Home ಮುಖಪುಟ ಸುದ್ದಿ ಜಿಬಿಎ ಕಚೇರಿಯಲ್ಲಿ ಅಗ್ನಿ ಅವಘಡ ಬಳಿಕವೂ ನಿರ್ಲಕ್ಷ್ಯ

ಜಿಬಿಎ ಕಚೇರಿಯಲ್ಲಿ ಅಗ್ನಿ ಅವಘಡ ಬಳಿಕವೂ ನಿರ್ಲಕ್ಷ್ಯ

ಪಾಳು ಬಿದ್ದ ಯಂತ್ರಗಳು


ಬೆಂಗಳೂರು:ಏ.೨೭-
ನಗರ ಆಡಳಿತದ ಹೃದಯಭಾಗವಾಗಿರುವ ಜಿಬಿಎ ಕೇಂದ್ರ ಕಚೇರಿಯಲ್ಲೇ ಸಂಭವಿಸಿದ ಅಗ್ನಿ ಅವಘಡದ ಪರಿಣಾಮಗಳು ಇನ್ನೂ ಸರಿಯಾಗಿಲ್ಲ ಎಂಬುದು ಗಂಭೀರ ಆತಂಕಕ್ಕೆ ಕಾರಣವಾಗಿದೆ.


೨೦೨೪ರಲ್ಲಿ ಜಿಬಿಎಯ ಗುಣಮಟ್ಟ ಪರೀಕ್ಷಾ ಕೇಂದ್ರದಲ್ಲಿ ಸಂಭವಿಸಿದ ಅಗ್ನಿ ಅವಘಡದಲ್ಲಿ ೧೩ ಮಂದಿ ಸಿಬ್ಬಂದಿಗಳು ಗಾಯಗೊಂಡಿದ್ದರು. ಈ ದುರ್ಘಟನೆಯಲ್ಲಿ ಇಂಜಿನಿಯರ್ ಶಿವಕುಮಾರ್ ಸಾವನ್ನಪ್ಪಿದ್ದು, ಮೂವರು ಗಂಭೀರವಾಗಿ ಗಾಯಗೊಂಡಿದ್ದರು. ಘಟನೆ ಬಳಿಕ ಗಾಯಗೊಂಡ ಮೂವರು ಸಿಬ್ಬಂದಿಗಳಿಗೆ ಹಾಗೂ ಮೃತಪಟ್ಟ ಶಿವಕುಮಾರ್ ಅವರ ಪತ್ನಿಗೆ ಸರ್ಕಾರದಿಂದ ಉದ್ಯೋಗ ನೀಡಲಾಗಿತ್ತು.


ಆದರೆ, ಮಾನವೀಯ ನೆರವಿನ ಬಳಿಕವೂ ಮೂಲ ಸಮಸ್ಯೆ ಕಡೆಗಣನೆಯಾಗಿದೆ ಎಂಬ ಆರೋಪಗಳು ಕೇಳಿಬರುತ್ತಿವೆ. ಅಗ್ನಿ ಅವಘಡ ಸಂಭವಿಸಿದ ಕೊಠಡಿಯನ್ನು ಇಂದಿಗೂ ತೆರೆಯದೇ ಬೀಗ ಹಾಕಿ ಇಡಲಾಗಿದೆ. ಇದರ ಪರಿಣಾಮವಾಗಿ, ಒಳಗೆ ಇರುವ ಕೋಟ್ಯಂತರ ಮೌಲ್ಯದ ಯಂತ್ರೋಪಕರಣಗಳು ತುಕ್ಕು ಹಿಡಿದು ಪಾಳಾಗುತ್ತಿವೆ.


ವಿದೇಶಗಳಿಂದ ಆಮದು ಮಾಡಲಾಗಿದ್ದ ಈ ಯಂತ್ರಗಳು ನಗರದ ರಸ್ತೆಗಳಿಗೆ ಬಳಸುವ ಡಾಂಬರುಗಳ ಗುಣಮಟ್ಟ ಪರೀಕ್ಷೆಗೆ ಬಳಸಲಾಗುತ್ತಿತ್ತು. ಬೆಂಕಿ ಅವಘಡದಲ್ಲಿ ಭಾಗಶಃ ಹಾನಿಗೊಂಡಿದ್ದರೂ, ಅವುಗಳನ್ನು ದುರಸ್ತಿ ಮಾಡುವತ್ತ ಅಧಿಕಾರಿಗಳು ಇನ್ನೂ ಗಮನ ಹರಿಸಿಲ್ಲ ಎನ್ನಲಾಗಿದೆ.


ಗುಣಮಟ್ಟ ಪರೀಕ್ಷಾ ಕೇಂದ್ರ ಕಾರ್ಯನಿರ್ವಹಿಸದೇ ಇರುವುದರಿಂದ, ರಸ್ತೆ ನಿರ್ಮಾಣದ ಗುಣಮಟ್ಟ ಮೇಲ್ವಿಚಾರಣೆಯ ಮೇಲೂ ಪರಿಣಾಮ ಬೀರುತ್ತಿದೆ ಎಂಬ ಆತಂಕ ವ್ಯಕ್ತವಾಗಿದೆ. ಈ ಹಿನ್ನೆಲೆಯಲ್ಲಿ, ತೆರಿಗೆದಾರರು ಹಾಗೂ ಸಾರ್ವಜನಿಕರು ಜಿಬಿಎ ಅಧಿಕಾರಿಗಳ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.


ಎರಡು ವರ್ಷಗಳು ಕಳೆದರೂ ಘಟನಾ ಸ್ಥಳವನ್ನು ತೆರೆಯದೇ, ಯಂತ್ರೋಪಕರಣಗಳನ್ನು ಬಳಕೆಗೂ ತರದೇ ಇರುವುದು ಆಡಳಿತದ ನಿರ್ಲಕ್ಷ್ಯಕ್ಕೆ ಸ್ಪಷ್ಟ ಉದಾಹರಣೆಯಾಗಿದೆ. ಕೋಟ್ಯಂತರ ರೂಪಾಯಿ ತೆರಿಗೆ ಹಣ ವ್ಯರ್ಥವಾಗುತ್ತಿದೆ ಎಂಬ ಟೀಕೆಗಳು ಕೇಳಿಬರುತ್ತಿವೆ.


ಈ ಬಗ್ಗೆ ತಕ್ಷಣ ಕ್ರಮ ಕೈಗೊಂಡು, ಪರೀಕ್ಷಾ ಕೇಂದ್ರವನ್ನು ಪುನರಾರಂಭಿಸುವಂತೆ ಸಾರ್ವಜನಿಕರು ಒತ್ತಾಯಿಸಿದ್ದಾರೆ.