
ಬೆಂಗಳೂರು, ಅ.೧೭:”ಕಾನೂನು ಶಿಕ್ಷಣ ಮತ್ತು ಸಾಂಸ್ಥಿಕ ಮೂಲಸೌಕರ್ಯಗಳನ್ನು ಬಲಪಡಿಸಲು ರಾಜ್ಯ ಸರ್ಕಾರ ಬದ್ಧವಾಗಿದ್ದು, ರಾಷ್ಟ್ರೀಯ ಕಾನೂನು ಶಾಲೆ (ಎನ್ಎಲ್ಎಸ್ಐಯು) ಕ್ಯಾಂಪಸ್ ವಿಸ್ತರಣೆಗೆ ಸಂಪೂರ್ಣ ನೆರವು ನೀಡಲಾಗುವುದು” ಎಂದು ಸಿಎಂ ಡಿ ಕೆ ಶಿವಕುಮಾರ್ ಅವರು ಭರವಸೆ ನೀಡಿದರು.
ನಾಗರಭಾವಿಯಲ್ಲಿರುವ ಬೆಂಗಳೂರು ರಾಷ್ಟ್ರೀಯ ಕಾನೂನು ಶಾಲೆ ವಿಶ್ವವಿದ್ಯಾಲಯ (ಓಐSIU) ದ ದಕ್ಷಿಣ ಬ್ಲಾಕ್, ಸಭಾಂಗಣ ಹಾಗೂ ವಿದ್ಯಾರ್ಥಿ ಕೇಂದ್ರ ನಿರ್ಮಾಣದ ಶಂಕುಸ್ಥಾಪನೆ ಕಾರ್ಯಕ್ರಮದಲ್ಲಿ ಶಿವಕುಮಾರ್ ಅವರು ಶನಿವಾರ ಮಾತನಾಡಿದರು.
“ನ್ಯಾಷನಲ್ ಲಾ ಸ್ಕೂಲ್ ಸ್ಥಾಪನೆಯಲ್ಲಿ ಕರ್ನಾಟಕ ನೇತೃತ್ವ ವಹಿಸಿರುವುದಕ್ಕೆ ನನಗೆ ಹೆಮ್ಮೆಯಿದೆ. ತಮ್ಮ ವಿದ್ಯಾರ್ಥಿ ನಾಯಕತ್ವದ ದಿನಗಳಲ್ಲಿ ಈ ಸಂಸ್ಥೆಯ ಪ್ರಾರಂಭವನ್ನು ದೇಶಾದ್ಯಂತ ಅಪಾರ ಉತ್ಸಾಹದೊಂದಿಗೆ ಸಂಭ್ರಮಿಸಿದ್ದೆವು. ಈ ಪ್ರತಿಷ್ಠಿತ ಸಂಸ್ಥೆಯನ್ನು ರಕ್ಷಿಸಲು ಮತ್ತು ಅಭಿವೃದ್ಧಿಪಡಿಸಲು ಸರ್ಕಾರ ಸದಾ ಸಿದ್ಧವಾಗಿದೆ” ಎಂದು ತಿಳಿಸಿದರು.
ಜಮೀನು ಮಂಜೂರಾತಿ, ಆರ್ಥಿಕ ನೆರವಿನ ಭರವಸೆ
“ಕ್ಯಾಂಪಸ್ ಮೂಲಸೌಕರ್ಯಗಳ ಅಗತ್ಯಗಳಿಗೆ ಭೂಮಿಯ ಕೊರತೆಯ ಬಗ್ಗೆ ಆತಂಕ ಪಡುವ ಅಗತ್ಯವಿಲ್ಲ. ೭ ಎಕರೆ ಆಗಿರಲಿ ಅಥವಾ ೧೦ ಎಕರೆ ಆಗಿರಲಿ, ನಿಮಗೆ ಏನು ಅಗತ್ಯವಿದೆಯೋ ಅದನ್ನು ನೀಡಲು ಸರ್ಕಾರ ಬದ್ಧವಾಗಿದೆ. ಜಮೀನು ಮಂಜೂರಾತಿ ಹಾಗೂ ಆರ್ಥಿಕ ನೆರವು ಎರಡನ್ನೂ ಒದಗಿಸಲಾಗುವುದು” ಎಂದು ಅಭಯ ನೀಡಿದರು.
ಕುಲಪತಿಗಳು ಹಾಗೂ ಅವರ ತಂಡಕ್ಕೆ ಅಭಿನಂದನೆ ಸಲ್ಲಿಸಿದ ಮುಖ್ಯಮಂತ್ರಿಗಳು, “ಸಂಸ್ಥೆಯ ಈ ಮೂಲಸೌಕರ್ಯ ವಿಸ್ತರಣೆಯು ಪ್ರಜಾಪ್ರಭುತ್ವ ಮತ್ತು ಕಾನೂನಿನ ಆಡಳಿತವನ್ನು ಎತ್ತಿಹಿಡಿಯುವ ಭವಿಷ್ಯದ ನಾಯಕರನ್ನು ರೂಪಿಸಲು ನೆರವಾಗಲಿದೆ” ಎಂಬ ವಿಶ್ವಾಸ ವ್ಯಕ್ತಪಡಿಸಿದರು.






















