
ಬೆಂಗಳೂರು, ಮಾ. ೨- ಒಳಮೀಸಲಾತಿ ವರ್ಗೀಕರಣವನ್ನು ಬದಿಗೆ ಸರಿಸಿ ಸಂವಿಧಾನ ಬಾಹಿರ ಹಾಗೂ ಕಾನೂನು ಬಾಹಿರವಾಗಿ ಉದ್ಯೋಗ ನೇಮಕಾತಿಗೆ ಮುಂದಾಗಿರುವ ರಾಜ್ಯ ಸರ್ಕಾರದ ಕ್ರಮವನ್ನು ಖಂಡಿಸಿರುವ ರಿಪಬ್ಲಿಕ್ ಪಾರ್ಟಿ ಆಫ್ ಇಂಡಿಯಾ (ಬಿ) ರಾಷ್ಟ್ರೀಯ ಅಧ್ಯಕ್ಷ ಹಾಗೂ ಡಿಎಸ್‌ಎಸ್ ರಾಜ್ಯಾಧ್ಯಕ್ಷ ಎನ್. ಮೂರ್ತಿ ಅವರು, ಶೇ. ೧೭ ರಷ್ಟು ಮೀಸಲಾತಿ ಪ್ರಮಾಣದಲ್ಲಿ ವರ್ಗೀಕರಣ ವಿಧೇಯಕದಂತೆ ಉದ್ಯೋಗ ನೇಮಕಾತಿ ಮಾಡುವಂತೆ ಒತ್ತಾಯಿಸಿದ್ದಾರೆ.
ನಗರದ ಪ್ರೆಸ್ ಕ್ಲಬ್‌ನಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಉದ್ಯೋಗ ನೇಮಕಾತಿಗೆ ನಮ್ಮ ವಿರೋಧವಿಲ್ಲ. ಆದರೆ ನ್ಯಾಯಾಲಯಕ್ಕೆ ಒಳಮೀಸಲಾತಿ ವರ್ಗೀಕರಣ ಸಂಬಂಧ ಮನವರಿಕೆ ಮಾಡಿಕೊಟ್ಟು ನೇಮಕಾತಿ ಪ್ರಕ್ರಿಯೆ ಆರಂಭಿಸಲಿ ಎಂದು ಹೇಳಿದರು.
ನೇಮಕಾತಿ ಆಯ್ಕೆ ಪ್ರಕ್ರಿಯೆ ಮುಕ್ತಾಯಗೊಳ್ಳುವ ಮೊದಲು ಒಳಮೀಸಲಾತಿ ಜಾರಿಗೆ ಸರ್ಕಾರ ಬದ್ಧವಾಗಿದೆ ಎಂಬುದು ಮೋಸ ಹಾಗೂ ವಂಚನೆ ಮಾಡುವುದಾಗಿದೆ ಎಂದು ದೂರಿದರು.
ಸರ್ಕಾರದ ಈ ವಿರೋಧಿ ನಡೆಯನ್ನು ಖಂಡಿಸಿ ಮಾರ್ಚ್ ಮೊದಲನೇ ವಾರದಲ್ಲಿ ರಾಜ್ಯಮಟ್ಟದ ಮಹತ್ವದ ಸಭೆ ನಡೆಸಲು ಆರ್‌ಪಿಎಫ್ (ಬಿ) ಮತ್ತು ದಸಂಸ ತೀರ್ಮಾನಿಸಿದೆ. ರಾಜ್ಯಾದ್ಯಂತ ತೀವ್ರ ಹೋರಾಟ ನಡೆಸಲು ಹಾಗೂ ಮುಂದಿನ ಎಲ್ಲಾ ಚುನಾವಣೆಗಳಲ್ಲೂ ಕಾಂಗ್ರೆಸ್ ಸೋಲಿಸಲು ತೀರ್ಮಾನಿಸಲಾಗುವುದು ಎಂದರು.
ಅಲ್ಲದೆ ಶಾಸಕರು, ಸಚಿವರುಗಳ ಸಭೆ, ಸಮಾರಂಭಗಳನ್ನು ಬಹಿಷ್ಕರಿಸಿ ಗೋಬ್ಯಾಕ್ ಚಳವಳಿ ನಡೆಸಲು ಸಹ ನಿರ್ಧರಿಸಲಾಗಿದೆ ಎಂದು ಅವರು ತಿಳಿಸಿದರು.
ರಾಜ್ಯದಲ್ಲಿ ಕಳೆದ ವರ್ಷಗಳಲ್ಲಿ ೪೦ ಸಾವಿರಕ್ಕೂ ಹೆಚ್ಚು ಉದ್ಯೋಗಗಳು ವರ್ಗೀಕರಣವಿಲ್ಲದೆ ಸ್ವೇಚ್ಛಾಚಾರವಾಗಿ ನಡೆದಿವೆ. ರಾಜ್ಯದಲ್ಲಿ ಹಾಲಿ ೨.೮೫ ಲಕ್ಷ ಹುದ್ದೆಗಳು ಖಾಲಿ ಇವೆ,. ಇದರಲ್ಲಿ ೫೬,೪೩೨ ಉದ್ಯೋಗಗಳನ್ನು ಶೀಘ್ರವಾಗಿ ಹಳೇ ಮೀಸಲಾತಿ ಅನುಸರಿಸಿ ಉದ್ಯೋಗ ನೇಮಕಾತಿ ಮಾಡಲು ಸಚಿವ ಸಂಪುಟ ತೀರ್ಮಾನಿಸಿದೆ ಎಂದು ಅವರು ಅಸಮಾಧಾನ ವ್ಯಕ್ತಪಡಿಸಿದರು.
ಸರ್ಕಾರ ಮುಂದಾಗಿರುವ ನೇಮಕಾತಿ ಆದೇಶದಂತೆ ಪರಿಶಿಷ್ಟರ ಮೀಸಲಾತಿ ವರ್ಗೀಕರಣವನ್ನು ಸಂಪೂರ್ಣವಾಗಿ ಕೈಬಿಟ್ಟು ಹಳೇ ಜಾತಿ ಪತ್ರ ಮತ್ತು ಹಳೇ ಪದ್ದತಿಯಂತೆ ಶೇ. ೧೫ ಮೀಸಲಾತಿ ಪ್ರಮಾಣದಲ್ಲಿ ಉದ್ಯೋಗ ನೇಮಕಾತಿ ಮಾಡಲು ಮುಂದಾಗಿದೆ ಎಂದು ಆರೋಪಿಸಿದರು.
ಸರ್ಕಾರದ ತರಾತುರಿ ಉದ್ಯೋಗ ನೇಮಕಾತಿ ಹಿಂದೆ ಮೀಸಲಾತಿ ವರ್ಗೀಕರಣದ ವಿರೋಧಿಗಳ ಕೈವಾಡವಿದೆ. ಮೀಸಲಾತಿ ವರ್ಗೀಕರಣದಂತೆ ಉದ್ಯೋಗ, ಬಡ್ತಿ ಮೀಸಲಾತಿ, ಬ್ಯಾಕ್‌ಲಾಗ್, ನೇರ ನೇಮಕಾತಿಗೆ ಬಜೆಟ್‌ನಲ್ಲಿ ಹಣ ನಿಗದಿಯಾಗದಿದ್ದರೆ ಪರಿಶಿಷ್ಟ ಜಾತಿಗಳಲ್ಲಿ ತೀರಾ ಹಿಂದುಳಿದ ಮಾದಿಗ ಮತ್ತು ಸಂಬಂಧಿತ ಹಾಗೂ ೫೯ ಅಲೆಮಾರಿ ಜಾತಿಗಳಿಗೆ ವಿಷ ಉಣಿಸಿದಂತಹ ಘೋರ ಅನ್ಯಾಯವಾಗಲಿದೆ ಎಂದರು.
ಕೂಡಲೇ ಪರಿಶಿಷ್ಟ ಜಾತಿ, ಪರಿಶಿಷ್ಟ ವರ್ಗಗಳ ಮೀಸಲಾತಿ ಶೇ. ೨೪ ಅನ್ನು ಸಂವಿಧಾನದ ಶೆಡ್ಯೂಲ್ ೯ಕ್ಕೆ ಸೇರಿ ಪರಿಶಿಷ್ಟರಿಗೆ ಶೇ. ೧೭ ಮೀಸಲಾತಿ ವರ್ಗೀಕರಣ ೬:೬:೫ ರಂತೆ ಉದ್ಯೋಗ ನೇಮಕಾತಿ ಕಲ್ಪಿಸಲು ಅವರು ಆಗ್ರಹಿಸಿದರು.
ಮೀಸಲಾತಿ ವರ್ಗೀಕರಣಕ್ಕೆ ಅಡ್ಡಗಾಲು ಹಾಕಲು ಹೈಕೋರ್ಟ್ ಮೆಟ್ಟಿಲೇರಿದವರೇ ಉದ್ಯೋಗ ನೇಮಕಾತಿ ಗಲಾಟೆ, ಘರ್ಷಣೆ ಸೃಷ್ಠಿಸಿದ್ದಾರೆ. ವಿಶ್ವವಿದ್ಯಾನಿಲಯಗಳ ನೇಮಕಾತಿಗಳಲ್ಲೂ ನೇಮಕಾತಿ ಬಿಂದು ವಿವಾದ ಎಬ್ಬಿಸಿದ್ದಾರೆ. ಅವರ ಬೆನ್ನಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಅವರ ಸರ್ಕಾರ ಶ್ರೀರಕ್ಷೆಯಾಗಿದೆ ಎಂದು ಎನ್. ಮೂರ್ತಿ ದೂರಿದರು.
ಸಮಾನ ಮನಸ್ಕ ಸಂಘಟನೆಗಳನ್ನು ಕರೆದು ಈ ಬಗ್ಗೆ ಚರ್ಚಿಸಿ ರಾಜ್ಯಾದ್ಯಂತ ಜಿಲ್ಲೆ, ತಾಲ್ಲೂಕುಗಳಲ್ಲಿ ಬೃಹತ್ ಪ್ರತಿಭಟನೆ, ಮುತ್ತಿಗೆ, ಸಚಿವರು, ಶಾಸಕರ ಸಭೆ ನಿವಾಸಕ್ಕೆ ಘೇರಾವ್ ಬಂದ್, ತಮಟೆ ಚಳವಳಿಗಳಂತಹ ತೀವ್ರ ಹೋರಾಟಗಳನ್ನು ನಡೆಸಲು ಸಭೆಯಲ್ಲಿ ನಿರ್ಣಯಿಸಲಾಗುವುದು ಎಂದರು.


























