Home ಜಿಲ್ಲೆ ಕಲಬುರಗಿ ನಂದಿಕೂರ: ಮರಗಮ್ಮ ದೇವಿ ದೇವಸ್ಥಾನದ ಬೀಗ ಮುರಿದು ನಗನಾಣ್ಯ ಕಳವು

ನಂದಿಕೂರ: ಮರಗಮ್ಮ ದೇವಿ ದೇವಸ್ಥಾನದ ಬೀಗ ಮುರಿದು ನಗನಾಣ್ಯ ಕಳವು

ಕಲಬುರಗಿ,ನ.11-ಫರಹತಾಬಾದ ಪೊಲೀಸ್ ಠಾಣೆ ವ್ಯಾಪ್ತಿಯ ನಂದಿಕೂರ ಗ್ರಾಮದ ಸಿಮೆ ಮರಗಮ್ಮದೇವಿ ದೇವಸ್ಥಾನದ ಬೀಗ ಮುರಿದು 85 ಸಾವಿರ ರೂ.ಮೌಲ್ಯದ ನಗನಾಣ್ಯ ಕಳವು ಮಾಡಲಾಗಿದೆ.
ಎರಡು ತಿಂಗಳ ಹಿಂದೆಯಷ್ಟೇ ಮರಗಮ್ಮ ದೇವಿಯ ನೂತನ ದೇವಸ್ಥಾನದ ಕಟ್ಟಡ ಲೋಕಾರ್ಪಣೆ ಮಾಡಿ ಮರಗಮ್ಮ ದೇವಿಯ ನೂತನ ಮೂರ್ತಿ ಹಾಗೂ ಪ್ರಾಣ ಪ್ರತಿಷ್ಠಾಪನೆ ಕಾರ್ಯಕ್ರಮ ಮಾಡಲಾಗಿತ್ತು.
ಕಳ್ಳರು ದೇವಸ್ಥಾನದ ಬೀಗ ಮುರಿದು ದೇವಿಯ ಮೂರ್ತಿಯನ್ನು ದೇವಸ್ಥಾನದ ಹಿಂದುಗಡೆ ಎಸೆದಿದ್ದಾರೆ. ಅಲ್ಲದೆ ದೇವಿಯ ಮೂರ್ತಿ ಮೇಲಿದ್ದ 25 ಸಾವಿರ ರೂ.ಮೌಲ್ಯದ 2 ಮಾಸಿ ಬಂಗಾರದ ಮೂಗುತಿ, 25 ಸಾವಿರ ರೂ.ಮೌಲ್ಯದ ಒಂದು ಜೊತೆ 2 ಮಾಸಿ ಬಂಗಾರದ ಕಿವಿಯೋಲೆ, 5 ಸಾವಿರ ರೂ.ಮೌಲ್ಯದ 2 ತೊಲೆ ಬೆಳ್ಳಿಯ ಕಾಲುಂಗರ, 5 ಸಾವಿರ ರೂ.ಮೌಲ್ಯದ 2 ತೊಲೆಯ ಬೆಳ್ಳಿಯ ಎರಡು ಕಣ್ಣು ಬಟ್ಟಲು, 15 ಸಾವಿರ ರೂ.ಮೌಲ್ಯದ ಕಂಚಿನ ಕಳಸ ಮತ್ತು ದೇಣಿಗೆ ಪಟ್ಟಿಗೆಯಲ್ಲಿದ್ದ 10 ಸಾವಿರ ರೂ. ಸೇರಿ 85 ಸಾವಿರ ರೂ.ಮೌಲ್ಯದ ನಗನಾಣ್ಯ ಕಳವು ಮಾಡಿದ್ದಾರೆ. ಈ ಸಂಬಂಧ ದೇವಸ್ಥಾನದ ಪೂಜಾರಿ ಮಲ್ಲಿಕಾರ್ಜುನ ಇಜೇರಿ ಅವರು ಫರಹತಾಬಾದ ಪೊಲೀಸ್ ಠಾಣೆಯಲ್ಲಿ ದೂರು ಸಲ್ಲಿಸಿದ್ದು, ತನಿಖೆ ನಡೆದಿದೆ.