
ಕೋಲಾರ,ಮೇ,೧೩- ಶ್ರೀನಿವಾಸಪುರ ಕ್ಷೇತ್ರದಲ್ಲಿ ಶಾಸಕ ಜಿ.ಕೆ.ವೆಂಕಟಶಿವಾರೆಡ್ಡಿ ನಮ್ಮ ನಾಯಕರಾಗಿದ್ದು, ಅವರು ಸ್ವಇಚ್ಚೆಯಿಂದ ಚುನಾವಣಾ ಕಣದಿಂದ ಹಿಂದೆ ಸರಿದರೆ ಕಣಕ್ಕಿಳಿಯಲು ತೂಪಲ್ಲಿ ನಾರಾಯಣಸ್ವಾಮಿ ಹಾಗೂ ಅಹಿಂದ ಸಮುದಾಯದಿಂದ ನಾನು ಸಿದ್ದನಿದ್ದೇನೆ ಇಲ್ಲಿ ಜೆಡಿಎಸ್‌ನಿಂದ ಹೊರಗಿನವರಿಗೆ ಅವಕಾಶವಿಲ್ಲ ಎಂದು ಜಿಪಂ ಮಾಜಿ ಸದಸ್ಯ ಎಂ.ವಿ.ಶ್ರೀನಿವಾಸಯಾದವ್ ಸ್ಪಷ್ಟಪಡಿಸಿದ್ದಾರೆ.
ಈ ಕುರಿತು ಹೇಳಿಕೆ ನೀಡಿರುವ ಅವರು, ಸಿಎಂಆರ್. ಶ್ರೀನಾಥ್ ಶ್ರೀನಿವಾಸಪುರದಿಂದ ಜೆಡಿಎಸ್ ಅಭ್ಯರ್ಥಿಯಾಗಲಿದ್ದಾರೆಂಬ ವದಂತಿಗಳು ಹರಿದಾಡುತ್ತಿದ್ದು, ಅಂತಹ ಯಾವುದೇ ಸುಳಿವು ಇಲ್ಲ ಮತ್ತು ಸತ್ಯಕ್ಕೆ ದೂರ, ಇಲ್ಲಿ ಹೊರಗಿನವರಿಗೆ ಟಿಕೆಟ್ ಕೊಡುವುದೂ ಇಲ್ಲ, ಕಾರ್ಯಕರ್ತರು ಒಪ್ಪುವುದೂ ಇಲ್ಲ ಎಂದು ತಿಳಿಸಿದ್ದಾರೆ.
ಸಿಎಂಆರ್.ಶ್ರೀನಾಥ್ ಅವರು ಶ್ರೀನಿವಾಸಪುರ ವಿಧಾನಸಭಾ ಕ್ಷೇತ್ರದಲ್ಲಿ ಸಕ್ರಿಯರಾಗಿದ್ದಾರೆ, ಇಲ್ಲಿಂದ ಕಣಕ್ಕಿಳಿಯಲು ಸಿದ್ದತೆ ನಡೆಸಿದ್ದಾರೆಂಬ ವರದಿಗಳ ಹಿನ್ನಲೆ ಸ್ಪಷ್ಟನೆ ನೀಡುತ್ತಿರುವುದಾಗಿ ಅವರು ತಿಳಿಸಿದ್ದಾರೆ.
ಸಿಎಂಆರ್.ಶ್ರೀನಾಥ್ ಅವರು ಕೋಲಾರ ಕ್ಷೇತ್ರದಲ್ಲಿ ಜನನಾಯಕರಾಗಿ ಗುರುತಿಸಿಕೊಂಡಿದ್ದು, ಅಲ್ಲಿ ಪಕ್ಷದ ಮುಂಚೂಣಿ ನಾಯಕರಾಗಿದ್ದಾರೆ, ಅವರು ಶ್ರೀನಿವಾಸಪುರಕ್ಕೆ ಬರುವುದೂ ಇಲ್ಲ, ಬಂದರೆ ನಾವು ಅವಕಾಶ ನೀಡುವುದಿಲ್ಲ ಎಂದು ತಿಳಿಸಿದ್ದಾರೆ.
ಸದ್ಯ ವೆಂಕಟಶಿವಾರೆಡ್ಡಿ ಅವರು ಶಾಸಕರಾಗಿದ್ದು, ಇಲ್ಲಿ ಬೇರೆಯವರ ಸ್ಪರ್ಧೆಯ ವಿಷಯವೇ ಅಪ್ರಸ್ತುತವಾಗಿದೆ ಎಂದ ಅವರು, ತೂಪಲ್ಲಿ ನಾರಾಯಣಸ್ವಾಮಿ ಅವರು ಜಿಪಂ ಅಧ್ಯಕ್ಷರಾಗಿ, ಪಕ್ಷಕ್ಕಾಗಿ ನಿಷ್ಟೆಯಿಂದ ಕೆಲಸ ಮಾಡಿಕೊಂಡು ಬಂದಿದ್ದಾರೆ, ಹಾಗೆಯೇ ನಾನು ಸಹಾ ಅಹಿಂದಗೆ ಅವಕಾಶ ಸಿಕ್ಕಲ್ಲಿ ಕಣಕ್ಕಿಳಿಯಲು ಸಿದ್ದತೆ ನಡೆಸಿದ್ದು, ದಶಕಗಳಿಂದ ಶ್ರೀನಿವಾಸಪುರದಲ್ಲಿ ಜೆಡಿಎಸ್ ಪಕ್ಷ ಕಟ್ಟಿ ಬೆಳೆಸಿದ್ದೇವೆ, ಪಕ್ಷಕ್ಕಾಗಿ ನಿಷ್ಠೆಯಿಂದ ದುಡಿದಿದ್ದೇನೆ, ಸಾಮಾಜಿಕ ಸೇವೆಗಳನ್ನು ಮಾಡಿಕೊಂಡು ಬಂದಿದ್ದೇನೆ ಎಂದು ತಿಳಿಸಿದ್ದಾರೆ.
ಶ್ರೀನಿವಾಸಪುರ ಕ್ಷೇತ್ರದಲ್ಲಿ ಸ್ಥಳೀಯ ಆಕಾಂಕ್ಷಿಗಳು ಸಾಕಷ್ಟಿರುವಾಗ ಹೊರಗಿನ ಅಭ್ಯರ್ಥಿಗೆ ಇಲ್ಲಿ ಅವಕಾಶ ನೀಡುವುದಿಲ್ಲ, ನೀಡಿದರೂ ಅದನ್ನು ಸಹಿಸಲು ಸಾಧ್ಯವೂ ಇಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.


























