Home ಜಿಲ್ಲೆ ವಾರ್ಡ್ ನಂ. 11ರಲ್ಲಿ ಮೂಲಭೂತ ಸೌಕರ್ಯಗಳ ಕೊರತೆ: ಸ್ಥಳೀಯರ ಆಕ್ರೋಶ

ವಾರ್ಡ್ ನಂ. 11ರಲ್ಲಿ ಮೂಲಭೂತ ಸೌಕರ್ಯಗಳ ಕೊರತೆ: ಸ್ಥಳೀಯರ ಆಕ್ರೋಶ

ಯಾದಗಿರಿ:ಮೇ.10: ನಗರದ ವಾರ್ಡ್ ನಂಬರ್ 11ರಲ್ಲಿ ಮೂಲಭೂತ ಸೌಕರ್ಯಗಳ ಕೊರತೆಯಿಂದ ಸಾರ್ವಜನಿಕರು ತೀವ್ರ ಸಂಕಷ್ಟ ಅನುಭವಿಸುತ್ತಿದ್ದಾರೆ ಎಂದು ಸ್ಥಳೀಯ ನಿವಾಸಿ ಆನಂದ್ ಕಾಡಮಗೆರಾ (ಕೊಲಿವಾಡ್) ಆರೋಪಿಸಿದರು.

ನಗರದಲ್ಲಿ ಪತ್ರಕರ್ತರೊಂದಿಗೆ ಮಾತನಾಡಿದ ಅವರು, ವಾರ್ಡ್‍ನ ಅನೇಕ ಪ್ರದೇಶಗಳಲ್ಲಿ ಮೋರಿ ಮತ್ತು ಚರಂಡಿ ನೀರು ರಸ್ತೆಗಳಿಗೆ ಹರಿದು ಬರುತ್ತಿದ್ದು, ಜನರು ದಿನನಿತ್ಯ ಓಡಾಟ ನಡೆಸಲು ಪರದಾಡುವ ಪರಿಸ್ಥಿತಿ ನಿರ್ಮಾಣವಾಗಿದೆ. ದುರ್ವಾಸನೆ ಹಾಗೂ ಅಸ್ವಚ್ಛತೆಯಿಂದ ಸಾರ್ವಜನಿಕ ಆರೋಗ್ಯಕ್ಕೂ ಅಪಾಯ ಎದುರಾಗುತ್ತಿದೆ ಎಂದು ದೂರಿದರು.

ಈ ಕುರಿತು ವಾರ್ಡ್ ಸದಸ್ಯ ಚನ್ನಕೇಶವ ಗೌಡ ಅವರಿಗೆ ಹಲವು ಬಾರಿ ಮನವಿ ಸಲ್ಲಿಸಿ, ಸ್ಥಳಕ್ಕೆ ಭೇಟಿ ನೀಡುವಂತೆ ಮನವಿ ಮಾಡಿದ್ದರೂ ಯಾವುದೇ ಸ್ಪಂದನೆ ದೊರೆತಿಲ್ಲ. ಕರೆ ಮಾಡಿದಾಗಲೂ ನೆಪಮಾತ್ರದ ಉತ್ತರ ನೀಡಲಾಗುತ್ತಿದ್ದು, ಸ್ಥಳೀಯ ಸಮಸ್ಯೆಗಳ ಪರಿಶೀಲನೆಗೆ ಮುಂದಾಗಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.

ವಾರ್ಡ್‍ನಲ್ಲಿ ಸಾರ್ವಜನಿಕ ಶೌಚಾಲಯಗಳ ಕೊರತೆಯಿಂದ ಮಹಿಳೆಯರು ಮತ್ತು ಬಾಲಕಿಯರು ಬಹಿರ್ದೆಸೆಗೆ ತೆರಳುವ ದುಸ್ಥಿತಿ ಎದುರಿಸುತ್ತಿದ್ದಾರೆ. ಇದು ಮಹಿಳೆಯರ ಗೌರವ ಹಾಗೂ ಸುರಕ್ಷತೆಗೆ ಧಕ್ಕೆ ತರುವ ಸಂಗತಿಯಾಗಿದ್ದು, ಸಂಬಂಧಪಟ್ಟ ಅಧಿಕಾರಿಗಳು ತಕ್ಷಣ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.

ಇದೇ ವೇಳೆ ವಾರ್ಡ್‍ನಲ್ಲಿ ಸಮರ್ಪಕ ಕುಡಿಯುವ ನೀರಿನ ವ್ಯವಸ್ಥೆಯೂ ಇಲ್ಲದಿರುವುದರಿಂದ ನಿವಾಸಿಗಳು ತೀವ್ರ ತೊಂದರೆ ಅನುಭವಿಸುತ್ತಿದ್ದಾರೆ. ಬಸವಣ್ಣ ದೇವರ ಗುಡಿಯಿಂದ ಸರ್ಕಾರಿ ಪ್ರಾಥಮಿಕ ಶಾಲೆ ಹಾಗೂ ಎಪಿಎಂಸಿ ಗಂಜ್ ಪ್ರದೇಶದವರೆಗೆ ಸಮರ್ಪಕ ಪೈಪ್‍ಲೈನ್ ಸಂಪರ್ಕ ಕಲ್ಪಿಸಿದರೆ ವಾರ್ಡ್‍ನ ಜನರಿಗೆ ಅನುಕೂಲವಾಗುತ್ತದೆ ಎಂದು ತಿಳಿಸಿದರು.

ನಗರಸಭೆ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳು ತಕ್ಷಣ ವಾರ್ಡ್‍ಗೆ ಭೇಟಿ ನೀಡಿ ಸಮಸ್ಯೆಗಳನ್ನು ಪರಿಶೀಲಿಸಿ ಶಾಶ್ವತ ಪರಿಹಾರ ಒದಗಿಸಬೇಕು ಎಂದು ಸ್ಥಳೀಯರು ಒತ್ತಾಯಿಸಿದರು.