Home ಮುಖಪುಟ ಸುದ್ದಿ ಭೀಕರ ಬಸ್ ಅಪಘಾತ: ೮ ಮಂದಿ ಸಾವು, ೧೬ ಜನರಿಗೆ ಗಾಯ

ಭೀಕರ ಬಸ್ ಅಪಘಾತ: ೮ ಮಂದಿ ಸಾವು, ೧೬ ಜನರಿಗೆ ಗಾಯ

ಕೋಟಾ, ಅ.೧೭: ದೆಹಲಿ-ಮುಂಬೈ ಎಕ್ಸ್‌ಪ್ರೆಸ್‌ವೇಯಲ್ಲಿ ಶನಿವಾರ ಬೆಳಗ್ಗೆ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ಎಂಟು ಮಂದಿ ಮೃತಪಟ್ಟಿದ್ದು, ೧೫ರಿಂದ ೧೬ ಮಂದಿ ಗಾಯಗೊಂಡಿದ್ದಾರೆ.

ಮಧ್ಯಪ್ರದೇಶದ ಭೋಪಾಲ್‌ನಿಂದ ರಾಜಸ್ಥಾನದ ಖಾಟು ಶ್ಯಾಮ್‌ಜಿ ದೇವಸ್ಥಾನಕ್ಕೆ ಯಾತ್ರಾರ್ಥಿಗಳನ್ನು ಕರೆದೊಯ್ಯುತ್ತಿದ್ದ ಮಿನಿ ಬಸ್ ಚಾಲಕನ ನಿಯಂತ್ರಣ ತಪ್ಪಿ ಸೇತುವೆಯಿಂದ ಕೆಳಗಿನ ಚರಂಡಿಗೆ ಉರುಳಿದ ಪರಿಣಾಮ ಈ ದುರಂತ ಸಂಭವಿಸಿದೆ. ರಾಜಸ್ಥಾನದ ಕೋಟಾ ಜಿಲ್ಲೆಯ ಸಿಮಲಿಯಾ ಪೊಲೀಸ್ ಠಾಣೆ ವ್ಯಾಪ್ತಿಯ ಕರಾಡಿಯಾ ಸಮೀಪ ಅಪಘಾತ ನಡೆದಿದೆ.

ಪೊಲೀಸರ ಪ್ರಾಥಮಿಕ ಮಾಹಿತಿ ಪ್ರಕಾರ, ಬಸ್‌ನಲ್ಲಿ ಒಂದೇ ಕುಟುಂಬದ ಸುಮಾರು ೨೫ ಮಂದಿ ಪ್ರಯಾಣಿಸುತ್ತಿದ್ದರು. ದೇವಸ್ಥಾನಕ್ಕೆ ತೆರಳುತ್ತಿದ್ದ ವೇಳೆ ಚಾಲಕನಿಗೆ ನಿದ್ರೆ ಆವರಿಸಿದ್ದರಿಂದ ವಾಹನ ನಿಯಂತ್ರಣ ತಪ್ಪಿ ಸೇತುವೆಯಿಂದ ಸುಮಾರು ೧೫ ಅಡಿ ಕೆಳಗೆ ಬಿದ್ದಿದೆ ಎಂದು ಕೋಟಾ ಗ್ರಾಮೀಣ ಹೆಚ್ಚುವರಿ ಪೊಲೀಸ್ ಅಧೀಕ್ಷಕ ರಾಮ್ ಕಲ್ಯಾಣ್ ಮೀನಾ ತಿಳಿಸಿದ್ದಾರೆ.

ಅಪಘಾತದ ಮಾಹಿತಿ ತಿಳಿಯುತ್ತಿದ್ದಂತೆಯೇ ರಕ್ಷಣಾ ಕಾರ್ಯಾಚರಣೆ ಆರಂಭಿಸಲಾಯಿತು. ಚರಂಡಿಯಲ್ಲಿ ನೀರು ಮತ್ತು ಕೆಸರು ಇದ್ದುದರಿಂದ ಗಾಯಾಳುಗಳನ್ನು ಹೊರತೆಗೆದು ಆಸ್ಪತ್ರೆಗೆ ಸಾಗಿಸುವ ಕಾರ್ಯಾಚರಣೆಗೆ ಅಡಚಣೆ ಉಂಟಾಯಿತು. ಗಾಯಾಳುಗಳನ್ನು ತಕ್ಷಣ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.

ಅಪಘಾತದಲ್ಲಿ ಮೃತಪಟ್ಟ ಎಂಟು ಮಂದಿಯ ಮೃತದೇಹಗಳನ್ನು ಆಸ್ಪತ್ರೆಗೆ ತರಲಾಗಿದೆ ಎಂದು ಕೋಟಾ ಜಿಲ್ಲಾಧಿಕಾರಿ ಪೀಯೂಷ್ ಸಾಮರಿಯಾ ತಿಳಿಸಿದ್ದಾರೆ. ಗಂಭೀರವಾಗಿ ಗಾಯಗೊಂಡವರನ್ನು ತೀವ್ರ ನಿಗಾ ಘಟಕಕ್ಕೆ (ಐಸಿಯು) ದಾಖಲಿಸಿ ಚಿಕಿತ್ಸೆ ಆರಂಭಿಸಲಾಗಿದೆ ಎಂದು ಅವರು ಹೇಳಿದ್ದಾರೆ.ಮೃತರ ಗುರುತು ಹಾಗೂ ಗಾಯಾಳುಗಳ ಆರೋಗ್ಯ ಸ್ಥಿತಿಗೆ ಸಂಬಂಧಿಸಿದ ಹೆಚ್ಚಿನ ವಿವರಗಳು ಲಭ್ಯವಾಗಬೇಕಿವೆ.

ಅಶೋಕ್ ಗೆಹ್ಲೋಟ್ ಸಂತಾಪ
ಈ ದುರ್ಘಟನೆಗೆ ರಾಜಸ್ಥಾನದ ಮಾಜಿ ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ. ಭೋಪಾಲ್‌ನಿಂದ ಖಾಟು ಶ್ಯಾಮ್‌ಜಿ ದೇವಸ್ಥಾನಕ್ಕೆ ತೆರಳುತ್ತಿದ್ದ ಮಿನಿ ಬಸ್ ಅಪಘಾತದಲ್ಲಿ ಹಲವರು ಮೃತಪಟ್ಟಿರುವ ಸುದ್ದಿ ಹೃದಯವಿದ್ರಾವಕವಾಗಿದೆ ಎಂದು ಅವರು ಸಾಮಾಜಿಕ ಜಾಲತಾಣದಲ್ಲಿ ಬರೆದುಕೊಂಡಿದ್ದಾರೆ.
ಮೃತರ ಕುಟುಂಬಗಳಿಗೆ ದುಃಖ ಭರಿಸುವ ಶಕ್ತಿ ನೀಡಲಿ ಎಂದು ಪ್ರಾರ್ಥಿಸಿರುವ ಅವರು, ಗಾಯಾಳುಗಳು ಶೀಘ್ರ ಗುಣಮುಖರಾಗಲಿ ಎಂದು ಹಾರೈಸಿದ್ದಾರೆ.