
ಯಾದಗಿರಿ:ಮೇ.೧೨:ಕರ್ನಾಟಕ ರಾಷ್ಟ್ರ ಸಮಿತಿ ಪಕ್ಷದ ಜಿಲ್ಲಾ ಘಟಕದ ವತಿಯಿಂದ ಮೇ ೧೩ರಂದು ಬೆಳಿಗ್ಗೆ ೧೦ ಗಂಟೆಗೆ ಜಿಲ್ಲಾಧಿಕಾರಿ ಕಚೇರಿ ಎದುರು “ಡಿಸಿ ಹಟಾವೋ, ಯಾದಗಿರಿ ಗಡಿ ಮರಳು ಬಚಾವೋ” ಹೆಸರಿನಲ್ಲಿ ಬೃಹತ್ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ ಎಂದು ಪಕ್ಷದ ಜಿಲ್ಲಾ ಉಸ್ತುವಾರಿ ದೀಪಾ ಮನ್ನೂರ ತಿಳಿಸಿದ್ದಾರೆ.
ನಗರದ ಪತ್ರಿಕಾ ಭವನದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಜಿಲ್ಲೆಯ ಗಡಿ ಭಾಗದ ಗುರುಮಿಠಕಲ್ ತಾಲೂಕಿನ ಚಲ್ಹೇರಿ ಗ್ರಾಮ ಸೇರಿದಂತೆ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಕಳೆದ ಒಂದು ದಶಕದಿಂದ ನಿರಂತರವಾಗಿ ಅಕ್ರಮ ಮರಳು ಸಾಗಾಣಿಕೆ ನಡೆಯುತ್ತಿದ್ದು, ಇದನ್ನು ತಡೆಯುವಲ್ಲಿ ಜಿಲ್ಲಾಡಳಿತ ಹಾಗೂ ಜನಪ್ರತಿನಿಧಿಗಳು ಸಂಪೂರ್ಣ ವಿಫಲರಾಗಿದ್ದಾರೆ ಎಂದು ತೀವ್ರ ಆರೋಪಿಸಿದರು.
ಕರ್ನಾಟಕ-ತೆಲಂಗಾಣ ಗಡಿ ರೇಖೆಯನ್ನು ಸ್ಪಷ್ಟವಾಗಿ ಗುರುತಿಸದಿರುವ ಪರಿಸ್ಥಿತಿಯನ್ನು ದುರುಪಯೋಗಪಡಿಸಿಕೊಂಡು, ತೆಲಂಗಾಣ ಭಾಗದ ಮರಳು ಗುತ್ತಿಗೆದಾರರು ಹಾಗೂ ಕೆಲ ಪ್ರಭಾವಿ ರಾಜಕೀಯ ವ್ಯಕ್ತಿಗಳು ಒಳಒಪ್ಪಂದ ಮಾಡಿಕೊಂಡು ನೂರಾರು ಟಿಪ್ಪರ್ ವಾಹನಗಳ ಮೂಲಕ ಪ್ರತಿದಿನ ಮರಳು ಸಾಗಿಸುತ್ತಿದ್ದಾರೆ ಎಂದು ದೂರಿದರು. ಈ ಅಕ್ರಮ ಚಟುವಟಿಕೆಯನ್ನು ಪ್ರಶ್ನಿಸುವ ಸ್ಥಳೀಯ ರೈತರು ಹಾಗೂ ಹೋರಾಟಗಾರರಿಗೆ ಬೆದರಿಕೆ ಹಾಕಲಾಗುತ್ತಿದೆ ಎಂದು ಅವರು ಅಸಮಾಧಾನ ವ್ಯಕ್ತಪಡಿಸಿದರು.
ಸೈದಾಪುರ ಪೊಲೀಸ್ ಠಾಣೆಯ ಅಧಿಕಾರಿಗಳು ಸಹ ಅಕ್ರಮ ಮರಳು ಸಾಗಾಣಿಕೆ ತಡೆಯುವಲ್ಲಿ ನಿರ್ಲಕ್ಷ್ಯ ವಹಿಸುತ್ತಿದ್ದು, ದೂರು ನೀಡಲು ಬಂದ ಸಾರ್ವಜನಿಕರನ್ನು ಸಮಜಾಯಿಷಿ ಹೇಳಿ ಹಿಂದಿರುಗಿಸುತ್ತಿದ್ದಾರೆ ಎಂದು ಆರೋಪಿಸಿದರು.
ಚಲ್ಹೇರಿ ಹಳ್ಳದ ಬಳಿ ಎರಡು ದಿನಗಳ ಕಾಲ ಉಪವಾಸ ಸತ್ಯಾಗ್ರಹ ನಡೆಸಿದರೂ ಜಿಲ್ಲಾಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸದಿರುವುದು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ. ಆದರೆ ಪ್ರತಿಭಟನೆಯ ಮರುದಿನವೇ ತೆಲಂಗಾಣದ ಶಾಸಕರು ಗುರುಮಿಠಕಲ್ ಕ್ಷೇತ್ರದ ಶಾಸಕ ಶರಣಗೌಡ ಕಂದಕೂರ ನಿವಾಸಕ್ಕೆ ಭೇಟಿ ನೀಡಿ ಮಾತುಕತೆ ನಡೆಸಿರುವುದು ಹಲವು ಅನುಮಾನಗಳಿಗೆ ಕಾರಣವಾಗಿದೆ ಎಂದು ಹೇಳಿದರು.
ಅಕ್ರಮ ಮರಳು ದಂಧೆಯಿAದ ಗಡಿ ಭಾಗದ ಗ್ರಾಮಗಳಲ್ಲಿ ಉದ್ವಿಗ್ನ ವಾತಾವರಣ ನಿರ್ಮಾಣವಾಗಿದ್ದು, ರೈತರಿಗೆ ಕುಡಿಯುವ ನೀರಿನ ತೀವ್ರ ಸಮಸ್ಯೆ ಎದುರಾಗಿದೆ. ಅಂತರ್ಜಲ ಮಟ್ಟ ಕುಸಿತಗೊಂಡ ಪರಿಣಾಮ ಕೃಷಿ ಚಟುವಟಿಕೆಗಳಿಗೂ ದೊಡ್ಡ ಹೊಡೆತ ಬಿದ್ದಿದೆ. ರಾಜ್ಯದ ಅಮೂಲ್ಯ ಖನಿಜ ಸಂಪತ್ತು ಲೂಟಿಯಾಗುತ್ತಿದ್ದು, ಸರ್ಕಾರದ ಖಜಾನೆಗೆ ಕೋಟ್ಯಂತರ ರೂಪಾಯಿ ನಷ್ಟ ಉಂಟಾಗುತ್ತಿದೆ ಎಂದು ಕೆಆರ್‌ಎಸ್ ಮುಖಂಡರು ಆರೋಪಿಸಿದರು.
ಪಕ್ಷದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಎಸ್. ನಿಜಲಿಂಗಪ್ಪ ಮಾತನಾಡಿ, ಕಲ್ಯಾಣ ಕರ್ನಾಟಕದ ಏಳು ಜಿಲ್ಲೆಗಳ ಪದಾಧಿಕಾರಿಗಳು ಹಾಗೂ ಕಾರ್ಯಕರ್ತರು ಪ್ರತಿಭಟನೆಯಲ್ಲಿ ಭಾಗವಹಿಸಲಿದ್ದು, ಪಕ್ಷದ ರಾಜ್ಯ ಕಾರ್ಯಾಧ್ಯಕ್ಷ ರಘು ಜಾಣಗೇರಾ ನೇತೃತ್ವದಲ್ಲಿ ಜಿಲ್ಲಾಧಿಕಾರಿ ವರ್ಗಾವಣೆಗೆ ಆಗ್ರಹಿಸಿ ಹೋರಾಟ ನಡೆಸಲಾಗುವುದು ಎಂದು ತಿಳಿಸಿದರು.
ಸಮಸ್ಯೆ ಶೀಘ್ರ ಪರಿಹಾರವಾಗದಿದ್ದರೆ ಪಕ್ಷದ ರಾಜ್ಯಾಧ್ಯಕ್ಷ ರವಿಕೃಷ್ಣಾರಡ್ಡಿ ನೇತೃತ್ವದಲ್ಲಿ ರೈತರ ನಿಯೋಗದೊಂದಿಗೆ ಮುಖ್ಯಮಂತ್ರಿ ಭೇಟಿ ಮಾಡಿ ರಾಜ್ಯ ಸರ್ಕಾರದ ಮೇಲೆ ಒತ್ತಡ ಹೇರಲಾಗುವುದು ಎಂದು ಎಚ್ಚರಿಕೆ ನೀಡಿದರು.
ಸುದ್ದಿಗೋಷ್ಠಿಯಲ್ಲಿ ಜಿಲ್ಲಾಧ್ಯಕ್ಷ ಸಿದ್ದಪ್ಪ ಪೂಜಾರಿ ಚಂಡ್ರಿಕಿ, ಜಿಲ್ಲಾ ಕಾರ್ಯದರ್ಶಿ ಶಾಂತಕುಮಾರ, ಯುವ ಘಟಕದ ಜಿಲ್ಲಾಧ್ಯಕ್ಷ ಚಾಂದ್ ಪಾಷಾ ಮನಗನಾಳ, ಕಾಸೀಂ ಅಲಿ ಸೇರಿದಂತೆ ಹಲವರು ಉಪಸ್ಥಿತರಿದ್ದರು.























