
ರಾಮನಗರ,ಮೇ.೦೬: ಸಮ ಸಮಾಜದ ನಿರ್ಮಣ, ಪ್ರಜಾಪ್ರಭುತ್ವಕ್ಕೆ ನಾಂದಿ ಹಾಡಿದ ವಿಶ್ವಗುರು ಶ್ರೀ ಬಸವೇಶ್ವರರ ಪುತ್ಥಳಿಯನ್ನು ನಗರಸಭೆಯ ಆವರಣದಲ್ಲಿ ಸ್ಥಾಪಿಸಲಾಗುತ್ತಿದ್ದು. ಮೇ ೮ರಂದು ಅನಾವರಣಗೊಳ್ಳಲಿದೆ ಎಂದು ನಗರಸಭಾಧ್ಯಕ್ಷ ಕೆ.ಶೇಷಾದ್ರಿ ತಿಳಿಸಿದರು.
ನಗರಸಭೆಯಲ್ಲಿ ನಡೆದ ಸುದ್ದಿಗೋಷ್ಠಿ ಯಲ್ಲಿ ಅವರು ಮಾತನಾಡಿದರು. ಸ್ಥಳೀಯ ಸಂಸ್ಥೆಗಳಲ್ಲಿ ಬಸವೇಶ್ವರರ ಪುತ್ಥಳಿ ಸ್ಥಾಪನೆ ರಾಜ್ಯದಲ್ಲಿ ಇದೇ ಮೊದಲು. ೨೦೨೬-೨೭ನೇ ಸಾಲಿನ ಆಯವ್ಯಯದಲ್ಲಿ ವ್ಯಕ್ತಪಡಿಸಿದಂತೆ ಮೇ ೮ರ ಸಂಜೆ ೪.೩೦ಕ್ಕೆ ನಗರಸಭೆಯ ಮುಂಭಾಗ ಬಸವ ಜಯಂತಿಯನ್ನು ಆಚರಿಸಲಾಗುವುದು ಎಂದರು.
ವಿಶ್ವದಲ್ಲಿ ಪ್ರಜಾಪ್ರಭುತ್ವಕ್ಕೆ ಅಡಿಗಲ್ಲು ಹಾಕಿದ ಬಸವಣ್ಣನವರು ಸಮ ಸಮಾಜ ನಿರ್ಮಣಕ್ಕೆ ನಾಂದಿ ಹಾಡಿದರು. ಪ್ರಜಾಪ್ರಭುತ್ವದ ಆಶಯದ ಬೀಜ ಬಿತ್ತಿದರು. ಬಸವಣ್ಣನವರ ಚಿಂತನೆಗಳನ್ನು ಅವರ ಪುತ್ಥಳಿ ಸ್ಥಾಪಿಸುವುದರ ಮೂಲಕ ಮನುಕುಲಕ್ಕೆ ಸಂದೇಶ ರವಾನಿಸಲು ನಗರಸಭಾ ಸದಸ್ಯರೆಲ್ಲರು ಒಪ್ಪಿ, ಬಸವಣ್ಣನವರ ಪುತ್ಥಳಿಯನ್ನು ಸ್ಥಾಪಿಸಲಾಗುತ್ತಿದೆ ಎಂದು ತಿಳಿಸಿದರು.
ಮೈಸೂರು ಸುತ್ತೂರು ಮಹಾಸಂಸ್ಥಾನ ಮಠದ ಶ್ರೀ ಶಿವರಾತ್ರಿ ದೇಶಿಕೇಂದ್ರ ಮಹಾಸ್ವಾಮಿಗಳು ಹಾಗೂ ತುಮಕೂರು ಶ್ರೀ ಸಿದ್ದಗಂಗಾ ಮಠದ ಶ್ರೀ ಸಿದ್ದಲಿಂಗ ಮಹಾಸ್ವಾಮಿಗಳ ದಿವ್ಯ ಸಾನಿಧ್ಯದಲ್ಲಿ ಈ ಕಾರ್ಯಕ್ರಮಗಳು ನಡೆಯಲಿವೆ. ಕನಕಪುರ ದೇಗುಲ ಮಠದ ಮುಮ್ಮಡಿ ನಿರ್ವಾಣ ಮಹಾಸ್ವಾಮಿಗಳ ಆಶೀವರ್ಚನ ಇರಲಿದೆ. ಇವರೊಟ್ಟಿಗೆ ವಿವಿಧ ಮಠಾಧೀಶರ ಉಪಸ್ಥಿತಿ ಇರಲಿದೆ ಎಂದರು.
ಕಾರ್ಯಕ್ರಮವನ್ನು ಉಪಮುಖ್ಯಮಂತ್ರಿಗಳಾದ ಡಿ.ಕೆ.ಶಿವಕುಮಾರ್ ಉದ್ಘಾಟಿಸು ವರು. ನ್ಯಾಯಮೂರ್ತಿಗಳಾದ ನಾಗಮೋಹನದಾಸ್ ಅವರು ಬಸವೇಶ್ವರರ ಪುತ್ಥಳಿ ಅನಾವರಣ ಗೊಳಿಸವರು. ರಾಮನಗರ ಶಾಸಕ ಇಕ್ಬಾಲ್ ಹುಸೇನ್ ಅಧ್ಯಕ್ಷತೆವಹಿಸು ವರು. ಜಿಲ್ಲಾ ಉಸ್ತುವಾರಿ ಸಚಿವ ರಾಮಲಿಂಗಾರೆಡ್ಡಿಯವರು ಉಪಸ್ಥಿತರಿರುವರು. ಸಂಸದ ಡಾ.ಸಿ.ಎನ್.ಮಂಜುನಾಥ್ ಮತ್ತು ರಾಜ್ಯ ಗ್ಯಾರಂಟಿ ಯೋಜನೆಗಳ ಸಮಿತಿ ಅಧ್ಯಕ್ಷ ಎಚ್.ಎಂ.ರೇವಣ್ಣ ಅವರ ಗೌರವ ಉಪಸ್ಥಿತಿ ಇರಲಿದೆ. ಜಿಲ್ಲೆಯ ಶಾಸಕರು ಹಾಗೂ ಜನಪ್ರತಿನಿಧಿಗಳು ಭಾಗವಹಿಸಲಿದ್ದಾರೆ ಎಂದು ಮಾಹಿತಿ ನೀಡಿದರು.
ಆಸ್ತಿ ತೆರಿಗೆ ವಿನಾಯಿತಿ ಮೇ ೩೧ರ ತನಕ ವಿಸ್ತರಣೆ
ರಾಮನಗರ : ೨೦೨೬-೨೭ನೇ ಸಾಲಿಗೆ ಆಸ್ತಿ ತೆರಿಗೆ ಪಾವತಿಯನ್ನು ಪೂರ್ಣ ಪ್ರಮಾಣದಲ್ಲಿ ಪಾವತಿಸಿದರೆ ಶೇ ೫ ರಿಯಾಯಿತಿಯನ್ನು ಸರ್ಕಾರದ ಆದೇಶದ ಮೇರೆಗೆ ಮೇ ೩೧ರವರೆಗೆ ವಿಸ್ತರಿಸಲಾಗಿದೆ ಎಂದು ನಗರಸಭಾಧ್ಯಕ್ಷ ಕೆ.ಶೇಷಾದ್ರಿ ತಿಳಿಸಿದರು.
ಶೇ ೫ ರಿಯಾಯಿತಿ ಏಪ್ರಿಲ್ ೩೦ರವರೆಗೆ ಮಾತ್ರ ಅವಕಾಶವಿತ್ತು. ಆದರೆ ಸರ್ಕಾರ ಈ ರಿಯಾಯಿತಿ ಅವಧಿಯನ್ನು ೩೧.೫.೨೦೨೬ರವರೆಗೆ ಕರ್ನಟಕ ಪೌರಸಭೆಗಳ ಅಧಿನಿಯಮ್ ೧೯೬೪ ಕಲಂ ೧೦೫(೧)ರನ್ವಯ ವಿಸ್ತರಿಸಲಾಗಿದೆ ಎಂದು ಸರ್ಕಾರದ ಆದೇಶ ತಿಳಿಸಿದೆ. ರಾಮನಗರದ ಆಸ್ತಿ ಮಾಲೀಕರು ಈ ಅವಕಾಶವನ್ನು ಬಳಸಿಕೊಳ್ಳಬೇಕು ಎಂದು ಅವರು ಕರೆ ನೀಡಿದರು.
೨೦೨೬-೨೭ನೇ ಸಾಲಿಗೆ ಏಪ್ರಿಲ್ ಅಂತ್ಯದವರೆಗೆ ಎರಡು ಕೋಟಿ ರೂ ಆಸ್ತಿ ತೆರಿಗೆ ಪಾವತಿಯಾಗಿದೆ ಎಂದು ಮಾಹಿತಿ ನೀಡಿದರು.


























