಿನ್ನಾಭರಣಗಳನ್ನು ಮಾರಾಟ ಮಾಡಿರುವುದಾಗಿ ತಿಳಿಸಿದ್ದಾನೆ.
ಮದ್ದೂರಿನ ಜ್ಯೂವೆಲ್ಲರಿ ಅಂಗಡಿಗಳಿಂದ ೩೧೮ ಗ್ರಾಂ ಚಿನ್ನ-ಡೈಮೆಂಡ್ ಆಭರಣಗಳು ಹಾಗೂ ೨ ಕೆಜಿ ೪೩೫ ಗ್ರಾಂ ಬೆಳ್ಳಿಯ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ.
ಆರೋಪಿಯ ಬಂಧನದಿಂದ ಕೋಣನಕುಂಟೆ ಠಾಣೆಯ ೫ ಮನೆ ಕಳವು ಪ್ರಕರಣಗಳು ಸೇರಿ ೧೦ ಕನ್ನಗಳವು ಪ್ರಕರಣಗಳು ಪತ್ತೆಯಾಗಿದ್ದು, ಹೆಚ್ಚಿನ ತನಿಖೆಯನ್ನು ಕೈಗೊಳ್ಳಲಾಗಿದೆ ಎಂದು ಕಮೀಷನರ್ ತಿಳಿಸಿದರು.
ನೈರುತ್ಯ ವಿಭಾಗದ ಡಿಸಿಪಿ ಅನಿತಾ ಹದ್ದಣ್ಣವರ್ ಮಾರ್ಗದರ್ಶನದಲ್ಲಿ, ಸುಬ್ರಮಣ್ಯಪುರ ಪೊಲೀಸ್ ಠಾಣೆಯ ಅಧಿಕಾರಿ ಸಿಬ್ಬಂದಿ ಆರೋಪಿಯನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.