
ಅಫಜಲಪೂರ ; ಮೇ.1:ದ್ವೇಷವು ದ್ವೇಷದಿಂದ ಶಮನವಾಗುವುದಿಲ್ಲ, ಪ್ರೀತಿಯಿಂದ ಮಾತ್ರ ಶಮನವಾಗುತ್ತದೆ ಎಂಬ ಬುದ್ಧರ ಅಮರ ವಚನದ ಮೂಲಕ ಸಮಾಜದಲ್ಲಿ ಸೌಹಾರ್ದತೆ, ಕರುಣೆ ಮತ್ತು ಸಹಬಾಳ್ವೆಯ ಮೌಲ್ಯಗಳನ್ನು ಬೆಳೆಸುವ ಅಗತ್ಯವಿದೆ ಎಂದು ಕೆಕೆಆರ್ಟಿಸಿ ಅದ್ಯಕ್ಷ ಅರುಣಕುಮಾರ ಪಾಟೀಲ ತಿಳಿಸಿದರು.
ತಾಲೂಕ ಆಡಳಿತ ವತಿಯಿಂದ ಆಯೋಜಿಸಲಾದ ಬುದ್ಧ ಪೂರ್ಣಿಮೆ ಜಯಂತಿ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿ, ಮಹಾ ಮಾನವತಾವಾದಿ ಗೌತಮ ಬುದ್ಧನ, ಅವರ ಶಾಂತಿ, ಸಹಿಷ್ಣುತೆ ಹಾಗೂ ಮಾನವೀಯತೆಯ ಅಮೂಲ್ಯ ಸಂದೇಶಗಳನ್ನು ಸ್ಮರಿಸುವುದು ನಮ್ಮೆಲ್ಲರ ಆದ್ಯ ಕರ್ತವ್ಯ.
ಬುದ್ಧರ ತತ್ವಗಳು ವಿಶ್ವಶಾಂತಿ, ಸಮಾನತೆ ಹಾಗೂ ಮಾನವ ಕಲ್ಯಾಣದ ದಾರಿದೀಪವಾಗಿದ್ದು, ಅವರ ಆದರ್ಶಗಳು ಪ್ರತಿಯೊಬ್ಬರ ಜೀವನದಲ್ಲಿ ಬೆಳಕಾಗಿ, ಸಮಾಜವನ್ನು ಸತ್ಯ, ಶಾಂತಿ ಮತ್ತು ಧರ್ಮದ ಮಾರ್ಗದಲ್ಲಿ ಮುನ್ನಡೆಸಲಿ ಎಂದು ಅರುಣಕುಮಾರ ಪಾಟೀಲ ಹೇಳಿದರು.
ಈ ಸಂದರ್ಭದಲ್ಲಿ ತಹಸೀಲ್ದಾರ್ ಸಂಜುಕುಮಾರ ದಾಸರ, ಮುಖಂಡರುಗಳಾದ ವಿಜಯಕುಮಾರ್ ಸಾಲಿಮನಿ, ಡಾ.ಹಣಮಂತರಾವ ದೊಡ್ಡಮನಿ, ಶಿವರಾಜ್ ಬಾದನಳ್ಳಿ, ಶ್ರೀಮಂತ ಬಿರಾದಾರ, ಭೀಮರಾವ್ ಗೌರ ಸೇರಿದಂತೆ ಅನೇಕ ಮುಖಂಡರು ಭಾಗವಹಿಸಿದ್ದರು.






















