
ಕೋಲಾರ.ಮೇ,೮-ಸುಪ್ರೀಂ ಕೋರ್ಟ್ನಲ್ಲಿ ದೀರ್ಘಕಾಲದಿಂದ ಬಾಕಿ ಉಳಿದಿರುವ ಪ್ರಕರಣಗಳನ್ನು ಶೀಘ್ರವಾಗಿ ಮತ್ತು ಸೌಹಾರ್ದಯುತವಾಗಿ ಇತ್ಯರ್ಥಪಡಿಸಿಕೊಳ್ಳಲು ಸಾರ್ವಜನಿಕರಿಗೆ ಸುಪ್ರೀಂ ಕೋರ್ಟ್ ಐತಿಹಾಸಿಕ ಅವಕಾಶವೊಂದನ್ನು ಕಲ್ಪಿಸಿದೆ. ಈ ಕುರಿತು ಇಂದು ಹೈಕೋರ್ಟ್ ನ್ಯಾಯಮೂರ್ತಿಗಳಾದ ಗೌರವಾನ್ವಿತ ಅನು ಶಿವರಾಮನ್ ಮತ್ತು ಆರ್. ದೇವದಾಸ್ ಅವರು ಜಂಟಿ ಸುದ್ದಿಗೋಷ್ಠಿ ನಡೆಸಿ ಮಾಹಿತಿ ನೀಡಿದರು.
ಈ ವಿಶೇಷ ಅಭಿಯಾನವು ಆಗಸ್ಟ್ ೨೧, ೨೨ ಮತ್ತು ೨೩ರಂದು ನಡೆಯಲಿದೆ.
ಸಾರ್ವಜನಿಕರು ದೆಹಲಿಗೆ ಹೋಗುವ ಅಗತ್ಯವಿಲ್ಲ. ಬದಲಾಗಿ, ತಾವು ಇರುವ ಜಿಲ್ಲೆಯ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರವನ್ನು ಸಂಪರ್ಕಿಸಿ ವ್ಯಾಜ್ಯ ಪರಿಹರಿಸಿಕೊಳ್ಳಬಹುದು.
ಈಗಾಗಲೇ ರಾಜ್ಯಾದ್ಯಂತ ಇಂತಹ ಸುಮಾರು ೪,೩೨೮ ಪ್ರಕರಣಗಳನ್ನುಈ ಅಭಿಯಾನಕ್ಕಾಗಿ ಗುರುತಿಸಲಾಗಿದೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ನ್ಯಾಯಮೂರ್ತಿ ಅನು ಶಿವರಾಮನ್ ಅವರು, “ಜನಸಾಮಾನ್ಯರ ಸಮಯ ಮತ್ತು ಹಣವನ್ನು ಉಳಿಸುವ ಉದ್ದೇಶದಿಂದ ಸುಪ್ರೀಂ ಕೋರ್ಟ್ ಈ ವಿಶೇಷ ಯೋಜನೆಯನ್ನು ರೂಪಿಸಿದೆ. ಉಭಯ ಪಕ್ಷಗಾರರು ಒಪ್ಪಿಗೆ ಸೂಚಿಸಿದರೆ ಸ್ಥಳೀಯವಾಗಿಯೇ ಪ್ರಕರಣಗಳನ್ನು ಇತ್ಯರ್ಥಪಡಿಸಿಕೊಳ್ಳಲು ಇದು ನೆರವಾಗಲಿದೆ” ಎಂದರು.
ಮತ್ತೊಬ್ಬ ನ್ಯಾಯಮೂರ್ತಿಗಳಾದ ಆರ್. ದೇವದಾಸ್ ಅವರು ಮಾತನಾಡಿ, “ಇದು ಸರ್ವೋಚ್ಚ ನ್ಯಾಯಾಲಯದ ಇತಿಹಾಸದಲ್ಲೇ ಅತ್ಯಂತ ಮಹತ್ವದ ಮತ್ತು ಮೊದಲ ಪ್ರಯತ್ನವಾಗಿದೆ. ಬಹುವರ್ಷಗಳಿಂದ ನ್ಯಾಯಕ್ಕಾಗಿ ಕಾಯುತ್ತಿರುವವರಿಗೆ ಇದು ಸದವಕಾಶ. ಈ ಪ್ರಕ್ರಿಯೆಗೆ ವಕೀಲರು ಯಾವುದೇ ಅಡ್ಡಿಪಡಿಸುವುದಿಲ್ಲ ಎಂದು ನಾವು ಸ್ಪಷ್ಟಪಡಿಸುತ್ತೇವೆ,” ಎಂದು ತಿಳಿಸಿದರು.
ಸುಪ್ರೀಂ ಕೋರ್ಟ್ನಲ್ಲಿ ಪ್ರಕರಣಗಳನ್ನು ಹೊಂದಿರುವ ಪಕ್ಷಗಾರರು ನೇರವಾಗಿ ತಮ್ಮ ಜಿಲ್ಲೆಯ ಪ್ರಧಾನ ನ್ಯಾಯಾಧೀಶರು ಅಥವಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿಗಳನ್ನು ಸಂಪರ್ಕಿಸಿ, ತಮ್ಮ ಕೇಸನ್ನು ಬಗೆಹರಿಸಿಕೊಳ್ಳುವ ಇಚ್ಛೆಯನ್ನು ವ್ಯಕ್ತಪಡಿಸಬಹುದು. ಜಿಲ್ಲಾ ಮಟ್ಟದಲ್ಲಿ ಇದಕ್ಕಾಗಿ ಅಗತ್ಯವಿರುವ ಎಲ್ಲಾ ತಾಂತ್ರಿಕ ಮತ್ತು ಕಾನೂನು ವ್ಯವಸ್ಥೆಗಳನ್ನು ಮಾಡಿಕೊಳ್ಳಲಾಗುವುದು.
ಈ ಅಭಿಯಾನವು ಕೇವಲ ಸುಪ್ರೀಂ ಕೋರ್ಟ್ನಲ್ಲಿ ಬಾಕಿ ಇರುವ ಪ್ರಕರಣಗಳಿಗೆ ಮಾತ್ರ ಸೀಮಿತವಾಗಿರುತ್ತದೆ. ಎಂದರು.
ಸುದ್ದಿಗೋಷ್ಠಿಯಲ್ಲಿ ರಾಜ್ಯದ ಎಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿಗಳು ಕೋಲಾರದ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿಗಳಾದ ಆರ್. ನಟೇಶ್ ಹಾಗೂ ಇತರ ಗಣ್ಯರು ಉಪಸ್ಥಿತರಿದ್ದರು.


























