Home ಜಿಲ್ಲೆ ಐ ಆಮ್ ಎ ಲೀಡರ್’ ಪುಸ್ತಕ ಬಿಡುಗಡೆ: ಯುವ ನಾಯಕತ್ವಕ್ಕೆ ದಿಕ್ಕು ತೋರಿಸುವ ಕೃತಿ ಎಂದ...

ಐ ಆಮ್ ಎ ಲೀಡರ್’ ಪುಸ್ತಕ ಬಿಡುಗಡೆ: ಯುವ ನಾಯಕತ್ವಕ್ಕೆ ದಿಕ್ಕು ತೋರಿಸುವ ಕೃತಿ ಎಂದ ಶಾಸಕ ಶರಣಗೌಡ ಕಂದಕೂರ್

ಯಾದಗಿರಿ: ಮೇ.೧೧:ಪತ್ರಕರ್ತ ಹಾಗೂ ಲೇಖಕ ಹನಮಂತ್ ದೇಶಮುಖ್ ರಚಿಸಿರುವ ಐ ಆಮ್ ಎ ಲೀಡರ್ ಪುಸ್ತಕವನ್ನು ಗುರುಮಿಟ್ಕಲ್ ಕ್ಷೇತ್ರದ ಶಾಸಕ ಶರಣಗೌಡ ಕಂದಕೂರ್ ಲೋಕಾರ್ಪಣೆ ಮಾಡಿದರು.
ಗ್ರಾಮೀಣ ಭಾಗದ ಯುವಕರು ಚಾಣಕ್ಯರ ತತ್ವಗಳು ಮತ್ತು ನಾಯಕತ್ವದ ಮೌಲ್ಯಗಳನ್ನು ಅಳವಡಿಸಿಕೊಂಡು ಸಮಾಜಮುಖಿ ರಾಜಕಾರಣದತ್ತ ಸಾಗಬೇಕೆಂಬ ಉದ್ದೇಶದಿಂದ ಈ ಕೃತಿ ರಚಿಸಲಾಗಿದೆ ಎಂದು ಕಾರ್ಯಕ್ರಮದಲ್ಲಿ ತಿಳಿಸಲಾಯಿತು.
ಪುಸ್ತಕ ಬಿಡುಗಡೆ ಬಳಿಕ ಮಾತನಾಡಿದ ಶಾಸಕ ಶರಣಗೌಡ ಕಂದಕೂರ್, “ಇಂದಿನ ಯುವಪೀಳಿಗೆಗೆ ದಾರಿದೀಪವಾಗುವಂತಹ ಕೃತಿ ಇದು. ರಾಜಕೀಯ ಕ್ಷೇತ್ರದಲ್ಲಿ ಮುನ್ನಡೆಯಲು ಬಯಸುವ ಯುವಕರಿಗೆ ನಾಯಕತ್ವ, ಸಂಘಟನೆ ಹಾಗೂ ಸಾರ್ವಜನಿಕ ಬದುಕಿನ ಮೌಲ್ಯಗಳನ್ನು ಈ ಪುಸ್ತಕ ಪರಿಣಾಮಕಾರಿಯಾಗಿ ಪರಿಚಯಿಸುತ್ತದೆ. ಚಾಣಕ್ಯರ ವಿಚಾರಧಾರೆಗಳನ್ನು ಆಧುನಿಕ ರಾಜಕಾರಣದೊಂದಿಗೆ ಹೋಲಿಕೆ ಮಾಡಿ ಸುಂದರವಾಗಿ ಕಟ್ಟಿಕೊಡಲಾಗಿದೆ” ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಪತ್ರಕರ್ತರಾಗಿರುವ ಹನಮಂತ್ ದೇಶಮುಖ್ ಅವರು ಸಮಾಜಕ್ಕೆ ಉತ್ತಮ ಸಾಹಿತ್ಯ ಕೊಡುಗೆ ನೀಡುತ್ತಿರುವುದು ಶ್ಲಾಘನೀಯ ಸಂಗತಿಯಾಗಿದೆ ಎಂದು ಅವರು ಹೇಳಿದರು.
ಇದೇ ವೇಳೆ ಮಾತನಾಡಿದ ಲೇಖಕ ಹನಮಂತ್ ದೇಶಮುಖ್ , “ಶರಣಗೌಡ ಕಂದಕೂರ್ ಅವರು ಯುವ ಜನತೆಗೆ ಪ್ರೇರಣೆಯಾಗಿರುವ ಜನನಾಯಕರು. ಅವರ ಕಾರ್ಯವೈಖರಿ, ಜನಪರ ಚಿಂತನೆ ಹಾಗೂ ಅಭಿವೃದ್ಧಿಯ ದೃಷ್ಟಿಕೋನ ನನಗೆ ಸ್ಪೂರ್ತಿಯಾಗಿದೆ. ಅದಕ್ಕಾಗಿ ಈ ಪುಸ್ತಕಕ್ಕೆ ಅವರಿಂದಲೇ ಮುನ್ನುಡಿ ಬರೆಯಿಸಬೇಕೆಂಬ ಆಸೆ ಇತ್ತು. ಅವರು ಅದಕ್ಕೆ ಸ್ಪಂದಿಸಿ ಪ್ರೋತ್ಸಾಹ ನೀಡಿರುವುದು ಸಂತಸದ ವಿಷಯ” ಎಂದು ಹೇಳಿದರು.
ಗ್ರಾಮೀಣ ಹಿನ್ನೆಲೆಯ ಯುವಕರು ರಾಜಕೀಯ ಹಾಗೂ ಸಾಮಾಜಿಕ ಕ್ಷೇತ್ರದಲ್ಲಿ ಆತ್ಮವಿಶ್ವಾಸದಿಂದ ಮುನ್ನಡೆಯಲು ಈ ಪುಸ್ತಕ ನೆರವಾಗಲಿದೆ ಎಂಬ ವಿಶ್ವಾಸವನ್ನು ಅವರು ವ್ಯಕ್ತಪಡಿಸಿದರು.