
ನವದೆಹಲಿ,ಏ.೧೯:ಅಮೆರಿಕಾ ಮತ್ತು ಇರಾನ್ ನಡುವಿನ ನಡೆಯುತ್ತಿರುವ ಮಾತುಕತೆಗಳಲ್ಲಿ ಕೆಲವು ಪ್ರಗತಿ ಕಂಡುಬಂದಿದ್ದರೂ, ಅಂತಿಮ ಒಪ್ಪಂದಕ್ಕೆ ಇನ್ನೂ ಬಹಳ ದೂರವಿದೆ ಎಂದು ಇರಾನ್ ಸಂಸತ್ ಸ್ಪೀಕರ್ ತಿಳಿಸಿದ್ದಾರೆ.
ರಾಜ್ಯ ದೂರದರ್ಶನಕ್ಕೆ ನೀಡಿದ ಸಂದರ್ಶನದಲ್ಲಿ ಅವರು, ಮಾತುಕತೆಗಳಲ್ಲಿ “ಹಲವಾರು ಅಂತರಗಳು” ಇನ್ನೂ ಉಳಿದಿವೆ ಎಂದು ಹೇಳಿ, ಅಂತಿಮ ಷರತ್ತುಗಳ ಬಗ್ಗೆ ಚರ್ಚಿಸುವ ಹಂತಕ್ಕೂ ಇನ್ನೂ ತಲುಪಿಲ್ಲವೆಂದು ಸ್ಪಷ್ಟಪಡಿಸಿದರು.
ಈ ಮಧ್ಯೆ, ಅಮೆರಿಕ ನೌಕಾಪಡೆ ಇರಾನ್ ಬಂದರುಗಳ ಮೇಲೆ ನಿರ್ಬಂಧ ಮುಂದುವರಿಸುತ್ತಿರುವ ಹಿನ್ನೆಲೆಯಲ್ಲಿ, ಇರಾನ್ ಮತ್ತೆ ಹೊರ್ಮುಜ್ ಮೂಲಕ ಸಾಗುವ ಹಡಗುಗಳ ಮೇಲೆ ನಿಯಂತ್ರಣ ಕಠಿಣಗೊಳಿಸಿದೆ. ಕೆಲವು ಹಡಗುಗಳಿಗೆ ಸುರಕ್ಷಿತ ಸಂಚಾರಕ್ಕಾಗಿ ಶುಲ್ಕ ವಿಧಿಸುವ ಪ್ರಸ್ತಾಪವೂ ಮಾಡಲಾಗಿದೆ ಎಂದು ತಿಳಿದುಬಂದಿದೆ.
ಈ ಕ್ರಮವು ಮಾತುಕತೆಗಳನ್ನು ಇನ್ನಷ್ಟು ಸಂಕೀರ್ಣಗೊಳಿಸಿದ್ದರೂ, ಗಲಿಬಾಫ್ ಇದನ್ನು ತಂತ್ರಾತ್ಮಕ ಜಯವೆಂದು ವಿವರಿಸಿದ್ದಾರೆ. “ಶತ್ರುವನ್ನು ಸಂಪೂರ್ಣವಾಗಿ ಸೋಲಿಸಿಲ್ಲ, ಆದರೆ ತಂತ್ರದ ಮಟ್ಟದಲ್ಲಿ ನಾವು ಮೇಲುಗೈ ಸಾಧಿಸಿದ್ದೇವೆ,” ಎಂದು ಹೇಳಿದರು.
ಇದೀಗ ಎರಡು ದೇಶಗಳ ನಡುವೆ ಘೋಷಿಸಲಾದ ಎರಡು ವಾರಗಳ ಯುದ್ಧ ವಿರಾಮ ಬುಧವಾರಕ್ಕೆ ಮುಕ್ತಾಯವಾಗಲಿದ್ದು, ಅದನ್ನು ವಿಸ್ತರಿಸುವ ಬಗ್ಗೆ ಅನುಮಾನ ಮುಂದುವರಿದಿದೆ. ಶಾಂತಿ ಮಾತುಕತೆಗಳಿಗೆ ಅವಕಾಶ ಕಲ್ಪಿಸಲು ಈ ವಿರಾಮ ಜಾರಿಗೆ ತರಲಾಗಿತ್ತು.
ಜಾಗತಿಕ ತೈಲ ಸರಬರಾಜಿಗೆ ಪ್ರಮುಖ ಮಾರ್ಗವಾಗಿರುವ ಹೊರ್ಮುಜ್ ಸಮುದ್ರ ಮಾರ್ಗವು ಈ ಸಂಘರ್ಷದಲ್ಲಿ ಪ್ರಮುಖ ಕೇಂದ್ರೀಯ ಬಿಂದುವಾಗಿ ಹೊರಹೊಮ್ಮಿದ್ದು, ಇದರ ಮೇಲಿನ ನಿರ್ಬಂಧಗಳು ಜಾಗತಿಕ ವಾಣಿಜ್ಯ ಮತ್ತು ಇಂಧನ ಮಾರುಕಟ್ಟೆಗಳ ಮೇಲೆ ಪರಿಣಾಮ ಬೀರುವ ಸಾಧ್ಯತೆ ಇದೆ.
ಇದಾದರೂ, ಇರಾನ್ ಅಧಿಕಾರಿಗಳು ಮಾತುಕತೆ ಮುಂದುವರಿಸಲು ಸಿದ್ಧರಾಗಿದ್ದಾರೆ ಎಂದು ಹೇಳಿದರೂ, ಪ್ರಸ್ತುತ ಪರಿಸ್ಥಿತಿಯಲ್ಲಿ ಅಂತಿಮ ಒಪ್ಪಂದ ಸಾಧ್ಯತೆ ದೂರದಲ್ಲೇ ಉಳಿದಿದೆ.
ಮತ್ತೆ ಹೆಚ್ಚಿರುವ ಉದ್ಚಿಗ್ನತೆ: ಆತಂಕ
ಪಶ್ಚಿಮ ಏಷ್ಯಾದಲ್ಲಿ ಯುದ್ಧ ಶಮನವಾಯಿತು ಎನ್ನುವಾಗಲೇ ಮತ್ತೆ ಉದ್ವಿಗ್ನಗೊಳ್ಳುವ ಸಾಧ್ಯತೆ ಕಂಡುಬಂದಿದೆ. ವಾಯುಪಡೆ ಮತ್ತು ಕ್ಷಿಪಣಿ ಸಾಮರ್ಥ್ಯ ದುರ್ಬಲಗೊಳಿಸುವ ಪ್ರಯತ್ನ, ನೌಕಾಪಡೆ ನಾಶಮಾಡುವುದು, ಭೂಸೇನೆ ಮೂಲಕ ದಾಳಿ ನಡೆಸುವುದು ಹಾಗೂ ಹೊರ್ಮುಜ್ ಜಲಸಂಧಿಯನ್ನು ತೆರೆಯುವುದು ಮತ್ತಷ್ಟು ಸಮಸ್ಯೆಗೆ ಎಡೆ ಮಾಡಿಕೊಟ್ಟಿದೆ.
ಇರಾನ್ ಸಂಸತ್ತಿನ ಸ್ಪೀಕರ್ ಮೊಹಮ್ಮದ್ ಬಫರ್ ಘಾಲಿಬಾಫ್ ಪ್ರತಿಕ್ರಿಯಿಸಿ ಶತ್ರುಗಳ ಯಾವುದೇ ಉದ್ದೇಶ ಈಡೇರಿಲ್ಲ.
ಅಮೆರಿಕದೊಂದಿಗೆ ಕೆಲವು ವಿಷಯಗಳಲ್ಲಿ ಒಮ್ಮತಕ್ಕೆ ಬರಲಾಗಿದ್ದರೂ, ಇನ್ನೂ ಹಲವು ವಿಷಯಗಳಲ್ಲಿ ಪ್ರಮುಖ ವ್ಯತ್ಯಾಸಗಳು ಉಳಿದಿವೆ ಎಂದು ಹೇಳಿದ್ದಾರೆ.
ಎಚ್ಚರಿಕೆ ನೀಡುವ ಮೂಲಕ ಮತ್ತು ಗಡುವನ್ನು ನಿಗದಿಪಡಿಸುವ ಮೂಲಕ ತನ್ನ ಗುರಿಗಳನ್ನು ಸಾಧಿಸಲು ಶತ್ರುವಿಗೆ ಸಾಧ್ಯವಾಗಿಲ್ಲ. ಆದ್ದರಿಂದ, ಮಧ್ಯವರ್ತಿಗಳ ಮೂಲಕ ಸಂದೇಶಗಳನ್ನು ಕಳುಹಿಸಲು ಪ್ರಾರಂಭಿಸಿದೆ ಎಂದು ಅವರು ಹೇಳಿದ್ದಾರೆ.
ಅಮೆರಿಕ ತನ್ನ ಬೇಡಿಕೆಗಳನ್ನು ಪೂರೈಸಲು ಇರಾನ್ ತಾತ್ಕಾಲಿಕ ಕದನ ವಿರಾಮಕ್ಕೆ ಒಪ್ಪಿಕೊಂಡಿದೆ ಎಂದ ಅವರು, ನಾವು ಯುದ್ಧಭೂಮಿಯಲ್ಲಿ ವಿಜಯಶಾಲಿಗಳು ಎಂಬುದನ್ನು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಒಪ್ಪಿಕೊಂಡಿದ್ದಾರೆ ಎಂದು ಹೇಳಿದ್ದಾರೆ.
























