
ಟೆಹರಾನ್,ಏ.೨೦- ಪಶ್ಚಿಮ ಏಷ್ಯಾದಲ್ಲಿ ನಡೆಯುತ್ತಿರುವ ಸಂಘರ್ಷ ಕೊನೆಗೊಳಿಸುವ ನಿಟ್ಟಿನಲ್ಲಿ ಎರಡು ವಾರಗಳ ತಾತ್ಕಾಲಿಕ ಕದನ ವಿರಾಮ ನಾಳೆ ಕೊನೆಗೊಳ್ಳುವ ನಡುವೆಯೇ ಪಾಕ್‌ನಲ್ಲಿ ಅಮೆರಿಕದೊಂದಿಗೆ ಎರಡನೇ ಸುತ್ತಿನ ಶಾಂತಿ ಮಾತುಕತೆಯಲ್ಲಿ ಭಾಗವಹಿಸುವುದಿಲ್ಲ ಎಂದು ಇರಾನ್ ಕಡ್ಡಿ ಮುರಿದಂತೆ ಹೇಳಿದೆ.
ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಘೋಷಣೆಯಂತೆ ಪಾಕಿಸ್ತಾನದಲ್ಲಿ ಇಂದಿನಿಂದ ಅಮೆರಿಕ ಮತ್ತು ಇರಾನ್ ನಡುವೆ ಎರಡನೇ ಸುತ್ತಿನ ಶಾಂತಿ ಮಾತುಕತೆ ಪ್ರಾರಂಭವಾಗಬೇಕಿತ್ತು. ಆದರೆ ಅಮೆರಿಕವು ಕದನ ವಿರಾಮ ಒಪ್ಪಂದವನ್ನು ಉಲ್ಲಂಘಿಸಿದೆ ಎಂದು ಆರೋಪಿಸಿ ಇರಾನ್ ಮಾತುಕತೆಯಲ್ಲಿ ಪಾಲ್ಗೊಳ್ಳುವುದಿಲ್ಲ ಎಂದು ಸ್ಪಷ್ಟಪಡಿಸಿದೆ.
ಅಮೆರಿಕ ಜೊತೆಗಿನ ಮತ್ತೊಂದು ಸುತ್ತಿನ ಮಾತುಕತೆಯಲ್ಲಿ ಭಾಗವಹಿಸುವ ಯಾವುದೇ ಯೋಜನೆಯಿಲ್ಲ ಎಂದು ಇರಾನ್ ಆಡಳಿತದ ಮೂಲಗಳು ಹೇಳಿರುವುದಾಗಿ ಇರಾನ್ ಸರ್ಕಾರಿ ಸ್ವಾಮ್ಯದ ಪ್ರಸಾರಕ ಸಂಸ್ಥೆ ಐಆರ್‌ಐಬಿ ವರದಿ ಮಾಡಿದೆ. ಅಮೆರಿಕ ಹಾಗೂ ಇಸ್ರೇಲ್ ಪಡೆಗಳು ಇರಾನ್ ಮೇಲೆ ಕಳೆದ ಫೆ. ೨೮ ರಂದು ಜಂಟಿ ದಾಳಿ ನಡೆಸಿದಾಗಿನಿಂದ ಪಶ್ಚಿಮ ಏಷ್ಯಾದಲ್ಲಿ ಉದ್ವಿಗ್ನತೆ ಸೃಷ್ಟಿಯಾಗಿ ಯುದ್ಧದ ವಾತಾವರಣ ರೂಪುಗೊಂಡಿತ್ತು.
ಯುದ್ಧ ಕಾರ್‍ಯತಂತ್ರದ ಭಾಗವಾಗಿ ಇರಾನ್ ಸೇನೆ ಹೊರ್ಮುಜ್ ಜಲಸಂಧಿಯನ್ನು ಸಂಪೂರ್ಣ ನಿರ್ಬಂದಿಸಿತ್ತು ಇದರಿಂದ ಜಾಗತಿಕವಾಗಿ ತೈಲ ಅಭಾವ ಸೃಷ್ಟಿಯಾಗಿ ಜಾಗತಿಕ ಸಮುದಾಯ ಯುದ್ಧ ಕೊನೆಗೊಳಿಸುವಂತೆ ಎರಡು ದೇಶಗಳಿಗೆ ಒತ್ತಾಯಿಸಿದ್ದವು. ಅದರಂತೆ ಇರಾನ್ ಹಾಗೂ ಅಮೆರಿಕ, ಇಸ್ರೇಲ್ ಕಳೆದ ಏ. ೮ ರಂದು ಎರಡು ವಾರಗಳ ಮಟ್ಟಿಗೆ ಕದನ ವಿರಾಮ ಘೋಷಿಸಿದ್ದವು.
ಈ ಕದನ ವಿರಾಮ ಜಾರಿಯಲ್ಲಿದ್ದಾಗಲೇ ಪಾಕಿಸ್ತಾನದ ಇಸ್ಲಾಮಾಬಾದ್ ನಲ್ಲಿ ಅಮೆರಿಕ ಮತ್ತು ಇರಾನ್ ನಡುವೆ ನಡೆದಿದ್ದ, ಶಾಂತಿ ಮಾತುಕತೆಗಳು ವಿಫಲವಾಗಿದ್ದವು. ಇದಾದ ಬಳಿಕ ಅಮೆರಿಕ ಹೋರ್ಮುಜ್ ಜಲಸಂಧಿಯ ಮೇಲೆ ದಿಗ್ಬಂಧನ ಏರಿತ್ತು. ಇದರಿಂದ ಕೆರಳಿರುವ ಇರಾನ್ ನಾಳೆಯಿಂದ ಇಂದಿನಿಂದ ಆರಂಭವಾಗಬೇಕಿದ್ದ ಶಾಂತಿಮಾತುಕತೆಯಲ್ಲಿ ಪಾಲ್ಗೊಳ್ಳುವುದಿಲ್ಲ ಎಂದು ಹೇಳಿದೆ.
ಕದನ ವಿರಾಮ ಉಲ್ಲಂಘಿಸಿರುವ ಅಮೆರಿಕವು ಓಮನ್ ಕೊಲ್ಲಿಯಲ್ಲಿ ಇರಾನ್ ವಾಣಿಜ್ಯ ಹಡುಗಿನ ಮೇಲೆ ಗುಂಡಿನ ದಾಳಿ ನಡೆಸಿ, ಅದರ ಸಂಚಾರಕ್ಕೆ ಅಡ್ಡಿಪಡಿಸಿದೆ ಎಂದು ದೂರಿರುವ ಇರಾನ್ ಇದಕ್ಕೆ ಶೀಘ್ರವೇ ತಕ್ಕಪ್ರತಿಕ್ರಿಯೆ ನೀಡುತ್ತೇವೆ ಎಂದು ತಿಳಿಸಿವೆ.
ಅಮೆರಿಕದ ನಿಲುವಿನಲ್ಲಿ ಪದೇ ಪದೇ ಬದಲಾವಣೆ, ಅಸ್ತಾವ್ಯಕ ಬೇಡಿಕೆಗಳು ಹಡುಗು ಸಂಚಾರಕ್ಕೆ ಅಡ್ಡಿ ಈ ಎಲ್ಲಾ ಕಾರಣಗಳಿಂದ ಅಮೆರಿಕ ಜೊತೆ ಎರಡನೆ ಸುತ್ತಿನ ಮಾತುಕತೆಗೆ ಗೈರುಹಾಜರು ಆಗುತ್ತಿದ್ದೇವೆ ಎಂದು ಇರಾನ್ ಸರ್ಕಾರ ತಿಳಿಸಿದೆ ಎಂದು ಇರಾನ್ ಮಾಧ್ಯಮಗಳು ವರದಿ ಮಾಡಿದೆ.
ಎರಡನೇ ಸುತ್ತಿನ ಮಾತುಕತೆಗೆ ಇರಾನ್ ನಿರಾಕರಿಸಿರುವ ಬೆನ್ನಲ್ಲೇ ಹೊರ್ಮುಜ್ ಜಲಸಂಧಿಯನ್ನು ಮತ್ತೇ ಮುಚ್ಚಲಾಗಿದೆ ಎಂದು ಇರಾನ್ ಸೇನಾ ವಕ್ತಾರ ಇಬ್ರಾಹಿಂ ತಿಳಿಸಿದ್ದಾರೆ.
ಎರಡನೇ ಸುತ್ತಿನ ಶಾಂತಿ ಮಾತುಕತೆಗೆ ಇರಾನ್ ಒಪ್ಪಂದ ಇರುವುದು ಮಧ್ಯಪ್ರಾಚ್ಯದಲ್ಲಿ ಮತ್ತೇ ಯುದ್ಧದ ಆತಂಕವನ್ನು ಸೃಷ್ಟಿಸಿದೆ. ಜೊತೆಗೆ ತೈಲದ ಅಭಾವ ಮತ್ತಷ್ಟು ತೀವ್ರಗೊಳ್ಳುವ ಸಾಧ್ಯತೆಯು ಇದೆ.























