
ಬೀದರ: ಮೇ.11:ಪಶುವೈದ್ಯಕೀಯ ವಿಶ್ವವಿದ್ಯಾಲಯದಲ್ಲಿ ಮೇ 10, 2026 ರಂದು ನಡೆಯಲಿರುವ ಯುಜಿಸಿಇಟಿ ಕೃಷಿ ಪ್ರಾಯೋಗಿಕ ಕೋಟಾ ಪ್ರವೇಶ ಪರೀಕ್ಷೆಗೆ ಸಂಬಂಧಿಸಿದಂತೆ, ಬೀದರ ಪಶುವೈದ್ಯಕೀಯ ಮಹಾವಿದ್ಯಾಲಯದಲ್ಲಿ ಒಟ್ಟು 995 ವಿದ್ಯಾರ್ಥಿಗಳು ಅರ್ಜಿ ಸಲ್ಲಿಸಿದ್ದು, ಅದರಲ್ಲಿ 752 ವಿದ್ಯಾರ್ಥಿಗಳ ಅರ್ಜಿಗಳು ಮಾತ್ರ ಸ್ವೀಕೃತಗೊಂಡಿವೆ ಎಂದು ತಿಳಿದುಬಂದಿದೆ. ಉಳಿದ 243 ವಿದ್ಯಾರ್ಥಿಗಳ ಅರ್ಜಿಗಳು ತಿರಸ್ಕøತಗೊಂಡಿರುವುದನ್ನು ಇಂಡಿಯನ್ ನ್ಯಾಷನಲ್ ಭೀಮ್ ಆರ್ಮಿ ತೀವ್ರವಾಗಿ ಖಂಡಿಸಿದೆ.
ದಿನಾಂಕ 27-04-2026 ರಂದು ಅರ್ಜಿಗಳು ತಿರಸ್ಕೃತಗೊಂಡಿರುವುದಾಗಿ ವಿದ್ಯಾರ್ಥಿಗಳಿಗೆ ಮಾಹಿತಿ ನೀಡಲಾಗಿತ್ತು. ಬಳಿಕ ಕೆ.ಇ.ಎ. ಪ್ರಾಧಿಕಾರವು ಮೇ 1 ರಿಂದ 4 ರವರೆಗೆ ಲೋಪದೋಷಗಳನ್ನು ಸರಿಪಡಿಸಿಕೊಳ್ಳಲು ಅವಕಾಶ ನೀಡಿತ್ತು. ಅದರಂತೆ ಎಲ್ಲಾ ವಿದ್ಯಾರ್ಥಿಗಳು ತಮ್ಮ ದಾಖಲೆಗಳ ಲೋಪದೋಷಗಳನ್ನು ಸರಿಪಡಿಸಿಕೊಂಡು ಮರು ಅರ್ಜಿ ಸಲ್ಲಿಸಿದ್ದರು. ಆದರೂ ಸಹ ಎಲ್ಲಾ 243 ಅರ್ಜಿಗಳೂ ಮರು ತಿರಸ್ಕೃತಗೊಂಡಿರುವುದು ಅನುಮಾನಕ್ಕೆ ಕಾರಣವಾಗಿದೆ ಎಂದು ಸಂಘಟನೆ ಆರೋಪಿಸಿದೆ.
ರಾಜ್ಯ ಸರ್ಕಾರ ರೈತರು ಹಾಗೂ ಕಾರ್ಮಿಕರ ಮಕ್ಕಳಿಗಾಗಿ ಶೇ.50 ಮೀಸಲಾತಿ ಕಲ್ಪಿಸಿರುವ ಸಂದರ್ಭದಲ್ಲಿ, ಇಷ್ಟೊಂದು ಸಂಖ್ಯೆಯಲ್ಲಿ ಅರ್ಜಿಗಳು ತಿರಸ್ಕೃತಗೊಂಡಿರುವುದು ದುರುದ್ದೇಶಪೂರಿತ ಕ್ರಮವಾಗಿರಬಹುದು ಎಂದು ಸಂಘಟನೆಯ ಮುಖಂಡರು ಆರೋಪಿಸಿದ್ದಾರೆ.
ಇಂಡಿಯನ್ ನ್ಯಾಷನಲ್ ಭೀಮ್ ಆರ್ಮಿ ಸಂಸ್ಥಾಪಕ ರಾಜ್ಯಾಧ್ಯಕ್ಷ ದೀಲಿಪಕುಮಾರ ವರ್ಮಾ ಅವರ ನೇತೃತ್ವದಲ್ಲಿ, ವಿದ್ಯಾರ್ಥಿಗಳು ಮತ್ತು ಪೆÇೀಷಕರೊಂದಿಗೆ ಬೀದರ ಪಶುವೈದ್ಯಕೀಯ ಮಹಾವಿದ್ಯಾಲಯದ ಕುಲಪತಿಗಳಿಗೆ ಮನವಿ ಸಲ್ಲಿಸಲಾಗಿದ್ದು, ವಿದ್ಯಾರ್ಥಿಗಳ ಅರ್ಜಿಗಳನ್ನು ಮರು ಪರಿಶೀಲನೆ ನಡೆಸಿ, ಪರೀಕ್ಷೆಯನ್ನು ಮುಂದೂಡಬೇಕು ಹಾಗೂ ನೊಂದ ವಿದ್ಯಾರ್ಥಿಗಳಿಗೆ ನ್ಯಾಯ ಒದಗಿಸಬೇಕು ಎಂದು ಆಗ್ರಹಿಸಲಾಗಿದೆ.
ಇದಲ್ಲದೆ, ಈ ಪ್ರಕರಣದಲ್ಲಿ ತಪ್ಪಿತಸ್ಥರು ಯಾರೇ ಆಗಿದ್ದರೂ ಅವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಲಾಗಿದೆ. ಒಂದು ವೇಳೆ ವಿದ್ಯಾರ್ಥಿಗಳಿಗೆ ನ್ಯಾಯ ಸಿಗದಿದ್ದಲ್ಲಿ, ಇಂಡಿಯನ್ ನ್ಯಾಷನಲ್ ಭೀಮ್ ಆರ್ಮಿ ರಾಜ್ಯ ಹಾಗೂ ಬೀದರ ಜಿಲ್ಲಾ ಘಟಕದ ವತಿಯಿಂದ ಪಶುವೈದ್ಯಕೀಯ ಮಹಾವಿದ್ಯಾಲಯದ ಆವರಣದಲ್ಲಿ ವಿದ್ಯಾರ್ಥಿಗಳು ಹಾಗೂ ಪೆÇೀಷಕರೊಂದಿಗೆ ಹೋರಾಟ ನಡೆಸುವುದಾಗಿ ಎಚ್ಚರಿಕೆ ನೀಡಲಾಗಿದೆ.
ಈ ಸಂದರ್ಭದಲ್ಲಿ ಶ್ರೀಕಾಂತ ಸಾಗರ, ಬಜರಂಗ ತಮಗೊಂಡ, ಅನೀಲಕುಮಾರ ಬಾಜಿ, ರಾಜಶೇಖರ ಶೇರಿಕಾರ, ಪೀಟರ್ ಲಾಯನ್ ಸೇರಿದಂತೆ ಹಲವರು ಉಪಸ್ಥಿತರಿದ್ದರು.























