
ಐವರು ಅಂದರ್
ಬೆಂಗಳೂರು,ಮೇ.೧೨-ಮಾದಕ ವಸ್ತುಗಳನ್ನು ಮಾರಾಟ ಮಾಡುತ್ತಿದ್ದ ಹೊರರಾಜ್ಯದ ಮೂವರು ಸ್ಥಳೀಯ ಇಬ್ಬರು ಸೇರಿ ಐವರು ಡ್ರಗ್ಸ್ ಫೆಡ್ಲರ್ ಗಳನ್ನು ಬಂಧಿಸಿರುವ ಅಶೋಕನಗರ ಹಾಗೂ ಮಲ್ಲೇಶ್ವರಂ ಪೊಲೀಸರು ೨.೫೬ ಕೋಟಿ ಮೌಲ್ಯದ ಹೈಡ್ರೋ ಗಾಂಜಾ ವಶಪಡಿಸಿಕೊಂಡಿದ್ದಾರೆ.
ಅಶೋಕನಗರ ಮತ್ತು ಮಲ್ಲೇಶ್ವರಂ ಠಾಣಾ ವ್ಯಾಪ್ತಿಯಲ್ಲಿ ಹೈಡ್ರೋ ಗಾಂಜಾ ಮಾರಾಟ ಮಾಡುತ್ತಿದ್ದ ಖಚಿತವಾದ ಮಾಹಿತಿ ಆಧರಿಸಿ ದಾಳಿ ಮಾಡಿ, ಹೊರ ರಾಜ್ಯದ ಮೂವರು ಹಾಗೂ ಸ್ಥಳೀಯ ಇಬ್ಬರು ಸೇರಿ ಐವರನ್ನು ಬಂಧಿಸಲಾಗಿದೆ ಎಂದು ನಗರ ಪೊಲೀಸ್ ಆಯುಕ್ತ ಸೀಮಾಂತ್ ಕುಮಾರ್ ಸಿಂಗ್ ಅವರು ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.
ಬಂಧಿತ ಆರೋಪಿಗಳು ಹೊರ ರಾಜ್ಯದ ಮತ್ತು ಸ್ಥಳೀಯ ಅಪರಿಚಿತ ವ್ಯಕ್ತಿಗಳಿಂದ ನಿಷೇಧಿತ ಮಾದಕ ವಸ್ತುವಾದ ಹೈಡ್ರೋ ಗಾಂಜಾವನ್ನು ಕಡಿಮೆ ಬೆಲೆಗೆ ಖರೀದಿಸಿಕೊಂಡು ಬಂದು ಸಾರ್ವಜನಿಕರಿಗೆ, ಕಾಲೇಜು ವಿದ್ಯಾರ್ಥಿಗಳಿಗೆ ಹೆಚ್ಚಿನ ಬೆಲೆಗೆ ಮಾರಾಟ ಮಾಡುತ್ತಿದ್ದರುವುದನ್ನು ಒಪ್ಪಿಕೊಂಡಿದ್ದಾರೆ.

ಬಂಧಿತ ಆರೋಪಿಗಳಿಗೆ ಹೈಡ್ರೋ ಗಾಂಜಾವನ್ನು ಸರಬರಾಜು ಮಾಡುತ್ತಿದ್ದ ಹೊರರಾಜ್ಯದ ಮತ್ತು ಸ್ಥಳೀಯ ಡ್ರಗ್ಸ್ ಫೆಡ್ಲರ್ ಗಳ ಪತ್ತೆ ಕಾರ್ಯ ಮುಂದುವರೆದಿದ್ದು, ಪ್ರಕರಣಗಳ ತನಿಖೆಯನ್ನು ಮುಂದುವರೆಸಲಾಗಿದೆ ಎಂದು ಹೇಳಿದರು.
ಎರಡೂ ಪ್ರಕರಣಗಳಲ್ಲಿ ಭಾಗಿಯಾಗಿದ್ದ ಐವರು ಆರೋಪಿಗಳನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿ ನ್ಯಾಯಾಂಗ ಬಂಧನಕ್ಕೆ ಒಳಪಡಿಸಲಾಗಿದೆ. ಕಾರ್ಯಾಚರಣೆಗಳನ್ನು ಡಿಸಿಪಿಗಳಾದ ಅಕ್ಷಯ್.ಎಂ.ಹಾಕೆ,ಬಿ.ಎಸ್.ನೇಮಗೌಡ ಮಾರ್ಗದರ್ಶನದಲ್ಲಿ ಎಸಿಪಿಗಳಾದ ಡಾ.ಪ್ರಿಯದರ್ಶಿನಿ ಈಶ್ವರ ಸಾನಿಕೊಪ್ಪ ಹಾಗೂ ವೇಣುಗೋಪಾಲ್.ಬಿ.ಆರ್ ನೇತೃತ್ವದಲ್ಲಿ ಇನ್ಸ್‌ಪೆಕ್ಟರ್ ಗಳಾದ ರವಿ.ಕೆ.ಬಿ, ಯಶವಂತಕುಮಾರ್.ಹೆಚ್.ಎಂ ಮತ್ತವರ ತಂಡ ಕೈಗೊಂಡಿದೆ ಎಂದು ಹೇಳಿದರು.


























