
ಬೆಂಗಳೂರು,ಏ.೨೦-ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ(ಬಿಡಿಎ)ಅಧ್ಯಕ್ಷ ಹಾಗೂ ಹಿರಿಯ ಕಾಂಗ್ರೆಸ್ ಶಾಸಕ ಎನ್ ಎ ಹ್ಯಾರಿಸ್ ಅವರ ಮನೆ ಸೇರಿ ೧೭ ಕಡೆಗಳಲ್ಲಿ ಏಕಕಾಲದಲ್ಲಿ ಜಾರಿ ನಿರ್ದೇಶನಾಲಯ (ಇಡಿ)ದ ಅಧಿಕಾರಿಗಳು ದಾಳಿ ನಡೆಸಿದ್ದಾರೆ.
ಶಾಸಕ ನಲಪಾಡ್ ಹ್ಯಾರಿಸ್ ಹಾಗೂ ಅವರ ಪುತ್ರ ಮೊಹಮ್ಮದ್ ನಲಪಾಡ್ ಅವರ. ಅಶೋಕನಗರದಲ್ಲಿರುವ ಮನೆಗಳಲ್ಲಿ ಬೆಳಿಗ್ಗೆ ೬ ಗಂಟೆಯ ಸುಮಾರಿಗೆ ಇಡಿ ಅಧಿಕಾರಿಗಳು ದಾಳಿ ನಡೆಸಿದ್ದು, ಸಿಆರ್‌ಪಿಎಫ್ ಸಿಬ್ಬಂದಿಯ ಭದ್ರತೆಯೊಂದಿಗೆ ತೀವ್ರ ಪರಿಶೀಲನೆ ಕೈಗೊಂಡಿದ್ದಾರೆ.
ಸುಮಾರು ೧೨ ಮಂದಿ ಇಡಿ ಅಧಿಕಾರಿಗಳ ತಂಡ ಮನೆ ಒಳಗೆ ದಾಖಲೆಗಳು ಮತ್ತು ಇತರೆ ಮಾಹಿತಿಗಳ ಪರಿಶೀಲನೆ ನಡೆಸುತ್ತಿದೆ. ಈ ದಾಳಿ ಹಿಂದಿನ ಕೆಲವು ವರ್ಷಗಳಿಂದ ನಡೆಯುತ್ತಿರುವ ಬಿಟ್ ಕಾಯಿನ್ ಸಂಬಂಧಿತ ಪ್ರಕರಣಗಳ ತನಿಖೆಯ ಭಾಗವಾಗಿದ್ದು, ಪ್ರಮುಖ ಆರೋಪಿಯಾಗಿರುವ ಶ್ರೀಕೃಷ್ಣ (ಶ್ರೀಕಿ) ಜೊತೆ ಸಂಪರ್ಕ ಹೊಂದಿರುವ ಬಗ್ಗೆ ಅನುಮಾನದ ಮೇಲೆ ಈ ದಾಳಿ ನಡೆದಿದೆ. ಆರು ವರ್ಷಗಳ ಹಿಂದೆ ನಡೆದಿದ್ದ ನಾಲ್ಕೂವರೆ ಕೋಟಿ ರೂ ಮೌಲ್ಯದ ಹಣಕಾಸು ವ್ಯವಹಾರ ಈ ದಾಳಿಗೆ ಪ್ರಮುಖ ಕಾರಣವೆಂದು ಹೇಳಲಾಗಿದೆ. ೨೦೨೪ರ ಜೂನ್ ತಿಂಗಳಲ್ಲಿ ಸಿಐಡಿ ವಿಶೇಷ ತನಿಖಾ ದಳ (ಎಸ್ ಐಟಿ) ಮೊಹಮ್ಮದ್ ನಲಪಾಡ್ ಅವರನ್ನು ವಿಚಾರಣೆ ನಡೆಸಿತ್ತು.
ಇದಕ್ಕೂ ಮುನ್ನ, ೨೦೨೧ರಲ್ಲಿ ಸಿಸಿಬಿ ಅಧಿಕಾರಿಗಳಿಂದ ಇಡಿ ಅಗತ್ಯ ಮಾಹಿತಿಯನ್ನು ಸಂಗ್ರಹಿಸಿತ್ತು. ನಂತರ ಸಿಐಡಿ ಅಧಿಕಾರಿಗಳಿಂದ ಅಧಿಕೃತ ಪ್ರಕರಣದ ದಾಖಲೆಗಳನ್ನು ಪಡೆದು ತನಿಖೆಯನ್ನು ಮುಂದುವರಿಸಿತ್ತು.
ಕರ್ನಾಟಕದಲ್ಲಿ ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಹಲವು ಕೇಸ್‌ಗಳು ದಾಖಲಾಗಿದ್ದು, ಕೆಲವು ಪ್ರಕರಣಗಳಲ್ಲಿ ಈಗಾಗಲೇ ಚಾರ್ಜ್ ಶೀಟ್ ಸಲ್ಲಿಕೆಯಾಗಿರುವುದಾಗಿ ತಿಳಿದುಬಂದಿದೆ. ಜಾರಿ ನಿರ್ದೇಶನಾಲಯವು ಪಿಎಮ್‌ಎಲ್‌ಎ ೨೦೦೨ ಅಡಿಯಲ್ಲಿ ಪ್ರಕರಣ ದಾಖಲಿಸಿ ತನಿಖೆ ನಡೆಸುತ್ತಿದೆ.
ತನಿಖೆಯ ಪ್ರಕಾರ, ರಾಷ್ಟ್ರೀಯ ಮತ್ತು ಅಂತರರಾಷ್ಟ್ರೀಯ ಮಟ್ಟದ ವೆಬ್‌ಸೈಟ್‌ಗಳು ಹಾಗೂ ಡಿಜಿಟಲ್ ವಾಲೆಟ್‌ಗಳನ್ನು ಹ್ಯಾಕ್ ಮಾಡಿ ವರ್ಚುವಲ್ ಡಿಜಿಟಲ್ ಆಸ್ತಿಗಳನ್ನು (ಕ್ರಿಸ್ಟೋಕರೆನ್ಸಿ) ಕಳವು ಮಾಡಲಾಗಿದೆ ಎಂಬ ಆರೋಪಗಳಿವೆ.
ಹ್ಯಾಕ್ ಮಾಡಲಾದ ಡೇಟಾ ಮತ್ತು ಹಣವನ್ನು ಕ್ರಿಸ್ಟೋ ಟ್ರೇಡಿಂಗ್ ಪ್ಲಾಟ್‌ಫಾರ್ಮ್‌ಗಳ ಮೂಲಕ ಮಾರಾಟ ಮಾಡಿ, ಆ ಮೂಲಕ ಬಂದ ಹಣವನ್ನು ಬ್ಯಾಂಕ್ ಖಾತೆಗಳ ಮೂಲಕ ವರ್ಗಾವಣೆ ಮಾಡಲಾಗಿದೆ ಎಂಬ ಮಾಹಿತಿ ಹೊರಬಂದಿದೆ.
ಈ ಹಣವನ್ನು ಶ್ರೀಕೃಷ್ಣ ಹಾಗೂ ಅವರ ಸಹಚರರು ವೈಯಕ್ತಿಕ ಲಾಭಕ್ಕಾಗಿ ಬಳಸಿಕೊಂಡಿರುವುದು ತನಿಖೆಯಲ್ಲಿ ಬೆಳಕಿಗೆ ಬಂದಿದೆ. ಜೊತೆಗೆ, ಶ್ರೀಕಿ ಮತ್ತು ರಾಬಿನ್ ಖಂಡೆವಾಲ ನಡುವೆ ಹಣಕಾಸು ವ್ಯವಹಾರಗಳು ನಡೆದಿರುವುದೂ ದೃಢಪಟ್ಟಿದೆ.
ದಾಳಿಯು ಬೆಂಗಳೂರು ಇಡಿ ಘಟಕದಿಂದ ನಡೆಸಲ್ಪಟ್ಟಿದ್ದು, ಬಿಟ್‌ಕಾಯಿನ್ ಹಗರಣಕ್ಕೆ ಸಂಬಂಧಿಸಿದ ಹಣಕಾಸು ಲೆಕ್ಕಾಚಾರಗಳು ಮತ್ತು ಸಂಪರ್ಕಗಳ ಕುರಿತು ಹೆಚ್ಚಿನ ಮಾಹಿತಿ ಸಂಗ್ರಹಿಸುವ ಉದ್ದೇಶ ಹೊಂದಿದೆ
ಶ್ರೀಕಿ ಜೊತೆ ನಲಪಾಡ್ ೬ ವರ್ಷದ ಆರ್ಥಿಕ ವ್ಯವಹಾರ ಹೊಂದಿ ಇಬ್ಬರೂ ಸೇರಿ ೪.೫ ಕೋಟಿ ವಹಿವಾಟು ನಡೆಸಿದ್ದರು ಎನ್ನಲಾಗಿದೆ.























