
ಚಿಕ್ಕಬಳ್ಳಾಪುರ, ಮೇ.೦೭- ಇಂದಿನ ಕಾಲಮಾನದಲ್ಲಿ ಅಪರೂಪದಲ್ಲಿ ಅಪರೂಪ ಎನ್ನುವಂತೆ ಸಮಾಜದ ಗಣ್ಯರಲ್ಲಿ ಪ್ರಮುಖರಾದ ಮೊಟ್ಟೆ ಸುಬ್ಬರಾಜು ರವರಿಗೆ ನೂರು ವರ್ಷ ತುಂಬಿದ ಕಾರಣಕ್ಕಾಗಿ ಸಾವಿರಾರು ಮಂದಿ ಸಂಬಂಧಿಕರ ಹಾಗೂ ಅಭಿಮಾನಿಗಳ ಸಮ್ಮುಖದಲ್ಲಿ ಶತಮಾನೋತ್ಸವ ಸಂಭ್ರಮ ಕಾರ್ಯಕ್ರಮ ನಡೆದಿದ್ದು ವಿಶೇಷವೆನಿಸಿತು.
ನಗರದ ಧರ್ಮ ಛತ್ರ ರಸ್ತೆಯಲ್ಲಿರುವ ಶ್ರೀ ವಿದ್ಯಾ ಗಣಪತಿ ದೇವಾಲಯ ಸಭಾಂಗಣದಲ್ಲಿ ಮೊಟ್ಟೆ ಸುಬ್ಬರಾಜು ಕುಟುಂಬದವರು ಮತ್ತು ರಾಜು ಕ್ಷತ್ರಿಯ ಸಮಾಜ ವತಿಯಿಂದ ಏರ್ಪಡಿಸಿದ್ದ ಈ ಶತಮಾನೋತ್ಸವ ಸಮಾರಂಭ ನಿಜಕ್ಕೂ ಅರ್ಥಪೂರ್ಣ ವೆನಿಸಿದ್ದು ಕಾರ್ಯಕ್ರಮದಲ್ಲಿ ನೂರಾರು ಮಂದಿ ತಾಲೂಕಿನ ಗಣ್ಯರುಗಳು ಅನೇಕ ಸಂಘ ಸಂಸ್ಥೆಗಳ ಪ್ರತಿನಿಧಿಗಳು ಚುನಾಯಿತ ಜನಪ್ರತಿನಿಧಿಗಳು ಹೀಗೆ ವಿವಿಧ ವರ್ಗದ ಜನತೆ ಒಂದೆಡೆ ಸೇರಿ ನೂರು ವರ್ಷ ಪೂರೈಸಿದ ಮೊಟ್ಟೆ ಸುಬ್ಬರಾಜು ರವರನ್ನು ಮೈಸೂರು ಪೇಟ ತೊಡಿಸಿ ಶಾಲು ಹಾಕಿ ಬರಿ ಹೂವಿನ ಹಾರಗಳೊಂದಿಗೆ ಸನ್ಮಾನಿಸಿ ಗೌರವಿಸಿದರು.
ಇವರೆಲ್ಲರ ಸನ್ಮಾನ ಸ್ವೀಕರಿಸಿದ ನೂರು ವರ್ಷ ಪೂರೈಸಿದ ಮೊಟ್ಟೆ ಸುಬ್ಬರಾಜು ರವರ ಕಣ್ಗಳಲಿ ಆನಂದ ಪಾಶ್ವ ಕಾಣುತ್ತಿತ್ತು ಅವರು ಅತ್ಯಂತ ಸಂತೋಷದಿಂದ ತಮ್ಮಲ್ಲಿ ಬರುವವರನ್ನು ನಗುಮುಖದಿಂದ ಆಶೀರ್ವದಿಸುತ್ತಿದ್ದು ಕಂಡುಬಂದಿತು.
ಜೀವನ ಪರಿಚಯ
ನೂರು ವರ್ಷ ಪೂರೈಸಿಕೊಂಡ ಮೊಟ್ಟೆ ಸುಬ್ಬರಾಜು ರವರು ಚಿಕ್ಕಬಳ್ಳಾಪುರ ನಗರವಾಸಿಗಳು ಅವರು ವೆಂಕಟರಾಮರಾಜು ಹಾಗೂ ಗೌರಮ್ಮ ರವರ ಪುತ್ರರಾಗಿದ್ದು ಐದು ಜನ ಸಹೋದರರು ನಾಲ್ಕು ಸಹೋದರಿಯರು ಮೂವರು ಗಂಡು ಮಕ್ಕಳು ಎರಡು ಹೆಣ್ಣು ಮಕ್ಕಳು ಹೊಂದಿರುವ ಸಂಸಾರವಾಗಿದ್ದು ಇವರ ಮೂಲವೃತ್ತಿ ಮೊಟ್ಟೆ ತಯಾರಿಸುವುದು ಅಷ್ಟು ಮಾತ್ರವಲ್ಲದೆ ಇವರು ಚಿಕ್ಕಬಳ್ಳಾಪುರದಲ್ಲಿ ಪ್ರಮುಖ ಧಾರ್ಮಿಕ ಮನೋಭಾವದವರಾಗಿದ್ದು ಅನೇಕ ಧಾರ್ಮಿಕ ಕಾರ್ಯಕ್ರಮಗಳಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡಿದ್ದರು. ಶ್ರೀ ಜಾಲರಿ ಗಂಗಮಾಂಬ ದೇವಾಲಯದ ಕರಗ ಮಹೋತ್ಸವ ಕಾರ್ಯಕ್ರಮಗಳಲ್ಲಿ ಭಾಗವಹಿಸುವುದು ಸಂಕ್ರಾಂತಿ ಉತ್ಸವ ಧನುರ್ಮಾಸ ೯ ದಿನದ ಪೂಜೆ ಹೀಗೆ ಅನೇಕ ಕಾರ್ಯಕ್ರಮಗಳಲ್ಲಿ ಅವರು ಸುಧೀರ್ಘಕಾಲ ತಮ್ಮನ್ನು ತಾವು ತೊಡಗಿಸಿಕೊಂಡಿದ್ದು ಅಪಾರ ಸ್ನೇಹಿತರನ್ನು ಹಾಗೂ ಬಂಧು ವರ್ಗದವರನ್ನು ಹೊಂದಿರುವವರಾಗಿದ್ದಾರೆ.
ಶತಮಾನೋತ್ಸವ ಸಮಾರಂಭದಲ್ಲಿ ನಗರದ ಗಣ್ಯರುಗಳಾದ ಪುರಸಭೆ ಮಾಜಿ ಅಧ್ಯಕ್ಷ ಆರ್ . ವೆಂಕಟಚಲರಾಜು ಬಿ ಎಂ ಟಿ ಸಿ ಮಾಜಿ ಉಪಾಧ್ಯಕ್ಷ ಹಾಗೂ ಕೆ ವಿ ಮತ್ತು ಪಂಚಗಿರಿ ಶಿಕ್ಷಣ ದತ್ತಿಗಳ ಅಧ್ಯಕ್ಷ ಕೆ ವಿ ನವೀನ್ ಕಿರಣ್ ಶ್ರೀ ಜಾಲರಿ ಗಂಗಮ್ಮ ದೇವಾಲಯದ ಅಧ್ಯಕ್ಷ ವಿ ಗಂಗಾಧರ್ಮೂರ್ತಿ ನಗರದ ಪ್ರಮುಖ ವಾಣಿಜ್ಯ ದ್ಯಮ ಆಲೂಗಡ್ಡೆ ವ್ಯಾಪಾರಿ ಬಿ ಮಹೇಶ್ ನಗರ ಸಭೆ ಮಾಜಿ ಸದಸ್ಯ ಮಹಾಕಾಳಿ ಬಾಬು ಡಾಕ್ಟರ್ ರಾಜಕುಮಾರ್ ಅಭಿಮಾನಿಗಳ ಸಂಘದ ಕಾರ್ಯದರ್ಶಿ ಹಾಗೂ ವಕೀಲ ಬಾಲಕೃಷ್ಣರಾಜು ಅಭಿಲಾಶ್ ಟೇಲರ್ ಲಕ್ಷ್ಮಿಪತಿ ಒಳಗೊಂಡಂತೆ ವಿವಿಧ ಗಣ್ಯರುಗಳು ಹಾಗೂ ರಾಜ್ಯ ಕ್ಷತ್ರಿಯ ಸಮಾಜದ ಪ್ರಮುಖರುಗಳು ಕಾರ್ಯಕ್ರಮದಲ್ಲಿ ಹಾಜರಿದ್ದರು.
ಕಾರ್ಯಕ್ರಮಕ್ಕೆ ಬಂದವರನ್ನೆಲ್ಲ ಆತ್ಮೀಯವಾಗಿ ಬರಮಾಡಿಕೊಂಡು ವಿಶೇಷ ಭೋಜನ ಕೂಟ ಏರ್ಪಡಿಸಿದ್ದು ಕಂಡುಬಂದಿತು.

























