
ತುಮಕೂರು, ನ. ೨- ’ಮಾಜಿ ಸಚಿವರು ಹಾಗೂ ಜಿಲ್ಲೆಯ ಹಿರಿಯ ನಾಯಕರಾದ ಜೆ.ಸಿ. ಮಾಧುಸ್ವಾಮಿ ಅವರ ವಿಚಾರವಾಗಿ ನಾನು ಪಕ್ಷದ ವಿರುದ್ಧ ಷಡ್ಯಂತ್ರ ರೂಪಿಸಿ, ಅವರು ಪಕ್ಷ ವಿರೋಧಿ ಚಟುವಟಿಕೆ ನಡೆಸಿದ್ದಾರೆಂದು ವರದಿ ನೀಡಿದ್ದೇನೆ ಎಂಬ ಜಿಲ್ಲಾ ಅಧ್ಯಕ್ಷರಾದ ನನ್ನ ಮೇಲಿನ ಆರೋಪದಲ್ಲಿ ಸತ್ಯಾಂಶವಿಲ್ಲ ಎಂದು ಜಿಲ್ಲಾ ಬಿಜೆಪಿ ಅಧ್ಯಕ್ಷ ಹೆಬ್ಬಾಕ ರವಿಶಂಕರ್ ಸ್ಪಷ್ಟನೆ ನೀಡಿದ್ದಾರೆ.
ಈ ಹಿನ್ನೆಲೆಯಲ್ಲಿ ಕೆಲವು ಪ್ರಮುಖ ವಿಚಾರಗಳನ್ನು ಸಾರ್ವಜನಿಕರ ಹಾಗೂ ಪಕ್ಷದ ಕಾರ್ಯಕರ್ತರ ಗಮನಕ್ಕೆ ತರಲು ಬಯಸುತ್ತೇನೆ. ಮಾಜಿ ಮುಖ್ಯಮಂತ್ರಿ ಹಾಗೂ ಹಿರಿಯ ನಾಯಕರಾದ ಬಿ.ಎಸ್. ಯಡಿಯೂರಪ್ಪ ನವರು ವಿಧಾನ ಪರಿಷತ್ ಸದಸ್ಯರನ್ನಾಗಿ ಮಾಡಿ, ವಿಧಾನ ಪರಿಷತ್ನ ಪ್ರತಿಪಕ್ಷದ ನಾಯಕನ ಸ್ಥಾನಮಾನ ನೀಡುವ ಕುರಿತು ಮಾತನಾಡಿದ್ದರು ಎಂಬುದು ಸತ್ಯ. ಅದಕ್ಕೆ ಪ್ರತಿಯಾಗಿ ಲೋಕಸಭಾ ಚುನಾವಣೆಯಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡು ಪಕ್ಷದ ಅಭ್ಯರ್ಥಿಯ ಗೆಲುವಿಗೆ ಶ್ರಮಿಸುವಂತೆ ಸೂಚಿಸಿದ್ದರು. ಆದರೆ, ಪಕ್ಷದ ಹಿರಿಯ ನಾಯಕರು ನೀಡಿದ ಈ ಜವಾಬ್ದಾರಿಯ ಹಿನ್ನೆಲೆಯಲ್ಲಿ ನಾನು ಜಿಲ್ಲೆಯ ಸಂಘಟನಾತ್ಮಕ ಚಟುವಟಿಕೆಗಳನ್ನು ಗಮನಿಸಿದಾಗ ಕೆಲವು ಗಂಭೀರ ಸಂಗತಿಗಳು ನನ್ನ ಗಮನಕ್ಕೆ ಬಂದವು ಎಂದು ಹೇಳಿದ್ದಾರೆ. ೨೦೨೪ರ ಲೋಕಸಭಾ ಚುನಾವಣೆಯ ಹಿನ್ನೆಲೆಯಲ್ಲಿ ನಡೆದ ಜಿಲ್ಲಾ ಕೋರ್ ಕಮಿಟಿ ಸಭೆಗೂ ಮಾಧುಸ್ವಾಮಿ ಯವರು ಹಾಜರಾಗಲಿಲ್ಲ. ಕಾರ್ಯಕರ್ತರ ಪೂರ್ವಭಾವಿ ಸಭೆಗಳಲ್ಲಿಯೂ ಭಾಗವಹಿಸಲಿಲ್ಲ.
ಲೋಕಸಭಾ ಚುನಾವಣೆಯಲ್ಲಿ ಯಾವುದೇ ಕಾರಣಕ್ಕೂ ತಾವು ಕೆಲಸ ಮಾಡುವುದಿಲ್ಲ, ಚುನಾವಣೆಯಲ್ಲಿ ತಟಸ್ಥವಾಗಿರುವುದಲ್ಲದೆ ವಿರೋಧವಾಗಿಯೇ ಕೆಲಸ ಮಾಡುತ್ತೇನೆ ಎಂಬ ನಿಲುವನ್ನು ವ್ಯಕ್ತಪಡಿಸುತ್ತಿದ್ದರು. ಈ ಸಂದರ್ಭದಲ್ಲಿ ನಾನು ವೈಯಕ್ತಿಕವಾಗಿ ಅವರಲ್ಲಿ ಹಲವು ಬಾರಿ ಮನವಿ ಮಾಡಿಕೊಂಡಿದ್ದೇನೆ. ’ಸರ್, ದಯವಿಟ್ಟು ಈ ರೀತಿಯ ನಿರ್ಧಾರ ಕೈಗೊಳ್ಳಬೇಡಿ. ಇದು ಕೇವಲ ಒಂದು ಚುನಾವಣೆಯಲ್ಲ, ದೇಶದ ಭವಿಷ್ಯವನ್ನು ನಿರ್ಧರಿಸುವ ಲೋಕಸಭಾ ಚುನಾವಣೆ.ಮತ್ತೊಮ್ಮೆ ನರೇಂದ್ರ ಮೋದಿಯವರ ನೇತೃತ್ವದಲ್ಲಿ ಬಲಿಷ್ಟ ಸರ್ಕಾರ ರಚನೆಯಾಗಬೇಕಾದ ಮಹತ್ವದ ಚುನಾವಣೆ. ಇಂತಹ ಸಂದರ್ಭದಲ್ಲಿ ತಾವು ಜಿಲ್ಲೆಯ ಹಿರಿಯ ನಾಯಕರಾಗಿ ಮುಂಚೂಣಿಯಲ್ಲಿ ನಿಂತು ಕಾರ್ಯಕರ್ತರಿಗೆ ಮಾರ್ಗದರ್ಶನ ನೀಡಬೇಕು ಎಂದು ವಿನಂತಿಸಿದ್ದೆ. ಆದರೂ ಅವರು ತಮ್ಮ ನಿಲುವನ್ನು ಬದಲಾಯಿಸಲಿಲ್ಲ ಎಂದು ಹೆಬ್ಬಾಕ ರವಿಶಂಕರ್ ತಿಳಿಸಿದ್ದಾರೆ.
ಈ ವಿಚಾರವನ್ನು ಬಗೆಹರಿಸುವ ಉದ್ದೇಶದಿಂದ ಮಾಜಿ ಸಚಿವರಾದ ದಿ. ಬಿ.ಸಿ.ನಾಗೇಶ್ ಅವರೂ ಸಹ ಮಾಧುಸ್ವಾಮಿಯವರೊಂದಿಗೆ ಚರ್ಚೆ ನಡೆಸಿದರು. ಅಷ್ಟೆ ಅಲ್ಲದೆ, ನಮ್ಮ ಪಕ್ಷದ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿಗಳಾದ ರಾಧಾ ಮೋಹನ್ದಾಸ್ ಅಗರ್ವಾಲ್ ಅವರು ಖುದ್ದಾಗಿ ಜಿಲ್ಲೆಗೆ ಆಗಮಿಸಿದ ಸಂದರ್ಭದಲ್ಲಿ, ಒಟ್ಟಾಗಿ ಭೇಟಿ ಮಾಡಿ ಚರ್ಚೆ ನಡೆಸಿದ್ದೆವು. ಪಕ್ಷದ ಹಿತದೃಷ್ಟಿಯಿಂದ ಚುನಾವಣೆಯಲ್ಲಿ ಸಕ್ರಿಯವಾಗಿ ಭಾಗವಹಿಸುವಂತೆ ಮನವರಿಕೆ ಮಾಡಲು ಪ್ರಯತ್ನಿಸಿದ್ದೇವು. ಆದರೆ, ಆ ಸಂದರ್ಭದಲ್ಲಿಯೂ ಯಾವುದೇ ಕಾರಣಕ್ಕೂ ಲೋಕಸಭಾ ಚುನಾವಣೆಯಲ್ಲಿ ಕೆಲಸ ಮಾಡುವುದಿಲ್ಲ ಎಂಬ ತಮ್ಮ ನಿಲುವನ್ನೇ ಅವರು ಪುನರುಚ್ಚರಿಸಿದ್ದರು. ಇಷ್ಟಕ್ಕೆ ಮಾತ್ರ ಈ ಬೆಳವಣಿಗೆ ಸೀಮಿತವಾಗಿರಲಿಲ್ಲ. ಚಿಕ್ಕನಾಯಕನಹಳ್ಳಿ ಭಾಗದ ಪಕ್ಷದ ಪದಾಧಿಕಾರಿಗಳು ಹಾಗೂ ಕಾರ್ಯಕರ್ತರೂ ಲೋಕಸಭಾ ಚುನಾವಣೆಯಲ್ಲಿ ಕೆಲಸ ಮಾಡಬಾರದು ಎಂಬ ರೀತಿಯಲ್ಲಿ ಸೂಚನೆಗಳನ್ನು ನೀಡಲಾಗುತ್ತಿದೆ ಎಂಬ ವಿಚಾರವೂ ನಮ್ಮ ಗಮನಕ್ಕೆ ಬಂದಿತ್ತು ಎಂದು ಹೇಳಿದ್ದಾರೆ.
ಇಂತಹ ಗಂಭೀರ ವಿಚಾರಗಳನ್ನು ಜಿಲ್ಲಾಧ್ಯಕ್ಷನಾಗಿ ನಾನು ನಿರ್ಲಕ್ಷಿಸಲು ಸಾಧ್ಯವಿರಲಿಲ್ಲ. ಯಾವುದೇ ವ್ಯಕ್ತಿಯ ಮೇಲಿನ ವೈಯಕ್ತಿಕ ದ್ವೇಷದಿಂದಾಗಲಿ, ರಾಜಕೀಯ ಲಾಭದ ಉದ್ದೇಶದಿಂದಾಗಲಿ ಈ ವಿಚಾರವನ್ನು ಕೈಗೆತ್ತಿಕೊಂಡಿಲ್ಲ. ಬದಲಾಗಿ ಸಂಬಂಧಪಟ್ಟ ವಿಚಾರಗಳ ಕುರಿತು ಮಾಹಿತಿ ಸಂಗ್ರಹಿಸಿ ವರದಿ ಸಿದ್ಧಪಡಿಸಲಾಯಿತು. ಆ ವರದಿಯನ್ನು ಜಿಲ್ಲಾ ಪ್ರಮುಖರನ್ನೊಳಗೊಂಡ ಲೋಕಸಭಾಚುನಾವಣಾ ನಿರ್ವಹಣಾತಂಡದೊಂದಿಗೆ ಚರ್ಚಿಸಿ, ಸಮಾಲೋಚನೆಯ ನಂತರವೇರಾಜ್ಯಘಟಕಕ್ಕೆ ಸಲ್ಲಿಸಲಾಗಿದೆ.ಇಲ್ಲಿಒಂದು ಪ್ರಶ್ನೆಯನ್ನು ಸಾರ್ವಜನಿಕವಾಗಿ ಕೇಳಲು ಬಯಸುತ್ತೇನೆ. ೨೦೨೪ರ ಲೋಕಸಭಾ ಚುನಾವಣೆಯ ಸಂದರ್ಭದಲ್ಲಿ ಇಡೀ ದೇಶವೇ ನರೇಂದ್ರ ಮೋದಿಯವರ ನೇತೃತ್ವದಲ್ಲಿ ಮತ್ತೊಮ್ಮೆ ಕೇಂದ್ರದಲ್ಲಿ ಬಿಜೆಪಿ ಸರ್ಕಾರ ರಚನೆಯಾಗಬೇಕೆಂಬ ಸಂಕಲ್ಪದೊಂದಿಗೆ ಹಗಲಿರುಳು ಶ್ರಮಿಸುತ್ತಿದ್ದಾಗ, ಪಕ್ಷದ ಹಿರಿಯ ನಾಯಕರೊಬ್ಬರು ಚುನಾವಣೆಯಲ್ಲಿ ಕೆಲಸ ಮಾಡುವುದಿಲ್ಲ ಎಂದು ಪದೇ ಪದೇ ಹೇಳುವುದು, ಪಕ್ಷದ ಸಭೆಗಳಿಂದ ದೂರ ಉಳಿಯುವುದು ಹಾಗೂ ಕಾರ್ಯಕರ್ತರಿಗೂ ಚುನಾವಣಾ ಚಟುವಟಿಕೆಗಳಿಂದ ದೂರವಿರುವಂತೆ ಸೂಚಿಸುವುದು ಪಕ್ಷದ ಶಿಸ್ತಿಗೆ ಮತ್ತು ಸಂಘಟನೆಯ ಹಿತಕ್ಕೆ ವಿರುದ್ಧವಾದ ನಡೆಯಲ್ಲವೇ ಎಂದು ಹೆಬ್ಬಾಕ ರವಿಶಂಕರ್ ಕೇಳಿದ್ದಾರೆ.


























