Home ಜಿಲ್ಲೆ ಬೆಂಗಳೂರು ಕೆ ಜಿ ಎಫ್ ಅಲ್ಟ್ರಾ ಮ್ಯಾರಥಾನ್ ೨೦೨೬’ ಆಯೋಜನೆಗೆ ಸಭೆ

ಕೆ ಜಿ ಎಫ್ ಅಲ್ಟ್ರಾ ಮ್ಯಾರಥಾನ್ ೨೦೨೬’ ಆಯೋಜನೆಗೆ ಸಭೆ

ಕೋಲಾರ, ಮೇ,೬-ಜಿಲ್ಲೆಯ ಐತಿಹಾಸಿಕ ಹಿನ್ನೆಲೆಯುಳ್ಳ ಕೆ ಜಿ ಎಫ್ (ಕೋಲಾರ ಚಿನ್ನದ ಗಣಿ) ಪ್ರದೇಶದ ಪ್ರವಾಸೋದ್ಯಮ ಮತ್ತು ಸಾಂಸ್ಕೃತಿಕ ಪರಂಪರೆಯನ್ನು ಜಾಗತಿಕ ಮಟ್ಟದಲ್ಲಿ ಬಿಂಬಿಸುವ ನಿಟ್ಟಿನಲ್ಲಿ ’ಕೆ ಜಿ ಎಫ್ ಅಲ್ಟ್ರಾ ಮ್ಯಾರಥಾನ್ ೨೦೨೬’ ಕ್ರೀಡಾಕೂಟವನ್ನು ಇದೇ ಜುಲೈ ತಿಂಗಳಲ್ಲಿ ಆಯೋಜಿಸಲು ಸಿದ್ಧತೆಗಳನ್ನು ಕೈಗೊಳ್ಳಲಾಗುತ್ತಿದೆ ಎಂದು ಜಿಲ್ಲಾಧಿಕಾರಿ ಡಾ. ಎಂ. ಆರ್. ರವಿ ಅವರು ಮಾಹಿತಿ ನೀಡಿದರು.


ನಗರ ಹೊರವಲಯದ ಜಿಲ್ಲಾ ಆಡಳಿತ ಭವನದ ಕೇಸ್ವಾನ್ ಸಭಾಂಗಣದಲ್ಲಿ ವಿವಿಧ ಇಲಾಖೆಗಳ ಹಿರಿಯ ಅಧಿಕಾರಿಗಳೊಂದಿಗೆ ಮಹತ್ವದ ಪೂರ್ವಭಾವಿ ಸಭೆಯಲ್ಲಿ ಅವರು ಮಾತನಾಡಿ, ಬೆಂಗಳೂರಿನ ’ಬಿಯಾಂಡ್ ಎಕ್ಸಲೆನ್ಸ್ ಸ್ಪೋರ್ಟ್ಸ್ ಟ್ರಸ್ಟ್’ ಸಂಸ್ಥೆಯ ಸಹಯೋಗದೊಂದಿಗೆ ಈ ಮ್ಯಾರಥಾನ್ ಅನ್ನು ಆಯೋಜಿಸಲಾಗುತ್ತಿದ್ದು, ದೇಶ-ವಿದೇಶಗಳ ಓಟಗಾರರು ಇದರಲ್ಲಿ ಪಾಲ್ಗೊಳ್ಳುವ ನಿರೀಕ್ಷೆಯಿದೆ ಎಂದರು.
ಲಡಾಖ್ ಮತ್ತು ರನ್ ಆಫ್ ಕಚ್ ಮ್ಯಾರಥಾನ್‌ಗಳ ಮಾದರಿಯಲ್ಲಿ ಕೆ ಜಿ ಎಫ್ ಅನ್ನು ಕೂಡ ಅಂತಾರಾಷ್ಟ್ರೀಯ ಕ್ರೀಡಾ ಭೂಪಟದಲ್ಲಿ ಗುರುತಿಸುವಂತೆ ಮಾಡುವುದು, ಇಲ್ಲಿನ ಪ್ರವಾಸೋದ್ಯಮ ಹಾಗೂ ಸಣ್ಣ ಉದ್ದಿಮೆಗಳಿಗೆ ಈ ಮೂಲಕ ಪ್ರೋತ್ಸಾಹ ನೀಡುವುದು ಈ ಕಾರ್ಯಕ್ರಮದ ಮುಖ್ಯ ಉದ್ದೇಶವಾಗಿದೆ ಎಂದು ಹೇಳಿದರು.


ಕ್ರೀಡಾಕೂಟದಲ್ಲಿ ೫ ಮೈಲು (೮ ಕಿ.ಮೀ), ೧೦ ಮೈಲು (೧೬ ಕಿ.ಮೀ), ೫೦ ಕಿ.ಮೀ ಮತ್ತು ೧೦೦ ಕಿ.ಮೀ ವಿಭಾಗಗಳ ಓಟವನ್ನು ಆಯೋಜಿಸಲು ಯೋಜಿಸಲಾಗಿದೆ. ಸ್ಥಳೀಯ ಶಾಲಾ-ಕಾಲೇಜು ವಿದ್ಯಾರ್ಥಿಗಳನ್ನು ಪ್ರೋತ್ಸಾಹಿಸಲು ಹೆಚ್ಚುವರಿಯಾಗಿ ೩ ಕಿ.ಮೀ ಓಟವನ್ನು ಸೇರಿಸಲು ಸಭೆಯಲ್ಲಿ ನಿರ್ಧರಿಸಲಾಗಿದೆ ಎಂದರು.


ಕೆ ಜಿ ಎಫ್ ನಗರಸಭೆ ಮೈದಾನದಿಂದ (ರಾಬರ್ಟ್‌ಸನ್ ಪೇಟೆ) ಮ್ಯಾರಥಾನ್ ಆರಂಭಗೊಂಡು, ಅಲ್ಲಿನ ಐತಿಹಾಸಿಕ ತಾಣಗಳು ಹಾಗೂ ಸ್ಮಿತ್ ರೋಡ್, ಚಾಂಪಿಯನ್ ರೀಫ್ಸ್ ಮತ್ತು ಕೋಟಿಲಿಂಗೇಶ್ವರ ಕ್ಷೇತ್ರಗಳನ್ನು ಒಳಗೊಂಡ ಮಾರ್ಗದಲ್ಲಿ ಸಾಗಲಿದೆ.


೧೦೦ ಕಿ.ಮೀ ನಂತಹ ದೀರ್ಘಾವಧಿಯ ಓಟವು ರಾತ್ರಿಯವರೆಗೂ ಮುಂದುವರೆಯುವುದರಿಂದ, ಕ್ರೀಡಾಪಟುಗಳ ಸುರಕ್ಷತೆಗಾಗಿ ಸೂರ್ಯಾಸ್ತದ ನಂತರ ಪ್ರತಿ ೨ ಕಿ.ಮೀ ವ್ಯಾಪ್ತಿಯಲ್ಲಿ ಬೈಕ್ ಹಾಗೂ ಕಾರ್ ವಾಲಂಟಿಯರ್‌ಗಳು ಕಾರ್ಯನಿರ್ವಹಿಸಲಿದ್ದಾರೆ. ನಿಗದಿಪಡಿಸಿದ ಸಮಯದೊಳಗೆ ಓಟ ಮುಗಿಸಲು ಸಾಧ್ಯವಾಗದ ಸ್ಪರ್ಧಿಗಳನ್ನು ಸುರಕ್ಷಿತವಾಗಿ ಕರೆತರಲು ವಾಹನಗಳ ವ್ಯವಸ್ಥೆ ಮಾಡಲಾಗುತ್ತದೆ ಎಂದು ಆಯೋಜಕರು ಸಭೆಯಲ್ಲಿ ವಿವರಿಸಿದರು.


ಕ್ರೀಡಾಕೂಟದಲ್ಲಿ ಭಾಗವಹಿಸುವ ಕ್ರೀಡಾಪಟುಗಳ ಸುರಕ್ಷತೆಗೆ ಮೊದಲ ಆದ್ಯತೆ ನೀಡಬೇಕು. ಮ್ಯಾರಥಾನ್ ಮಾರ್ಗವು ಯಾವುದೇ ಕಾರಣಕ್ಕೂ ಕರ್ನಾಟಕದ ಗಡಿ ದಾಟಿ ಆಂಧ್ರಪ್ರದೇಶವನ್ನು ಪ್ರವೇಶಿಸದಂತೆ, ಕೇವಲ ಜಿಲ್ಲೆಯ ಗಡಿಯೊಳಗೆ ಇರುವಂತೆ ಮಾರ್ಗವನ್ನು ಮರುಹೊಂದಿಸಲು ಆಯೋಜಕರಿಗೆ ನಿರ್ದೇಶನ ನೀಡಿದರು. ಅಲ್ಲದೆ, ಸ್ಥಳೀಯ ಸಂಘ-ಸಂಸ್ಥೆಗಳು, ಹಿರಿಯ ಕ್ರೀಡಾಪಟುಗಳು ಮತ್ತು ಪೊಲೀಸ್ ಇಲಾಖೆಯನ್ನು ಸಮರ್ಥವಾಗಿ ಬಳಸಿಕೊಂಡು ಕಾರ್ಯಕ್ರಮವನ್ನು ಯಶಸ್ವಿಗೊಳಿಸಲು ಸೂಚಿಸಿದರು.


ಪೂರ್ವಭಾವಿ ಸಭೆಯಲ್ಲಿ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಡಾ. ಪ್ರವೀಣ್. ಪಿ. ಬಾಗೇವಾಡಿ, ಕೆ ಜಿ ಎಫ್ ಪೊಲೀಸ್ ವರಿಷ್ಟಾಧಿಕಾರಿ ಶಿವಾಂಶು ರಜಪೂತ, ಉಪವಿಭಾಗಾಧಿಕಾರಿ ಜಂಬಗಿ ರೇಣುಕಾ ಪ್ರಸಾದ್ ದಿಲೀಪ್, ಕೆ ಜಿ ಎಫ್ ತಹಸೀಲ್ದಾರ್ ಭರತ್ ಕುಮಾರ್, ಯುವಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಸಹಾಯಕ ನಿರ್ದೇಶಕಿ ಟಿ.ಜಯಲಕ್ಷ್ಮಿ, ಕರ್ನಾಟಕ ಅಥ್ಲೆಟಿಕ್ ಅಸೂಸಿಯೇಷನ್ ಕಾರ್ಯದರ್ಶಿ ರಾಜುವೇಲು, ಜಿಲ್ಲಾ ಅಥ್ಲೆಟಿಕ್ ಅಸೂಸಿಯೇಷನ್ ಅಧ್ಯಕ್ಷರು ಜಗನ್ನಾಥ್, ಜಿಲ್ಲಾ ಪ್ಯಾರಾಲಿಂಪಿಕ್ಸ್ ಅಧ್ಯಕ್ಷರಾದ ಜಯದೇವ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಡಾ. ಶ್ರೀನಿವಾಸ್, ಇನ್ನಿತರ ಜಿಲ್ಲಾ ಮಟ್ಟದ ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದು, ಅಮೂಲ್ಯ ಸಲಹೆಗಳನ್ನು ಹಂಚಿಕೊಂಡರು.