
ಚಿಕ್ಕನಾಯಕನಹಳ್ಳಿ, ಮಾ. ೭- ಹೋಳಿ ಹುಣ್ಣಮೆಯ ಅಂಗವಾಗಿ ದೇವಾಂಗ ಸಮಾಜದ ವತಿಯಿಂದ ಕಾಮದಹನ ಮಾಡುವ ಮೂಲಕ ಪುರಾತನ ಸಂಸ್ಕೃತಿಯ ಪರಂಪರೆಯನ್ನು ಮುಂದುವರೆಸಿದ್ದಾರೆ.
ಪಟ್ಟಣದ ದೇವಾಂಗ ಸಮಾಜ ಹಾಗೂ ನೇಕಾರರು ಜತೆಗೂಡಿ ಹಿಂದಿನಿಂದ ಆಚರಿಸಿಕೊಂಡು ಬಂದ ಕಾಮದಹನವನ್ನು ಹೋಳಿ ಹುಣ್ಣಿಮೆಯಂದು ದೇವಾಂಗ ಬೀದಿಯಲ್ಲಿರುವ ಅಜಾತರುದ್ರ ಅವಧೂತಸ್ವಾಮಿ ಮಠದ ಆವರಣದಲ್ಲಿ ನಡೆಸಿದರು.
ಸಮಾಜದ ಎಲ್ಲ ವಯೋಮಾನದವರು ಸೇರಿ ಕಾಮ ದಹನದ ಅಂಗವಾಗಿ ಒಣಗಿದ ಸೌದೆ, ಇನ್ನಿತರ ಪುರುಳೆಗಳನ್ನು ಸಂಗ್ರಹಿಸಿ ಕಾಮನ ಹುಣ್ಣಮೆಯ ಚಂದ್ರನ ಬೆಳಕಲ್ಲಿ ತಮಟೆಯ ನಾದಕ್ಕೆ ಕುಣಿದು, ಕುಪ್ಪಳಿಸಿ ನಂತರ ಕಾಮನ ಚಿತ್ರಪಟವನ್ನು ಸೌದೆ, ಪುರುಳೆಗಳ ನಡುವೆ ಇಟ್ಟು ಸುಟ್ಟರು.
ಈ ಸಂದರ್ಭದಲ್ಲಿ ಮಾತನಾಡಿದ ಸಮಾಜದ ಮುಖಂಡ ಕುಮಾರಸ್ವಾಮಿ, ಮನುಷ್ಯನ ಅಂತರಂಗದಲ್ಲಿನ ಕಾಮ ಕ್ರೋಧಗಳನ್ನು ಸುಟ್ಟು ಹಾಕಿರಿ ಎಂಬ ಸಂದೇಶ ಇದಾಗಿದ್ದು, ಶಿವನ ತಪಸ್ಸನ್ನು ಕೆಡಿಸಲು ಹೂ ಬಾಣ ಹೂಡಿ ಶಿವನ ಕೆಂಗಣ್ಣಿಗೆ ಗುರಿಯಾಗಿ ಭಸ್ಮವಾದ ರತಿಮನ್ಮಥರ ಪುರಾಣದ ಕಥಾನಕದ ಹಿನ್ನೆಲೆಯಲ್ಲಿ ಕಾಮದಹನವನ್ನು ನಡೆಸಿಕೊಂಡು ಬರಲಾಗಿದೆ.
ಈ ಹಿಂದೆ ೬ ದಿನಗಳ ಕಾಲ ನಡೆಸಲಾಗುತ್ತಿತ್ತು. ನಂತರ ಮೂರು ದಿನಗಳಿಗೆ ಬಂದು ಹುಣ್ಣಿಮೆಯ ಒಂದು ದಿನಕ್ಕೆ ಸೀಮಿತವಾಗಿದೆ. ಆದರೂ ಮುಂದಿನ ಪೀಳಿಗೆಯ ಮನಗಳಿಗೆ ನಮ್ಮ ಧಾರ್ಮಿಕ ಆಚರಣೆ ಹಾಗೂ ಅದರ ಹಿಂದಿನ ಉದಾತ್ತ ಭಾವನೆಗಳನ್ನು ಅರಿಯುವ ನಿಟ್ಟಿನಲ್ಲಿ ಇದನ್ನು ಹೆಚ್ಚಿನ ಉತ್ಸಾಹದಿಂದ ನಡೆಸಲಾಗುತ್ತಿದೆ ಎಂದರು.
























