Home ಜಿಲ್ಲೆ ಬೆಂಗಳೂರು ಎಂಟು ಜಿಲ್ಲೆಗಳಿಗೆ ಬಿಸಿಗಾಳಿ ಎಚ್ಚರಿಕೆ

ಎಂಟು ಜಿಲ್ಲೆಗಳಿಗೆ ಬಿಸಿಗಾಳಿ ಎಚ್ಚರಿಕೆ

ಬೆಂಗಳೂರು, ಏ. ೧೭- ರಾಜ್ಯದಲ್ಲಿ ದಿನದಿಂದ ದಿನಕ್ಕೆ ಬಿಸಿಲಿನ ತೀವ್ರತೆ ಏರಿಕೆಯಾಗುತ್ತಿದ್ದು, ಅನೇಕ ಜಿಲ್ಲೆಗಳಿಗೆ ಹೀಟ್‌ವೇವ್ ಎಚ್ಚರಿಕೆ ನೀಡಲಾಗಿದೆ. ಉಷ್ಣಾಂಶವು ಸಾಮಾನ್ಯಕ್ಕಿಂತ ೨-೩ ಡಿಗ್ರಿ ಸೆಲ್ಸಿಯಸ್ ಹೆಚ್ಚಾಗಿರುವ ಹಿನ್ನೆಲೆ ಜನಜೀವನದ ಮೇಲೆ ಪರಿಣಾಮ ಕಾಣಿಸುತ್ತಿದೆ.


ಹವಾಮಾನ ಇಲಾಖೆಯ ಪ್ರಕಾರ ಬೀದರ್, ಕಲಬುರ್ಗಿ, ವಿಜಯಪುರ, ಬಾಗಲಕೋಟೆ, ಬೆಳಗಾವಿ, ಉತ್ತರ ಕನ್ನಡ, ದಕ್ಷಿಣ ಕನ್ನಡ ಹಾಗೂ ಉಡುಪಿ ಜಿಲ್ಲೆಗಳಲ್ಲಿ ಮುಂದಿನ ಮೂರು ದಿನದಿಂದ ನಾಲ್ಕು ದಿನಗಳ ಕಾಲ ಉಷ್ಣ ಅಲೆ (ಹೀಟ್‌ವೇವ್) ಸಂಭವಿಸುವ ಸಾಧ್ಯತೆ ಇದೆ. ಜನರು ಅಗತ್ಯ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳುವಂತೆ ಸೂಚಿಸಲಾಗಿದೆ.


ಇನ್ನೂ ಬೆಂಗಳೂರಿನಲ್ಲಿಯೂ ಬಿಸಿಲಿನ ತೀವ್ರತೆ ಏರಿಕೆಯಾಗಿದ್ದು, ಈಗಾಗಲೇ ಗರಿಷ್ಠ ಉಷ್ಣಾಂಶ ೩೫-೩೬ ಡಿಗ್ರಿ ಸೆಲ್ಸಿಯಸ್ ದಾಖಲಾಗುತ್ತಿದೆ. ಈ ವಾರಾಂತ್ಯಕ್ಕೆ ೩೯ ಡಿಗ್ರಿವರೆಗೆ ಏರಿಕೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ನಿರ್ದೇಶಕರು ಸಿ.ಎಸ್. ಪಾಟೀಲ್ ತಿಳಿಸಿದ್ದಾರೆ.


ಬಿಸಿಲಿನ ತಾಪದಿಂದ ಜನರು ಹೊರಗೆ ಹೋಗುವುದಕ್ಕೂ ಹೆದರುವ ಸ್ಥಿತಿ ನಿರ್ಮಾಣವಾಗಿದ್ದರೂ, ಕೆಲಸದ ನಿಮಿತ್ತ ಹೊರಡಲೇಬೇಕಾದ ಅನಿವಾರ್ಯತೆ ಇದೆ. ಈ ಹಿನ್ನೆಲೆ ಸಾರ್ವಜನಿಕರು ಸಾಮಾನ್ಯ ಬಸ್‌ಗಳ ಬದಲು ಎಸಿ ಸೌಲಭ್ಯ ಹೊಂದಿರುವ ವೋಲ್ವೋ ಬಸ್‌ಗಳನ್ನು ಹೆಚ್ಚು ಆಯ್ಕೆ ಮಾಡುತ್ತಿದ್ದಾರೆ.


ಕಳೆದ ಒಂದು ತಿಂಗಳಲ್ಲಿ ವೋಲ್ವೋ ಬಸ್ ಪ್ರಯಾಣಿಕರ ಸಂಖ್ಯೆಯಲ್ಲಿ ಶೇ.೫ರಿಂದ ೧೦ರಷ್ಟು ಏರಿಕೆ ಕಂಡುಬಂದಿದೆ. ಹೆಚ್ಚುವರಿ ಶುಲ್ಕ ಇದ್ದರೂ, ತಂಪಾದ ವಾತಾವರಣದಲ್ಲಿ ಆರಾಮದಾಯಕ ಪ್ರಯಾಣಕ್ಕಾಗಿ ಜನರು ವೋಲ್ವೋ ಬಸ್‌ಗಳತ್ತ ಮುಖ ಮಾಡುತ್ತಿದ್ದಾರೆ.


ಬಿಸಿಲಿನ ಅಬ್ಬರ ನಡುವೆ ಜನರು ತಮ್ಮ ದಿನನಿತ್ಯದ ಸಂಚಾರಕ್ಕೂ ಪರ್ಯಾಯ ಮಾರ್ಗಗಳನ್ನು ಹುಡುಕುತ್ತಿದ್ದು, ಎಸಿ ಬಸ್‌ಗಳ ಬಳಕೆ ಹೆಚ್ಚುತ್ತಿರುವುದು ಗಮನಾರ್ಹವಾಗಿದೆ..