
ಬೆಂಗಳೂರು,ಅ.೩೧-ದೀಪಾವಳಿ ಹಬ್ಬ ಹಾಗೂ ಸಾಲು ಸಾಲು ರಜೆಗಳ ಹಿನ್ನೆಲೆಯಲ್ಲಿ ಊರುಗಳಿಗೆ ತೆರಳುವ ಸಾರ್ವಜನಿಕ ಪ್ರಯಾಣಿಕರ ಅನುಕೂಲಕ್ಕಾಗಿ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮವು (ಕೆಎಸ್ಆರ್ಟಿಸಿ) ಬೃಹತ್ ಮಟ್ಟದ ಸಾರಿಗೆ ವ್ಯವಸ್ಥೆಯನ್ನು ಕಲ್ಪಿಸಿದೆ. ನವೆಂಬರ್ ೬ರಿಂದ ೮ರವರೆಗೆ ಬೆಂಗಳೂರಿನಿಂದ ರಾಜ್ಯದ ವಿವಿಧ ಜಿಲ್ಲೆಗಳು ಹಾಗೂ ನೆರೆ ರಾಜ್ಯಗಳ ಪ್ರಮುಖ ನಗರಗಳಿಗೆ ಒಟ್ಟು ೨,೬೦೦ ಹೆಚ್ಚುವರಿ ವಿಶೇಷ ಬಸ್ಗಳನ್ನು ಕಾರ್ಯಾಚರಣೆ ಮಾಡಲು ನಿಗಮ ನಿರ್ಧರಿಸಿದೆ. ನವೆಂಬರ್ ೭ ಮತ್ತು ೮ರಂದು ವಾರಾಂತ್ಯದ ರಜೆ ಹಾಗೂ ನವೆಂಬರ್ ೮ರಂದು ನರಕ ಚತುರ್ದಶಿ ಹಬ್ಬವಿರುವುದರಿಂದ ಪ್ರಯಾಣಿಕರ ಸಂಖ್ಯೆಯಲ್ಲಿ ಭಾರಿ ಏರಿಕೆಯಾಗುವ ನಿರೀಕ್ಷೆಯಿದೆ. ಈ ಹಿನ್ನೆಲೆಯಲ್ಲಿ ಹಬ್ಬ ಮುಗಿಸಿ ಮರಳಿ ಬೆಂಗಳೂರಿಗೆ ಆಗಮಿಸುವ ಪ್ರಯಾಣಿಕರಿಗಾಗಿ ನವೆಂಬರ್ ೧೦ ಮತ್ತು ೧೧ರಂದು ವಿವಿಧ ಸ್ಥಳಗಳಿಂದ ವಿಶೇಷ ಬಸ್ ಸೇವೆ ಲಭ್ಯವಿರಲಿದೆ.
ಈ ವಿಶೇಷ ಬಸ್ಗಳು ಬೆಂಗಳೂರಿನ ಕೆಂಪೇಗೌಡ ಬಸ್ ನಿಲ್ದಾಣ, ಮೈಸೂರು ರಸ್ತೆ ಬಸ್ ನಿಲ್ದಾಣ ಹಾಗೂ ಶಾಂತಿನಗರ ಬಿಎಂಟಿಸಿ ಬಸ್ ನಿಲ್ದಾಣಗಳಿಂದ ನಿರ್ಗಮಿಸಲಿವೆ. ಹೆಚ್ಚುವರಿಯಾಗಿ, ಮುಂಗಡ ಟಿಕೆಟ್ ಕಾಯ್ದಿರಿಸಿದ ಪ್ರಯಾಣಿಕರ ಸುಲಭ ಸಂಚಾರಕ್ಕಾಗಿ ಶಾಂತಿನಗರ, ವಿಜಯನಗರ, ಯಶವಂತಪುರ, ಜಯನಗರ ಟಿಟಿಎಂಸಿಗಳು, ಮಲ್ಲೇಶ್ವರಂ ೧೮ನೇ ಕ್ರಾಸ್, ಬಸವೇಶ್ವರನಗರ, ಎಲೆಕ್ಟ್ರಾನಿಕ್ ಸಿಟಿ, ಅತ್ತಿಬೆಲೆ ಮತ್ತು ಟಿನ್ ಫ್ಯಾಕ್ಟರಿ ಸೇರಿದಂತೆ ನಗರದ ವಿವಿಧ ಪ್ರಮುಖ ನಿಲ್ದಾಣಗಳಿಂದಲೂ ಬಸ್ಗಳ ಕಾರ್ಯಾಚರಣೆ ನಡೆಯಲಿದೆ. ಕೆಂಪೇಗೌಡ ಬಸ್ ನಿಲ್ದಾಣದಿಂದ ಮಂಗಳೂರು, ಉಡುಪಿ, ಕುಂದಾಪುರ, ಧರ್ಮಸ್ಥಳ, ಕುಕ್ಕೆ ಸುಬ್ರಹ್ಮಣ್ಯ, ಶಿವಮೊಗ್ಗ, ಹುಬ್ಬಳ್ಳಿ, ಬೆಳಗಾವಿ, ವಿಜಯಪುರ, ಕಲಬುರಗಿ, ಬಳ್ಳಾರಿ ಮುಂತಾದ ಕರಾವಳಿ, ಉತ್ತರ ಹಾಗೂ ಮಧ್ಯ ಕರ್ನಾಟಕದ ಭಾಗಗಳಿಗೆ ಬಸ್ಗಳು ತೆರಳಲಿವೆ. ಮೈಸೂರು ರಸ್ತೆ ಬಸ್ ನಿಲ್ದಾಣದಿಂದ ಮೈಸೂರು, ಹುಣಸೂರು, ವಿರಾಜಪೇಟೆ, ಕುಶಾಲನಗರ ಹಾಗೂ ಮಡಿಕೇರಿ ಮಾರ್ಗವಾಗಿ ವಿಶೇಷ ಸೇವೆಗಳನ್ನು ಒದಗಿಸಲಾಗಿದೆ.
ಹೊರರಾಜ್ಯ ಪ್ರಯಾಣಿಕರಿಗಾಗಿ ಶಾಂತಿನಗರ ಬಸ್ ನಿಲ್ದಾಣದಿಂದ ತಮಿಳುನಾಡಿನ ಚೆನ್ನೈ, ಮಧುರೈ, ಕೊಯಮತ್ತೂರು ಹಾಗೂ ಕೇರಳದ ಪಾಲಕ್ಕಾಡ್, ತ್ರಿಶ್ಶೂರ್, ಎರ್ನಾಕುಲಂ, ಕೋಝಿಕೋಡ್ಗೆ ಬಸ್ಗಳನ್ನು ನಿಯೋಜಿಸಲಾಗಿದೆ. ಜೊತೆಗೆ ಆಂಧ್ರಪ್ರದೇಶದ ತಿರುಪತಿ, ವಿಜಯವಾಡ ಹಾಗೂ ತೆಲಂಗಾಣದ ಹೈದರಾಬಾದ್ಗೂ ವಿಶೇಷ ಸಾರಿಗೆ ವ್ಯವಸ್ಥೆ ಇರಲಿದೆ.
ಪ್ರಯಾಣಿಕರ ಅನುಕೂಲಕ್ಕಾಗಿ ಮುಂಗಡ ಟಿಕೆಟ್ ಬುಕಿಂಗ್ಗೆ ನಿಗಮವು ವಿಶೇಷ ರಿಯಾಯಿತಿಗಳನ್ನು ಘೋಷಿಸಿದೆ. ನಾಲ್ಕು ಅಥವಾ ಅದಕ್ಕಿಂತ ಹೆಚ್ಚು ಪ್ರಯಾಣಿಕರು ಒಟ್ಟಿಗೆ ಬುಕ್ ಮಾಡಿದರೆ ಶೇಕಡಾ ೫ ರಷ್ಟು ರಿಯಾಯಿತಿ ಹಾಗೂ ಹೋಗುವ-ಬರುವ ಟಿಕೆಟ್ಗಳನ್ನು ಒಟ್ಟಿಗೆ ಕಾಯ್ದಿರಿಸಿದರೆ ಹಿಂದಿರುಗುವ ಪ್ರಯಾಣದ ದರದಲ್ಲಿ ಶೇಕಡಾ ೧೦ ರಷ್ಟು ರಿಯಾಯಿತಿ ದೊರೆಯಲಿದೆ. ಸಾರ್ವಜನಿಕರು ನಿಗಮದ ಅಧಿಕೃತ ವೆಬ್ಸೈಟ್ ಅಥವಾ ಪ್ರಮುಖ ಟಿಕೆಟ್ ಕೌಂಟರ್ಗಳ ಮೂಲಕ ಮುಂಗಡ ಬುಕಿಂಗ್ ಸೌಲಭ್ಯವನ್ನು ಪಡೆದುಕೊಳ್ಳಬಹುದಾಗಿದೆ.


























