
ಆಳಂದ:ಜೂ.6: ಪಟ್ಟಣದ ಅಂಚೆ ಕಚೇರಿ ಹಾಗೂ ಎಪಿಎಂಸಿ ಆಡಳಿತ ಕಚೇರಿಯಲ್ಲಿ ಗುರುವಾರ ಹಾಗೂ ಶುಕ್ರವಾರದ ಮಧ್ಯರಾತ್ರಿ ಸುಮಾರಿಗೆ ಕಳ್ಳರು ನುಗ್ಗಿ ಕಳ್ಳತನಕ್ಕೆ ಯತ್ನಿಸಿದ ಘಟನೆ ಬೆಳಕಿಗೆ ಬಂದಿದ್ದು, ಅಂಚೆ ಕಚೇರಿಯಲ್ಲಿದ್ದ ಲಕ್ಷಾಂತರ ರೂಪಾಯಿ ಮೊತ್ತದ ಹಣ ಅದೃಷ್ಟವಶಾತ್ ಕಳ್ಳರ ಕೈ ಸೇರದೆ ಉಳಿದಿದೆ.
ಪಟ್ಟಣದ ಬಸ್‍ನಿಲ್ದಾಣಕ್ಕೆ ಹೊಂದಿಕೊಂಡಿರುವ ಎಪಿಎಂಸಿ ಮಳಿಗೆಗಳ ಮೇಲಿರುವ ಎಪಿಎಂಸಿ ಆಡಳಿತ ಕಚೇರಿ ಹಾಗೂ ಅದಕ್ಕೆ ಹೊಂದಿಕೊಂಡ ಅಂಚೆ ಕಚೇರಿಯ ಹಿಂದಿನಗೋಡೆಯಿಂದ ಬಂದು ಬಾಗಿಲು ಬೀಗ ಮುರಿದು ಒಳನುಗ್ಗಿದ ಕಳ್ಳರು ಕಚೇರಿಯೊಳಗಿನ ಖಜಾನೆ ಪೆಟ್ಟಿಗೆಯನ್ನು ಗುರಿಯಾಗಿಸಿಕೊಂಡಿದ್ದರು. ಪೆಟ್ಟಿಗೆಯಲ್ಲಿದ್ದ ಸುಮಾರು ಐದು ಲಕ್ಷ ರೂಪಾಯಿಗೂ ಅಧಿಕ ಹಣವನ್ನು ದೋಚುವ ಉದ್ದೇಶದಿಂದ ಕಳ್ಳರು ಪೆಟ್ಟಿಗೆಯನ್ನು ಹೊರತೆಗೆದಿದ್ದರು. ಆದರೆ ಪೆಟ್ಟಿಗೆ ಅತ್ಯಂತ ಭಾರವಾಗಿದ್ದ ಕಾರಣ ಅದನ್ನು ಹೊತ್ತುಕೊಂಡು ಹೋಗಲು ಸಾಧ್ಯವಾಗದೆ ಪರದಾಡಿ ಬಿಟ್ಟು ಪರಾರಿಯಾಗಿದ್ದಾರೆ ಎಂದು ಹೇಳಲಾಗಿದೆ.
ಕಳ್ಳರು ಖಜಾನೆ ಟ್ರಜರಿಯನ್ನು ಕಚೇರಿಯ ಒಳಭಾಗದಿಂದ ಹೊರಗೆ ಎಳೆದು ತಂದಿದ್ದರೂ, ಅದರ ತೂಕವನ್ನು ನಿಭಾಯಿಸಲು ಸಾಧ್ಯವಾಗದೆ ಅರ್ಧದಾರಿಯಲ್ಲಿಯೇ ಬಿಟ್ಟು ಪರಾರಿಯಾಗಿದ್ದಾರೆ. ಪರಿಣಾಮವಾಗಿ ಖಜಾನೆ ಪೆಟ್ಟಿಗೆಯಲ್ಲಿದ್ದ 5ಲಕ್ಷಕ್ಕೂ ಅಧಿಕ ರೂಪಾಯಿ ಮೊತ್ತದ ಹಣ ಸುರಕ್ಷಿತವಾಗಿ ಉಳಿದಿದೆ ಎಂದು ಅಂಚೆ ಕಚೇರಿ ಪೆÇೀಸ್ಟ್ ಮಾಸ್ಟರ್ ತಿಳಿಸಿದ್ದಾರೆ.
ಕಳ್ಳರು ಎರಡೂ ಕಚೇರಿಯೊಳಗಿನ ದಾಖಲೆಗಳು ಹಾಗೂ ವಸ್ತುಗಳನ್ನು ಹುಡುಕಾಡಿದ ಪರಿಣಾಮ ಹಲವು ದಾಖಲೆಗಳು ಚೆಲ್ಲಾಪಿಲ್ಲಿಯಾಗಿ ಬಿದ್ದಿರುವುದು ಕಂಡುಬಂದಿದೆ. ಇದೇ ಕಟ್ಟಡದಲ್ಲಿರುವ ಎಪಿಎಂಸಿ ಆಡಳಿತ ಕಚೇರಿಗೂ ನುಗ್ಗಿದ ದುಷ್ಕರ್ಮಿಗಳು ಅಲ್ಲಿಯೂ ಬಾಗಿಲು ಮುರಿದು ಕಚೇರಿಯಲ್ಲಿದ್ದ ದಾಖಲೆಗಳನ್ನು ಅಸ್ತವ್ಯಸ್ತಗೊಳಿಸಿದ್ದಾರೆ. ಆದರೆ ಯಾವುದೇ ಮಹತ್ವದ ವಸ್ತುಗಳು ಅಥವಾ ನಗದು ಕಳುವಾಗಿರುವ ಬಗ್ಗೆ ಮಾಹಿತಿ ಲಭ್ಯವಾಗಿಲ್ಲ.
ಘಟನೆಯ ಮಾಹಿತಿ ತಿಳಿಯುತ್ತಿದ್ದಂತೆಯೇ ಆಳಂದ ಪೆÇಲೀಸ್ ಠಾಣೆಯ ಪಿಐ ಶರಣಬಸಪ್ಪ ಕೊಡ್ಲಾ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಕಳ್ಳರು ಯಾವ ಮಾರ್ಗದ ಮೂಲಕ ಕಚೇರಿಗೆ ಪ್ರವೇಶಿಸಿದ್ದಾರೆ, ಅವರ ಸಂಖ್ಯೆ ಎಷ್ಟು ಹಾಗೂ ಘಟನೆಯ ಹಿಂದಿರುವ ಉದ್ದೇಶ ಏನು ಎಂಬ ಕುರಿತು ಪೆÇಲೀಸರು ತನಿಖೆ ಆರಂಭಿಸಿದ್ದಾರೆ.
ಪಟ್ಟಣದ ಹೃದಯಭಾಗದಲ್ಲಿರುವ ಎರಡು ಸರ್ಕಾರಿ ಕಚೇರಿಗಳಲ್ಲಿ ಒಂದೇ ರಾತ್ರಿ ಕಳ್ಳತನಕ್ಕೆ ಯತ್ನ ನಡೆದಿರುವುದು ಸಾರ್ವಜನಿಕರಲ್ಲಿ ಆತಂಕ ಮೂಡಿಸಿದ್ದು, ಸರ್ಕಾರಿ ಕಚೇರಿಗಳ ಭದ್ರತೆ ಕುರಿತು ಪ್ರಶ್ನೆಗಳು ಉದ್ಭವಿಸಿವೆ. ರಾತ್ರಿ ವೇಳೆಯಲ್ಲಿ ಕಾವಲು ವ್ಯವಸ್ಥೆಯನ್ನು ಇನ್ನಷ್ಟು ಬಲಪಡಿಸುವಂತೆ ಸ್ಥಳೀಯರು ಆಗ್ರಹಿಸಿದ್ದಾರೆ.
ಪ್ರಕರಣ ಸಂಬಂಧ ಆಳಂದ ಪೆÇಲೀಸ್ ಠಾಣೆಯಲ್ಲಿ ದೂರು ದಾಖಲಾಗಿದ್ದು, ಕಳ್ಳರ ಪತ್ತೆಗೆ ಪೆÇಲೀಸರು ಕಾರ್ಯಾಚರಣೆ ಮುಂದುವರಿಸಿದ್ದಾರೆ.


























