Home ಮುಖಪುಟ ಸುದ್ದಿ ಭರೂಚ್‌ನಲ್ಲಿ ಭೀಕರ ಸ್ಫೋಟ: ಐವರು ಕಾರ್ಮಿಕರು ಸಾವು

ಭರೂಚ್‌ನಲ್ಲಿ ಭೀಕರ ಸ್ಫೋಟ: ಐವರು ಕಾರ್ಮಿಕರು ಸಾವು

ಭರೂಚ್,ಅ.೧೭-ಗುಜರಾತ್‌ನ ಭರೂಚ್ ಜಿಲ್ಲೆಯ ವಾಗ್ರಾ ತಾಲೂಕಿನ ಸಯಾಖಾ ಜಿಐಡಿಸಿ ಕೈಗಾರಿಕಾ ಪ್ರದೇಶದಲ್ಲಿರುವ ’ಸೆನ್ಜಿಲ್ ಫಾರ್ಮಾಸ್ಯುಟಿಕಲ್ ಕೆಮಿಕಲ್ಸ್ ಪ್ರೈವೇಟ್ ಲಿಮಿಟೆಡ್’ ಔಷಧ ಕಾರ್ಖಾನೆಯಲ್ಲಿ ಶುಕ್ರವಾರ ತಡರಾತ್ರಿ ಭಾರಿ ಸ್ಫೋಟ ಸಂಭವಿಸಿದ್ದು, ಐವರು ಕಾರ್ಮಿಕರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ ಮತ್ತು ಆರು ಮಂದಿ ಗಾಯಗೊಂಡಿದ್ದಾರೆ.


ಕೇವಲ ಒಂದು ವರ್ಷದ ಹಿಂದೆ ಸ್ಥಾಪನೆಯಾದ ಈ ಔಷಧ ಘಟಕದಲ್ಲಿ ರಾತ್ರಿ ವೇಳೆ ನಿರ್ಮಾಣ ಹಾಗೂ ಹೈಡ್ರೋಜನೀಕರಣ ಕಾರ್ಯಾಚರಣೆಗಳು ನಡೆಯುತ್ತಿದ್ದವು. ಈ ವೇಳೆ ಯಂತ್ರೋಪಕರಣಗಳಲ್ಲಿ ದೋಷ ಉಂಟಾಗಿ, ಕಾರ್ಖಾನೆಯಲ್ಲಿದ್ದ ೧೫,೦೦೦ ಲೀಟರ್ ಸಾಮರ್ಥ್ಯದ ರಾಸಾಯನಿಕ ಪಾತ್ರೆ (ರಿಯಾಕ್ಟರ್) ಪ್ರಚಂಡ ಶಬ್ದದೊಂದಿಗೆ ಸ್ಫೋಟಗೊಂಡಿದೆ. ಸ್ಫೋಟದ ತೀವ್ರತೆ ಎಷ್ಟು ಭಯಾನಕವಾಗಿತ್ತೆಂದರೆ, ಇದರ ಶಬ್ದ ಸುಮಾರು ೧೫ ಕಿಲೋಮೀಟರ್ ದೂರದವರೆಗೆ ಕೇಳಿಸಿದೆ.

ಸ್ಫೋಟದ ಬೆನ್ನಲ್ಲೇ ದಟ್ಟವಾದ ಹೊಗೆ ಆವರಿಸಿ ದೊಡ್ಡ ಪ್ರಮಾಣದಲ್ಲಿ ಜ್ವಾಲೆಗಳು ಭುಗಿಲೆದ್ದಿದ್ದು, ಘಟನಾ ಸ್ಥಳದ ಸುತ್ತಮುತ್ತಲಿನ ನಿವಾಸಿಗಳಲ್ಲಿ ತೀವ್ರ ಭಯಭೀತಿ ಮೂಡಿಸಿದೆ. ಸ್ಫೋಟದ ರಭಸಕ್ಕೆ ಕಾರ್ಖಾನೆಯ ಛಾವಣಿ ಹಾಗೂ ಯಂತ್ರೋಪಕರಣಗಳು ಸಂಪೂರ್ಣವಾಗಿ ಹಾನಿಗೀಡಾಗಿವೆ. ಅಲ್ಲದೆ, ರಾಸಾಯನಿಕ ಅನಿಲ ಸೋರಿಕೆಯಾಗಿರುವ ಶಂಕೆಯೂ ವ್ಯಕ್ತವಾಗಿದೆ.


ಅಪಘಾತದ ಮಾಹಿತಿ ಲಭ್ಯವಾಗುತ್ತಿದ್ದಂತೆ ಅಗ್ನಿಶಾಮಕ ದಳದ ಸಿಬ್ಬಂದಿ ಹಾಗೂ ವಾಗ್ರಾ ಪೊಲೀಸರು ತಕ್ಷಣವೇ ಸ್ಥಳಕ್ಕೆ ಧಾವಿಸಿ, ತೀವ್ರ ಕಾರ್ಯಾಚರಣೆ ನಡೆಸಿ ಬೆಂಕಿಯನ್ನು ನಂದಿಸುವಲ್ಲಿ ಯಶಸ್ವಿಯಾಗಿದ್ದಾರೆ. ಈ ದುರ್ಘಟನೆಯಲ್ಲಿ ತೀವ್ರವಾಗಿ ಸುಟ್ಟುಹೋಗಿದ್ದ ಮೃತದೇಹಗಳನ್ನು ಮರಣೋತ್ತರ ಪರೀಕ್ಷೆಗಾಗಿ ಭರೂಚ್‌ನ ಸಿವಿಲ್ ಆಸ್ಪತ್ರೆಗೆ ಸಾಗಿಸಲಾಗಿದೆ.

ಹಾಗೂ ಗಾಯಗೊಂಡ ಆರು ಜನ ಕಾರ್ಮಿಕರನ್ನು ಮೊದಲು ನಾಗರಿಕ ಆಸ್ಪತ್ರೆಗೆ ದಾಖಲಿಸಿ, ಹೆಚ್ಚಿನ ಚಿಕಿತ್ಸೆಗಾಗಿ ಭರೂಚ್‌ನ ಅಪೆಕ್ಸ್ ಆಸ್ಪತ್ರೆ ಹಾಗೂ ವಡೋದರಾದ ಖಾಸಗಿ ಆಸ್ಪತ್ರೆಗಳಿಗೆ ವರ್ಗಾಯಿಸಲಾಗಿದೆ. ಸದ್ಯ ಪೊಲೀಸರು ಮತ್ತು ಆಡಳಿತ ಯಂತ್ರಂಗವು ಸ್ಥಳದಲ್ಲಿ ಪರಿಶೀಲನೆ ಮುಂದುವರಿಸಿದ್ದು, ಅಪಘಾತಕ್ಕೆ ನಿಖರ ಕಾರಣವೇನು ಎಂಬ ಬಗ್ಗೆ ತನಿಖೆ ನಡೆಸುತ್ತಿದ್ದಾರೆ.