Home ಜಿಲ್ಲೆ ಶಿರ್ಸಿ (ಎ) ಗ್ರಾಮದಲ್ಲಿ ಆನೆಕಾಲು ರೋಗ ಪತ್ತೆಗಾಗಿ ರಾತ್ರಿ ರಕ್ತ ಲೇಪನ ಸಮೀಕ್ಷೆ

ಶಿರ್ಸಿ (ಎ) ಗ್ರಾಮದಲ್ಲಿ ಆನೆಕಾಲು ರೋಗ ಪತ್ತೆಗಾಗಿ ರಾತ್ರಿ ರಕ್ತ ಲೇಪನ ಸಮೀಕ್ಷೆ

ಬೀದರ, ಮೇ.೧೨: ಬೀದರ ತಾಲೂಕಿನ ಶಿರ್ಸಿ (ಎ) ಗ್ರಾಮದಲ್ಲಿ ಆನೆಕಾಲು ರೋಗ ಪತ್ತೆಗಾಗಿ ರಾತ್ರಿರಕ್ತ ಲೇಪನ ಸಮೀಕ್ಷೆಯನ್ನು ರಾಷ್ಟ್ರೀಯ ರೋಗವಾಹಕ ಆಶ್ರಿತ ರೋಗಗಳ ನಿಯಂತ್ರಣ ಕಾರ್ಯಕ್ರಮದಡಿಯಲ್ಲಿ ಡಾ.ಧ್ಯಾನೆಶ್ವರ ನೀರಗುಡೆ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿಗಳು ಬೀದರ ಹಾಗು ಡಾ. ಶಂಕ್ರೆಪ್ಪಾ ಬೊಮ್ಮ ಜಿಲ್ಲಾ ಸರ್ವೇಕ್ಷಣ ಅಧಿಕಾರಿಗಳು ಬೀದರ ರವರ ನಿದರ್ಶನದಂತೆ ದಿನಾಂಕ ೯-೫-೨೦೨೬ ರಂದು ಶಿರ್ಸಿ (ಎ) ಗ್ರಾಮದಲ್ಲಿ ಪ್ರಾಥಮಿಕ ಆರೋಗ್ಯ ಕೇಂದ್ರ ಬಗದಲ್ ವತಿಯಿಂದ ಆನೆಕಾಲು ರೋಗ (ಲಿಂಫಾಟಿಕ್ ಫೈಲೇರಿಯಾಸಿಸ್) ನಿಯಂತ್ರಣಕ್ಕಾಗಿ ಹಮ್ಮಿಕೊಳ್ಳಲಾಗಿದ್ದ ರಾತ್ರಿರಕ್ತ ಲೇಪನ ಮಾದರಿ ಸಂಗ್ರಹಣೆ ಕಾರ್ಯಕ್ರಮ ಯಶಸ್ವಿಯಾಗಿ ನಡೆಯಿತು.
ರಾತ್ರಿ ಸಮೀಕ್ಷೆಯ ಮಹತ್ವದ ಕುರಿತು ಜಿಲ್ಲಾ ಆನೆಕಾಲು ರೋಗ ನಿಯಂತ್ರಣ ಘಟಕ ಬೀದರ ಕಚೇರಿಯ ಮೇಲ್ವಿಚಾರಕರಾದ ವೀರಶೆಟ್ಟಿಚನ್ನಶೆಟ್ಟಿ ಹಿರಿಯ ಆರೋಗ್ಯ ನಿರೀಕ್ಷಣಾಧಿಕಾರಿಗಳು ಆನೆಕಾಲು ರೋಗಕ್ಕೆ ಕಾರಣವಾಗುವ ಮೈಕ್ರೋಫೈಲೇರಿಯಾ ಎಂಬ ಸೂಕ್ಷ್ಮ ರೋಗಾಣುಗಳು ಹಗಲಿನಲ್ಲಿ ಶ್ವಾಸಕೋಶದ ಆಳದಲ್ಲಿ ಅಡಗಿದ್ದು, ಕೇವಲ ರಾತ್ರಿ ವೇಳೆ ಮಾತ್ರ ದೇಹದ ರಕ್ತ ಪರಿಚಲನೆಯಲ್ಲಿ ಸಕ್ರಿಯವಾಗಿರುತ್ತವೆ. ಈ ಕಾರಣಕ್ಕಾಗಿ ಸೋಂಕನ್ನು ನಿಖರವಾಗಿ ಪತ್ತೆ ಹಚ್ಚಲು ರಾತ್ರಿಯ ವೇಳೆಯೇ ರಕ್ತದ ಮಾದರಿಯನ್ನು ರಾತ್ರಿ ೧೦ ಗಂಟೆಯ ನಂತರ ಸಂಗ್ರಹಿಸಲಾಗುತ್ತದೆ ಎಂದು ತಿಳಿಸಿದರು .
ಮುಂಜಾಗ್ರತಾ ಕ್ರಮದ ಬಗ್ಗೆ ಮಹಮ್ಮದ್ ಹಾದಿ ತಬರೆಜ್ ಆರೋಗ್ಯ ನಿರೀಕ್ಷಣಾಧಿಕಾರಿಗಳು ಸೊಳ್ಳೆಗಳಿಂದ ರಕ್ಷಣೆ ಪಡೆಯಲು ಸೊಳ್ಳೆ ಪರದೆ ಬಳಸುವುದು ಮತ್ತು ಮನೆಯ ಸುತ್ತಮುತ್ತ ನೀರು ನಿಲ್ಲದಂತೆ ನೋಡಿಕೊಳ್ಳುವುದು ಹಾಗೂ ಆನೆಕಾಲು ರೋಗವು ಕ್ಯೂಲೆಕ್ಸ್ ಜಾತಿಯ ಹೆಣ್ಣು ಸೊಳ್ಳೆ ಕಚ್ಚುವುದರಿಂದ ಹರಡುತ್ತದೆ ಭಾರತವನ್ನು ೨೦೨೭ ರ ವೇಳೆಗೆ ಆನೆಕಾಲು ರೋಗ ಮುಕ್ತವಾಗಿಸುವ ಉದ್ದೇಶದಿಂದ ಈ ಜಾಗೃತಿ ಮತ್ತು ಪರೀಕ್ಷಾ ಅಭಿಯಾನವನ್ನು ನಡೆಸಲಾಗುತ್ತಿದೆ ಎಂದು ಹೇಳಿದರು.
ಜಿಲ್ಲೆಯ ಮೆಲ್ವಿಚಾರಕರಾದ ಅಬುಬಕರ್ ಆರೋಗ್ಯ ಇಲಾಖೆಯ ಸಿಬ್ಬಂದಿಗಳು ತಂಡವು ರಚಿಸಿ ಶಿರ್ಸಿ ಗ್ರಾಮದ ವಿವಿಧ ಮನೆಗಳಿಗೆ ಭೇಟಿ ನೀಡಿ ಸಾರ್ವಜನಿಕರಿಂದ ರಕ್ತದ ಮಾದರಿಯನ್ನು ಪಡೆದು ಸಮೀಕ್ಷೆಯಲ್ಲಿ ಸೋಂಕು ಪತ್ತೆಯಾದ ವ್ಯಕ್ತಿಗಳಿಗೆ ತಕ್ಷಣವೇ ಉಚಿತ ಚಿಕಿತ್ಸೆ ನೀಡಲು ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಆರೋಗ್ಯ ನಿರೀಕ್ಷಣಾಧಿಕಾರಿ ಸಮಿಯೋದ್ದಿನ್, ನಂದಕುಮಾರ, ಶಿವಕುಮಾರ, ಸಮುದಾಯ ಆರೋಗ್ಯ ಅಧಿಕಾರಿಗಳಾದ ರಿಟ್ಟಾ, ಶಿವಲಿಲಾ, ಪ್ರಾರ್ಥನಾ, ಶಿಲ್ಪಾ, ಸುವರ್ಣಾ,ಗ್ಲೊರಿ, ರಾಣಿಬಾಯಿ, ಪ್ರಾಥಮಿಕ ಆರೋಗ್ಯ ಸುರಕ್ಷಣಾಧಿಕಾರಿಗಳಾದ ಶ್ರೀದೆವಿ, ಆಶಾಲತಾ, ನೇಹಾಕುಮಾರಿ, ದೀಪಾಲಿ, ಗ್ರಾಮದ ಹಿರಿಯರು, ಆಶಾ ಕಾರ್ಯಕರ್ತೆಯರು ಸೇರಿದಂತೆ ಆರೋಗ್ಯ ಇಲಾಖೆಯ ಸಿಬ್ಬಂದಿಗಳು ಉಪಸ್ಥಿತರಿದ್ದರು.