Home ಮುಖಪುಟ ಸುದ್ದಿ ನಟ ದಿಲೀಪ್ ರಾಜ್ ವಿಧಿವಶ: ಗಣ್ಯರ ಕಂಬನಿ

ನಟ ದಿಲೀಪ್ ರಾಜ್ ವಿಧಿವಶ: ಗಣ್ಯರ ಕಂಬನಿ

ಬೆಂಗಳೂರು, ಮೇ. ೧೩- ಕನ್ನಡ ಕಿರುತೆರೆ ಮತ್ತು ಬೆಳ್ಳಿತೆರೆಯ ಜನಪ್ರಿಯ ನಟ-ನಿರ್ಮಾಪಕ ದಿಲೀಪ್ ರಾಜ್ ಅವರ ಅಕಾಲಿಕ ನಿಧನ ಕನ್ನಡ ಚಿತ್ರರಂಗವನ್ನು ಶೋಕ ಸಾಗರದಲ್ಲಿ ಮುಳುಗಿಸಿದೆ. ಕೇವಲ ೪೭ನೇ ವಯಸ್ಸಿನಲ್ಲಿ ಹೃದಯಾಘಾತಕ್ಕೆ ಬಲಿಯಾದ ಅವರ ಸಾವಿನ ಸುದ್ಧಿ ಅಭಿಮಾನಿಗಳು, ಸಹೋದ್ಯೋಗಿಗಳು ಮತ್ತು ಕಿರುತೆರೆ ವೀಕ್ಷಕರಿಗೆ ಆಘಾತ ತಂದಿದೆ. ಇಂದು ಬೆಳಗಿನ ಜಾವ ಮನೆಯಲ್ಲಿ ಇದ್ದಾಗಲೇ ಅವರಿಗೆ ತೀವ್ರ ಹೃದಯಾಘಾತ ಸಂಭವಿಸಿದೆ ಎಂದು ಕುಟುಂಬ ಮೂಲಗಳು ತಿಳಿಸಿವೆ. ತಕ್ಷಣ ಆಸ್ಪತ್ರೆಗೆ ಕರೆದೊಯ್ಯಲಾಯಿತಾದರೂ ಚಿಕಿತ್ಸೆ ಫಲಕಾರಿಯಾಗದೆ ಅವರು ಕೊನೆಯುಸಿರೆಳೆದಿದ್ದಾರೆ .

ರಂಗಭೂಮಿಯಿಂದ ಆರಂಭವಾದ ಕಲಾ ಪಯಣ
೧೯೭೮ರ ಸೆಪ್ಟೆಂಬರ್ ೨ರಂದು ಬೆಂಗಳೂರಿನಲ್ಲಿ ಜನಿಸಿದ್ದ ದಿಲೀಪ್ ರಾಜ್ ಅವರಿಗೆ ಬಾಲ್ಯದಿಂದಲೇ ನಟನೆ ಹಾಗೂ ನೃತ್ಯದ ಮೇಲೆ ಅಪಾರ ಆಸಕ್ತಿ ಇತ್ತು. ಕಾಲೇಜು ದಿನಗಳಲ್ಲೇ ನಾಟಕ ತಂಡಗಳಿಗೆ ಸೇರಿ ರಂಗಭೂಮಿಯಲ್ಲಿ ತಮ್ಮ ಪ್ರತಿಭೆ ತೋರಲು ಆರಂಭಿಸಿದ್ದರು. ಅಲ್ಲಿಂದಲೇ ಅವರು ಕಿರುತೆರೆ ಮತ್ತು ಬಳಿಕ ಸಿನಿಮಾರಂಗಕ್ಕೆ ಕಾಲಿಟ್ಟರು.

ಕಿರುತೆರೆಯಲ್ಲಿ ಮನೆಮಾತಾದ ನಟ
ದಿಲೀಪ್ ರಾಜ್ ಮೊದಲಿಗೆ ‘ಕಂಬದ ಮನೆ’ ಧಾರಾವಾಹಿ ಮೂಲಕ ಕನ್ನಡ ಕಿರುತೆರೆಗೆ ಪರಿಚಿತರಾದರು. ನಂತರ ‘ಜನನಿ’, ‘ಅರ್ಧ ಸತ್ಯ’, ‘ರಂಗೋಲಿ’, ‘ಕುಂಕುಮ ಭಾಗ್ಯ’, ‘ಮಾಂಗಲ್ಯ’, ‘ಪ್ರೀತಿಗಾಗಿ’ ಮುಂತಾದ ಧಾರಾವಾಹಿಗಳ ಮೂಲಕ ಪ್ರೇಕ್ಷಕರ ಮನಗೆದ್ದರು. ವಿಭಿನ್ನ ಪಾತ್ರಗಳನ್ನು ನಿರ್ವಹಿಸುವ ಸಾಮರ್ಥ್ಯದಿಂದ ಅವರು ಮನೆಮಾತಾದರು. ನಂತರ ‘ರಥಸಪ್ತಮಿ’ ಧಾರಾವಾಹಿಯ ಮೂಲಕ ಮತ್ತೆ ಕಿರುತೆರೆಗೆ ಭರ್ಜರಿ ಕಮ್‌ಬ್ಯಾಕ್ ಮಾಡಿದ್ದರು. ವಿಶೇಷವಾಗಿ ಹಿಟ್ಲರ್ ಕಲ್ಯಾಣ ಧಾರಾವಾಹಿಯಲ್ಲಿ ನಾಯಕನಾಗಿ ಅಭಿನಯಿಸಿ ಅಪಾರ ಜನಪ್ರಿಯತೆ ಗಳಿಸಿದ್ದರು. ಅವರ ನಟನೆ, ಸಂಭಾಷಣೆ ಹೇಳುವ ಶೈಲಿ ಹಾಗೂ ಪರಿಪಕ್ವ ಅಭಿನಯ ವೀಕ್ಷಕರ ಮೆಚ್ಚುಗೆಗೆ ಪಾತ್ರವಾಗಿತ್ತು.

ಸಿನಿಮಾರಂಗದಲ್ಲಿ ಗಮನಾರ್ಹ ಸಾಧನೆ
೨೦೦೫ರಲ್ಲಿ ಬಿಡುಗಡೆಯಾದ ಬಾಯ್ ಫ್ರೆಂಡ್ ಚಿತ್ರದ ಮೂಲಕ ದಿಲೀಪ್ ರಾಜ್ ಬೆಳ್ಳಿತೆರೆಗೆ ಕಾಲಿಟ್ಟರು. ಆರಂಭದಲ್ಲಿ ನಾಯಕ ನಟನಾಗಿ ಕಾಣಿಸಿಕೊಂಡರೂ, ನಂತರ ವಿಭಿನ್ನ ಪಾತ್ರಗಳಲ್ಲಿ ಅಭಿನಯಿಸಿ ತಮ್ಮದೇ ಛಾಪು ಮೂಡಿಸಿದ್ದರು. ೨೦೦೭ರಲ್ಲಿ ಬಿಡುಗಡೆಯಾದ ಮಿಲನ ಸಿನಿಮಾದಲ್ಲಿ ಪುನೀತ್ ರಾಜ್‌ಕುಮಾರ್ ಜೊತೆ ಅಭಿನಯಿಸಿದ ಬಳಿಕ ಅವರಿಗೆ ದೊಡ್ಡ ಮಟ್ಟದ ಜನಪ್ರಿಯತೆ ದೊರೆಯಿತು. ವಿಶೇಷವಾಗಿ ನೆಗೆಟಿವ್ ಶೇಡ್‌ನ ಪಾತ್ರದಲ್ಲಿ ಅವರು ಮೆಚ್ಚುಗೆ ಗಳಿಸಿದ್ದರು. ಇದರ ಜೊತೆಗೆ ‘೭ ಓ ಕ್ಲಾಕ್’, ‘ಕ್ಷಣ ಕ್ಷಣ’, ಯು-ಟರ್ನ್ ಸೇರಿದಂತೆ ಅನೇಕ ಸಿನಿಮಾಗಳಲ್ಲಿ ಪೋಷಕ ಹಾಗೂ ಪ್ರಮುಖ ಪಾತ್ರಗಳಲ್ಲಿ ನಟಿಸಿ ತಮ್ಮ ಅಭಿನಯ ಕೌಶಲ್ಯ ತೋರಿಸಿದ್ದರು.

ಯಶಸ್ವಿ ನಿರ್ಮಾಪಕರಾಗಿಯೂ ಗುರುತು
ನಟನೆ ಮಾತ್ರವಲ್ಲದೆ ನಿರ್ಮಾಣ ಕ್ಷೇತ್ರದಲ್ಲೂ ದಿಲೀಪ್ ರಾಜ್ ಯಶಸ್ಸು ಕಂಡಿದ್ದರು. ತಮ್ಮದೇ ‘ಡಿ.ಆರ್. ಕ್ರಿಯೇಷನ್ಸ್’ ಬ್ಯಾನರ್ ಮೂಲಕ ಹಲವು ಧಾರಾವಾಹಿಗಳನ್ನು ನಿರ್ಮಿಸಿದ್ದರು. ಕೃಷ್ಣ ರುಕ್ಕು ಧಾರಾವಾಹಿಯ ನಿರ್ಮಾಪಕರಾಗಿದ್ದ ಅವರು, ಹೊಸ ಕಲಾವಿದರಿಗೆ ಅವಕಾಶ ನೀಡುವ ಮನೋಭಾವದಿಂದಲೂ ಗುರುತಿಸಿಕೊಂಡಿದ್ದರು. ‘ಹಿಟ್ಲರ್ ಕಲ್ಯಾಣ’ ಧಾರಾವಾಹಿಯ ನಿರ್ಮಾಪಕರಾಗಿಯೂ ಅವರು ದೊಡ್ಡ ಯಶಸ್ಸು ಕಂಡಿದ್ದರು.

ಡಬ್ಬಿಂಗ್ ಮತ್ತು ರಂಗಭೂಮಿಯಲ್ಲೂ ಸಕ್ರಿಯ
ದಿಲೀಪ್ ರಾಜ್ ಕೇವಲ ನಟ ಅಥವಾ ನಿರ್ಮಾಪಕರಷ್ಟೇ ಅಲ್ಲ; ಅವರು ಉತ್ತಮ ಕಂಠದಾನ ಕಲಾವಿದರೂ ಆಗಿದ್ದರು. ಅನೇಕ ಧಾರಾವಾಹಿ ಹಾಗೂ ಸಿನಿಮಾಗಳಿಗೆ ಧ್ವನಿ ನೀಡಿದ್ದರು. ರಂಗಭೂಮಿಯೊಂದಿಗಿನ ಅವರ ನಂಟು ಕೊನೆಯವರೆಗೂ ಮುಂದುವರಿದಿತ್ತು. ಕಲೆಯ ಮೇಲೆ ಅಪಾರ ಪ್ರೀತಿ ಹೊಂದಿದ್ದ ಅವರು, ಹೊಸ ಪ್ರತಿಭೆಗಳನ್ನು ಪ್ರೋತ್ಸಾಹಿಸುವ ಗುಣದಿಂದ ಸಹೋದ್ಯೋಗಿಗಳ ಮನಸ್ಸು ಗೆದ್ದಿದ್ದರು.

ಚಿತ್ರರಂಗದ ಗಣ್ಯರಿಂದ ಸಂತಾಪ
ದಿಲೀಪ್ ರಾಜ್ ನಿಧನದ ಸುದ್ದಿ ತಿಳಿಯುತ್ತಿದ್ದಂತೆ ಕನ್ನಡ ಚಿತ್ರರಂಗದ ಹಲವರು ಸಾಮಾಜಿಕ ಜಾಲತಾಣಗಳಲ್ಲಿ ಸಂತಾಪ ಸೂಚಿಸಿದ್ದಾರೆ. ಕಿರುತೆರೆ ಹಾಗೂ ಸಿನಿಮಾ ಕ್ಷೇತ್ರದ ಅನೇಕ ಕಲಾವಿದರು ಆಸ್ಪತ್ರೆಗೆ ಭೇಟಿ ನೀಡಿ ಕುಟುಂಬ ಸದಸ್ಯರಿಗೆ ಧೈರ್ಯ ಹೇಳಿದ್ದಾರೆ ಎನ್ನಲಾಗಿದೆ. ಅಭಿಮಾನಿಗಳು ಕೂಡ ಸಾಮಾಜಿಕ ಜಾಲತಾಣಗಳಲ್ಲಿ ಅವರ ಹಳೆಯ ದೃಶ್ಯಗಳು, ಸಂಭಾಷಣೆಗಳು ಹಾಗೂ ನೆನಪುಗಳನ್ನು ಹಂಚಿಕೊಂಡು ಕಂಬನಿ ಮಿಡಿಯುತ್ತಿದ್ದಾರೆ.

ದಿಲೀಪ್ ರಾಜ್ ಅವರ ಅಗಲಿಕೆಯಿಂದ ಕನ್ನಡ ಕಿರುತೆರೆ ಮತ್ತು ಸಿನಿಮಾ ಕ್ಷೇತ್ರ ಒಬ್ಬ ಪ್ರತಿಭಾವಂತ ನಟನನ್ನು ಮಾತ್ರವಲ್ಲ, ಸ್ನೇಹಪರ ವ್ಯಕ್ತಿತ್ವದ ಕಲಾವಿದನನ್ನೂ ಕಳೆದುಕೊಂಡಿದೆ ಎಂಬ ಅಭಿಪ್ರಾಯಗಳು ವ್ಯಕ್ತವಾಗುತ್ತಿವೆ.