Home ಜಿಲ್ಲೆ ಶಾರ್ಟ್ ಸರ್ಕಿಟ್‍ನಿಂದ ಅಗ್ನಿ ದುರಂತ: ನಾಲ್ಕು ಅಂಗಡಿಗಳು ಭಸ್ಮ30 ರಿಂದ 35 ಲಕ್ಷ ರೂ. ಹಾನಿ...

ಶಾರ್ಟ್ ಸರ್ಕಿಟ್‍ನಿಂದ ಅಗ್ನಿ ದುರಂತ: ನಾಲ್ಕು ಅಂಗಡಿಗಳು ಭಸ್ಮ30 ರಿಂದ 35 ಲಕ್ಷ ರೂ. ಹಾನಿ : ಈಶ್ವರ್ ಸಿಂಗ್ ಠಾಕೂರ್ ಭೇಟಿ

ಬೀದರ: ಮೇ.13:ಬೀದರ ವಿಧಾನಸಭಾ ಕ್ಷೇತ್ರದ ಬೆನಕನಹಳ್ಳಿ ಗ್ರಾಮದಲ್ಲಿ ದೇವಸ್ಥಾನದ ಹಿಂಭಾಗದಲ್ಲಿರುವ ಜೈ ಸಿಂಗ್ ಚೌಹಾಣ್ ಅವರ ನಾಲ್ಕು ಅಂಗಡಿಗಳಿಗೆ ನಿನ್ನೆ ಮಧ್ಯಾಹ್ನ ಶಾರ್ಟ್ ಸರ್ಕಿಟ್‍ನಿಂದ ಅಗ್ನಿ ಅವಘಡ ಸಂಭವಿಸಿ ಸಂಪೂರ್ಣವಾಗಿ ಸುಟ್ಟು ಹೋಗಿರುವ ಘಟನೆ ನಡೆದಿದೆ.

ಅಗ್ನಿ ದುರಂತದಲ್ಲಿ ವಾಟರ್ ಪ್ಲಾಂಟ್, ಜನರಲ್ ಸ್ಟೋರ್, ಕಿರಾಣಿ ಅಂಗಡಿ ಹಾಗೂ ದೇವಸ್ಥಾನದ ಪೂಜಾ ಸಾಮಗ್ರಿಗಳ ಅಂಗಡಿ ಸಂಪೂರ್ಣ ಹಾನಿಗೊಳಗಾಗಿವೆ. ಅಲ್ಲದೆ ಐದುರಿಂದ ಆರು ಫ್ರಿಡ್ಜ್‍ಗಳು, ವಾಟರ್ ಪ್ಲಾಂಟ್‍ನ ಉಪಕರಣಗಳು, ಕಿರಾಣಿ ಸಾಮಗ್ರಿಗಳು ಹಾಗೂ ನಾಲ್ಕು ದ್ವಿಚಕ್ರ ವಾಹನಗಳು ಬೆಂಕಿಗೆ ಆಹುತಿಯಾಗಿವೆ.

ಕಷ್ಟಪಟ್ಟು ಸಾಲ ಮಾಡಿ ಆರಂಭಿಸಿದ್ದ ಅಂಗಡಿಗಳು ಬೆಂಕಿಗೆ ಆಹುತಿಯಾಗಿರುವುದರಿಂದ ಜೈ ಸಿಂಗ್ ಚೌಹಾಣ್ ಅವರು ತೀವ್ರ ಸಂಕಷ್ಟಕ್ಕೆ ಸಿಲುಕಿದ್ದು, ಸುಮಾರು 30 ರಿಂದ 35 ಲಕ್ಷ ರೂಪಾಯಿ ನಷ್ಟ ಸಂಭವಿಸಿದೆ ಎಂದು ಅಂದಾಜಿಸಲಾಗಿದೆ.

ಅಗ್ನಿ ಅವಘಡದ ಸಂದರ್ಭದಲ್ಲಿ ಎರಡು ಅಗ್ನಿಶಾಮಕ ವಾಹನಗಳು ಬೆಂಕಿ ನಂದಿಸಲು ಪ್ರಯತ್ನಿಸಿದರೂ ಬೆಂಕಿಯ ತೀವ್ರತೆಯಿಂದಾಗಿ ಕಾರ್ಯಾಚರಣೆ ಕಷ್ಟಕರವಾಗಿತ್ತು.

ಘಟನೆಯ ಮಾಹಿತಿ ತಿಳಿದ ನಂತರ ಬಿಜೆಪಿ ಮುಖಂಡರು ಹಾಗೂ ಬೀದರ ಕ್ಷೇತ್ರದ ನಾಯಕರು ಆದ ಶ್ರೀ ಈಶ್ವರ್ ಸಿಂಗ್ ಠಾಕೂರ್ ಅವರು ಸ್ಥಳಕ್ಕೆ ಭೇಟಿ ನೀಡಿ ಹಾನಿಯನ್ನು ಪರಿಶೀಲಿಸಿದರು. ಈ ವೇಳೆ ಕೆಇಬಿ ಅಧಿಕಾರಿಯಾದ ಶ್ರೀ ಗೋಖಲೆ ಅವರು ಉಪಸ್ಥಿತರಿದ್ದು, ಘಟನೆ ಕುರಿತು ತನಿಖೆ ನಡೆಸುವುದಾಗಿ ತಿಳಿಸಿದರು.

ಇದೇ ಸಂದರ್ಭದಲ್ಲಿ ಬೀದರ ತಹಶೀಲ್ದಾರ್ ಅವರೊಂದಿಗೆ ದೂರವಾಣಿ ಮೂಲಕ ಮಾತನಾಡಿದ ಈಶ್ವರ್ ಸಿಂಗ್ ಠಾಕೂರ್ ಅವರು ಹಾನಿಯ ಸಂಪೂರ್ಣ ವರದಿ ಸಿದ್ಧಪಡಿಸಿ ಪರಿಹಾರ ನೀಡುವಂತೆ ಮನವಿ ಮಾಡಿದರು. ಅಲ್ಲದೆ ಪೆÇಲೀಸ್ ಅಧಿಕಾರಿಗಳೊಂದಿಗೆ ಮಾತನಾಡಿ ಪ್ರಕರಣ ದಾಖಲಿಸುವಂತೆ ಸೂಚಿಸಿದರು.

ಹಾನಿಗೆ ಒಳಗಾದ ಜೈ ಸಿಂಗ್ ಚೌಹಾಣ್ ಅವರಿಗೆ ಧೈರ್ಯ ತುಂಬಿದ ಈಶ್ವರ್ ಸಿಂಗ್ ಠಾಕೂರ್ ಅವರು, ಕಾನೂನು ಪ್ರಕಾರ ಸೂಕ್ತ ಪರಿಹಾರ ದೊರಕಿಸಲು ಪ್ರಯತ್ನಿಸಲಾಗುವುದು ಎಂದು ಭರವಸೆ ನೀಡಿದರು.

ಈ ಸಂದರ್ಭದಲ್ಲಿ ಗ್ರಾಮಾಂತರ ಮಂಡಲ ಅಧ್ಯಕ್ಷರಾದ ಶ್ರೀ ದೀಪಕ್ ಗಾದಗೆ, ಜಿಲ್ಲಾ ಕಾರ್ಯದರ್ಶಿಗಳಾದ ಶ್ರೀ ರಾಜೇಂದ್ರ ಪೂಜಾರಿ ಹಾಗೂ ಗ್ರಾಮದ ಮುಖಂಡರು ಮತ್ತು ಸಾರ್ವಜನಿಕರು ಉಪಸ್ಥಿತರಿದ್ದರು.