Home ಜಿಲ್ಲೆ ನಾರದ ಜಯಂತಿ: ಸಮಾಜಮುಖಿ ಸುದ್ದಿಗಳ ಪ್ರಸಾರಕ್ಕೆ ಮಾಧ್ಯಮಗಳು ಒತ್ತು ನೀಡಲಿ

ನಾರದ ಜಯಂತಿ: ಸಮಾಜಮುಖಿ ಸುದ್ದಿಗಳ ಪ್ರಸಾರಕ್ಕೆ ಮಾಧ್ಯಮಗಳು ಒತ್ತು ನೀಡಲಿ

ಬೀದರ:ಮೇ.11: ಕೇಶವ ಕಾರ್ಯ ಸಂವರ್ಧನ ಸಮಿತಿ ಬೀದರ ವತಿಯಿಂದ ನಗರದಲ್ಲಿ ನಾರದ ಜಯಂತಿ ಕಾರ್ಯಕ್ರಮವನ್ನು ಶನಿವಾರ ಆಯೋಜಿಸಲಾಯಿತು.

ಕಾರ್ಯಕ್ರಮದ ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ವಿಶ್ವವಾಣಿ ದಿನಪತ್ರಿಕೆಯ ಜಿಲ್ಲಾ ವರದಿಗಾರರಾದ ಶ್ರೀ ಚನ್ನಬಸವ ಮೊಕ್ತೆದಾರ್ ಅವರು ಮಾತನಾಡಿ, “ನಮ್ಮ ಮೇಲಿನ ಅಪಾರ ಗೌರವದಿಂದ ನಮ್ಮ ಹೆಸರಿನಲ್ಲಿ ನಾರದ ಜಯಂತಿ ಆಚರಿಸುತ್ತಿರುವುದು ಅತ್ಯಂತ ಸಂತಸದ ವಿಷಯ” ಎಂದು ಅಭಿಪ್ರಾಯಪಟ್ಟರು.

ಕಾರ್ಯಕ್ರಮದ ವಕ್ತಾರರಾದ ಶ್ರೀ ಕೃಷ್ಣ ಜೋಶಿ ಅವರು ನಾರದ ಮಹರ್ಷಿಗಳ ವ್ಯಕ್ತಿತ್ವ ಹಾಗೂ ಮಾಧ್ಯಮ ಕ್ಷೇತ್ರದ ಜವಾಬ್ದಾರಿಗಳ ಕುರಿತು ಉಪನ್ಯಾಸ ನೀಡಿದರು. ತ್ರಿಲೋಕ ಸಂಚಾರಿಯಾಗಿದ್ದ ಮಹರ್ಷಿ ನಾರದರು ಲೋಕಕಲ್ಯಾಣಕ್ಕಾಗಿ ಎಲ್ಲೆಡೆ ಸುದ್ದಿಯನ್ನು ತಲುಪಿಸುವ ಕಾರ್ಯ ನಿರ್ವಹಿಸಿದ್ದರು ಎಂದು ಹೇಳಿದರು. ಸಾಮಾನ್ಯವಾಗಿ ನಾರದರನ್ನು “ಕಲಹಪ್ರಿಯ” ಎಂದು ಅರ್ಥೈಸಿಕೊಳ್ಳಲಾಗುತ್ತದಾದರೂ, ಅವರು ಧರ್ಮ ಸಂಸ್ಥಾಪನೆಗಾಗಿ ಸತ್ಯಸುದ್ದಿಗಳನ್ನು ಹರಡುವ ಕಾರ್ಯ ಮಾಡುತ್ತಿದ್ದರು ಎಂದು ತಿಳಿಸಿದರು.

18 ಪುರಾಣಗಳಲ್ಲಿ ಒಂದಾದ ನಾರದಪುರಾಣದಲ್ಲಿ ಮಾಧ್ಯಮಗಳ ಜವಾಬ್ದಾರಿಗಳ ಕುರಿತು ಮಹತ್ವದ ವಿಚಾರಗಳು ಉಲ್ಲೇಖಗೊಂಡಿವೆ. ನಾರದರು ನೀಡಿದ 84 ಭಕ್ತಿ ಸೂತ್ರಗಳಲ್ಲಿ ಸಮಾಜಕ್ಕೆ ಯಾವ ರೀತಿಯ ಸಂದೇಶಗಳನ್ನು ತಲುಪಿಸಬೇಕು ಎಂಬುದರ ಬಗ್ಗೆಯೂ ಸ್ಪಷ್ಟ ಮಾರ್ಗದರ್ಶನವಿದೆ ಎಂದು ವಿವರಿಸಿದರು.

1826ರಲ್ಲಿ ಆರಂಭವಾದ ಭಾರತದ ಮೊದಲ ಪತ್ರಿಕೆ “ಉದ್ಧಂತ ಮಾತರ್ಂಡ” ಪತ್ರಿಕೆಯ ಸಂಪಾದಕೀಯದಲ್ಲಿಯೂ ನಾರದ ಮಹರ್ಷಿಗಳ ಉಲ್ಲೇಖವಿದ್ದು, ಮೇ 30ರಂದು ನಾರದ ಜಯಂತಿಯ ದಿನವೇ ಆ ಪತ್ರಿಕೆ ಆರಂಭಗೊಂಡಿತ್ತು ಎಂದು ಹೇಳಿದರು.

ಮಾಧ್ಯಮ ಕ್ಷೇತ್ರದಲ್ಲಿ ಕಾರ್ಯನಿರ್ವಹಿಸುವವರಿಗೆ ಎಲ್ಲಾ ಕ್ಷೇತ್ರಗಳ ಮಾಹಿತಿಗಳು ಲಭ್ಯವಾಗುತ್ತವೆ. ಆದ್ದರಿಂದ ಪ್ರಕೃತಿಗೆ ಪೂರಕವಾಗಿರುವ ಹಾಗೂ ಸಮಾಜದ ಸ್ವಾಸ್ಥ್ಯ ಕಾಪಾಡುವ ಸುದ್ದಿಗಳನ್ನು ಪ್ರಸಾರ ಮಾಡುವುದು ಇಂದಿನ ಮಾಧ್ಯಮಗಳ ಜವಾಬ್ದಾರಿಯಾಗಿದೆ. ಸಮಾಜದಲ್ಲಿ ಕಲಹ ಹುಟ್ಟಿಸುವ ಸುದ್ದಿಗಳ ಬದಲು ಜನರನ್ನು ಒಗ್ಗೂಡಿಸುವ ಮತ್ತು ಸಮಾಜಮುಖಿ ಚಿಂತನೆ ಬೆಳೆಸುವ ಸುದ್ದಿಗಳಿಗೆ ಆದ್ಯತೆ ನೀಡಬೇಕು ಎಂದು ಕರೆ ನೀಡಿದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶ್ರೀ ನಾಗೇಶ್ ಚಿನ್ನಾರೆಡ್ಡಿ ವಹಿಸಿದ್ದರು. ವಿಭಾಗ ಸಂಘ ಚಾಲಕರಾದ ಶ್ರೀ ಹನುಮಂತರಾವ್ ಪಾಟೀಲ್, ವಿಭಾಗ ಪ್ರಚಾರಕರಾದ ಶ್ರೀ ವಿಜಯ್ ಮಹಾಂತೇಶ್ ಸೇರಿದಂತೆ ನಗರದ ಹಲವು ಗಣ್ಯರು ಉಪಸ್ಥಿತರಿದ್ದರು.

ಶಿವಕಾಂತ್ ಪಾಟೀಲ್ ಕಾರ್ಯಕ್ರಮ ನಿರ್ವಹಣೆ ಮಾಡಿದರು. ಸತೀಶ್ ಪಾಂಚಾಳ ಸ್ವಾಗತಿಸಿ ಪರಿಚಯಿಸಿದರು. ಸಮಿತಿಯ ಕಾರ್ಯದರ್ಶಿಗಳಾದ ಶ್ರೀ ಎನ್. ಕೃಷ್ಣಾರೆಡ್ಡಿ ವಂದಿಸಿದರು.