Home ಮುಖಪುಟ ಸುದ್ದಿ ಡಿಕೆಶಿಗೆ ಸದ್ಯದಲ್ಲೇ ಒಳ್ಳೆಯ ಸ್ಥಾನ ಸಿಗಲಿದೆ

ಡಿಕೆಶಿಗೆ ಸದ್ಯದಲ್ಲೇ ಒಳ್ಳೆಯ ಸ್ಥಾನ ಸಿಗಲಿದೆ

ಬೆಂಗಳೂರು, ಏ. ೨೭- ರಾಜ್ಯ ಕಾಂಗ್ರೆಸ್‌ನಲ್ಲಿ ನಾಯಕತ್ವ ಬದಲಾವಣೆ ಚರ್ಚೆಗಳು ಮತ್ತೆ ಮುನ್ನಲೆಗೆ ಬಂದಿರುವಾಗಲೇ ಕಾಂಗ್ರೆಸ್ ಶಾಸಕ ಹೆಚ್.ಡಿ. ರಂಗನಾಥ್, ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರಿಗೆ ಸದ್ಯದಲ್ಲೇ ಒಳ್ಳೆಯ ಸ್ಥಾನ ಸಿಗಲಿದೆ ಎಂದು ಹೇಳಿರುವುದು ರಾಜಕೀಯ ಬದಲಾವಣೆಯ ಚರ್ಚೆಗೆ ಮತ್ತಷ್ಟು ಬಲ ತುಂಬಿದೆ.


ಬೆಂಗಳೂರಿನಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಶಾಸಕ ಡಾ. ರಂಗನಾಥ್, ಮೇ ತಿಂಗಳ ೧೫ ರಂದು ಉಪ ಮುಖ್ಯ ಮಂತ್ರಿ ಡಿ.ಕೆ. ಶಿವಕುಮಾರ್ ಅವರ ಜನ್ಮದಿನ ಇದೆ. ಅಷ್ಟೊರಳಗೆ ಸಂತೋಷದ ವಿಚಾರ ಅಥವಾ ಸಿಹಿ ಸುದ್ದಿ ಬರಬಹುದು ಎಂಬ ಆಶಯ ನಮ್ಮೆಲ್ಲರದ್ದಾಗಿದೆ ಎಂದು ಹೇಳಿರುವುದು ಅಚ್ಚರಿ ಮೂಡಿಸಿದೆ.


ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಒಳ್ಳೆಯ ಆಡಳಿತ ನೀಡುತ್ತಿದ್ದಾರೆ. ಆದರೆ ಮುಂದಿನ ದಿನಗಳಲ್ಲಿ ಡಿ.ಕೆ. ಶಿವಕುಮಾರ್ ಅವರಿಗೂ ಮುಖ್ಯಮಂತ್ರಿ ಸ್ಥಾನ ಸಿಗಬೇಕು ಎಂಬುದು ನಮ್ಮ ಆಸೆ. ಈ ವಿಚಾರ ಹೈಕಮಾಂಡ್ ತೀರ್ಮಾನಕ್ಕೆ ನಾವೆಲ್ಲರೂ ಬದ್ಧ. ವರಿಷ್ಠರು ಸೂಕ್ತ ಸಂದರ್ಭದಲ್ಲಿ ಸೂಕ್ತ ನಿರ್ಧಾರ ಕೈಗೊಳ್ಳುವ ವಿಶ್ವಾಸವಿದೆ. ಎಲ್ಲದಕ್ಕೂ ಕಾಲ ಬರಬೇಕು ಎಂದು ಮಾರ್ಮಿಕವಾಗಿ ಹೇಳಿದರು.


ಮುಖ್ಯಮಂತ್ರಿ ಸಿದ್ಧರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ರವರ ನಡುವೆ ಅಧಿಕಾರ ಹಂಚಿಕೆಯ ಒಪ್ಪಂದ ಆಗಿದೆ ಎಂಬ ವಿಚಾರ ಎಲ್ಲರ ತಲೆಯಲ್ಲೂ ಇದೆ. ಆವರಿಬ್ಬರ ಸ್ವರೂಪ ಏನೆಂಬುದು ಹೈಕಮಾಂಡ್ ಸ್ಪಷ್ಟಪಡಿಸಬೇಕು. ಹಾಗೂ ಗೊಂದಲಗಳನ್ನು ಪರಿಹರಿಸಬೇಕು ಎಂಬುದು ಬಹುತೇಕ ಶಾಸಕರ ಅನಿಸಿಕೆಯಾಗಿದೆ ಎಂದು ಹೇಳಿದರು.


ಸಚಿವ ಸುಧಾರಕ್ ಅವರ ಆರೋಗ್ಯ ವಿಚಾರದಲ್ಲಿ ಏನನ್ನೋ ಮುಚ್ಚಿಡಲಾಗುತ್ದಿದೆ ಎಂಬ ಕೇಂದ್ರ ಸಚಿವ ಕುಮಾರಸ್ವಾಮಿ ಹೇಳಿಕೆ ಸರಿಯಲ್ಲ. ಆರೋಗ್ಯದ ವಿಚಾರದಲ್ಲಿ ಏನನ್ನೂ ಮುಚ್ಚಿಡುವ ಅವಶ್ಯಕತೆ ಸರ್ಕಾರಕ್ಕಿಲ್ಲ. ಅವರ ಆರೋಗ್ಯದ ಬಗ್ಗೆ ಮಾಹಿತಿ ನೀಡಬೇಕಾದರೆ ಮೊದಲು ಅವರ ಕುಟುಂಬ ನಿರ್ಧಾರ ಮಾಡುತ್ತದೆ. ಬಳಿಕ ಆಸ್ಪತ್ರೆ ಮತ್ತು ಸರ್ಕಾರ ಚರ್ಚಿಸಿ ನಿರ್ಧಾರ ಕೈಗೊಳ್ಳುತ್ತದೆ. ಮಾಹಿತಿ ಹಂಚಿಕೊಳ್ಳಲು ಒಂದಷ್ಟು ನಿಯಮಾವಳಿಗಳು. ಇವೆ ಅದರಂತೆ ಎಲ್ಲರೂ ನಡೆದುಕೊಳ್ಳಬೇಕು ಎಂದು ಶಾಸಕ ರಂಗನಾಥ್ ಹೇಳಿದರು.