Home ಜಿಲ್ಲೆ ಸಾಂಕ್ರಾಮಿಕ ರೋಗಗಳ ತಡೆಗೆ “ಕೈ” ಸ್ವಚ್ಛತೆ

ಸಾಂಕ್ರಾಮಿಕ ರೋಗಗಳ ತಡೆಗೆ “ಕೈ” ಸ್ವಚ್ಛತೆ

ಸೈದಾಪುರ:ಮೇ.8: ನಿಯಮಿತವಾಗಿ ಕೈಗಳನ್ನು ಸ್ವಚ್ಛವಾಗಿ ಇಡುವುದರಿಂದ ಅತಿಸಾರ, ಕಾಲರಾ, ಟೈಫಾಯ್ಡ್ ಸೇರಿದಂತೆ ಹಲವು ಸೋಂಕು ರೋಗಗಳನ್ನು ತಡೆಯಬಹುದು ಎಂದು ಮೊಬೈಲ್ ಕ್ಲಿನಿಕ್ ಆರೋಗ್ಯ ಸಿಬ್ಬಂದಿ ಸಿದ್ದಮ್ಮ ಅಭಿಪ್ರಾಯಪಟ್ಟರು.
ಸಮೀಪದ ಕಿಲ್ಲನಕೇರಾ ಗ್ರಾಮದ ಚರ್ಚ್‍ನಲ್ಲಿ ವಿಶ್ವ ಕೈ ಸ್ವಚ್ಛತೆ ದಿನದ ಅಂಗವಾಗಿ ಡಾನ್ ಬೋಸ್ಕೊ ಸಮಾಜ ಸೇವಾ ಕೇಂದ್ರ ಆಯೋಜಿಸಿದ್ದ ಆರೋಗ್ಯ ಜಾಗೃತಿ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು. ದಿನನಿತ್ಯದ ಜೀವನದಲ್ಲಿ ಸರಿಯಾದ ಸಮಯದಲ್ಲಿ ಮತ್ತು ಸರಿಯಾದ ವಿಧಾನದಲ್ಲಿ ಕೈ ತೊಳೆಯುವ ಅಭ್ಯಾಸವನ್ನು ಅಳವಡಿಸಿಕೊಳ್ಳಬೇಕು. ವಿಶ್ವ ಆರೋಗ್ಯ ಸಂಸ್ಥೆ ಸೂಚಿಸಿರುವ ವಿಧಾನವನ್ನು ವಿವರಿಸಿ, ಕನಿಷ್ಠ 20 ಸೆಕೆಂಡುಗಳ ಕಾಲ ಸಾಬೂನು ಬಳಸಿ ಕೈ ತೊಳೆಯುವುದು ಅತ್ಯಂತ ಅಗತ್ಯ ಸಾಬೂನಿನಿಂದ ಕೈ ತೊಳೆಯುವುದು ಕೇವಲ ಸ್ವಚ್ಛತೆಗಾಗಿಲ್ಲ. ಅದೊಂದು ಜೀವ ಉಳಿಸುವ ಅಭ್ಯಾಸ ಎಂಬ ಅರಿವು ಮೂಡಿಸುವುದು ಇದರ ಮುಖ್ಯ ಉದ್ದೇಶ. ಕೈ ಮತ್ತು ದೇಹದ ಸ್ವಚ್ಛತೆ ಜನರ ಆರೋಗ್ಯವನ್ನು ಸುಧಾರಿಸುತ್ತದೆ ಮತ್ತು ಆಸ್ಪತ್ರೆ ಮತ್ತು ವೈದ್ಯಕೀಯ ವೆಚ್ಚಗಳನ್ನು ಕಡಿಮೆ ಮಾಡುತ್ತದೆ. ಹಾಗೂ ರೋಗಾಣುಗಳನ್ನು ಕೊಲ್ಲಲು ಇದು ಅತ್ಯಂತ ಕೈಗೆಟುಕುವ ಮತ್ತು ಸುಲಭವಾದ ವಿಧಾನವಾಗಿದೆ ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಸ್ವಚ್ಛತೆ ಉಳಿಸೋಣ – ಆರೋಗ್ಯ ಕಾಪಾಡೋಣ “ಸ್ವಚ್ಛ ಕೈಗಳು – ಆರೋಗ್ಯಕರ ಜೀವನ” ಎಂಬ ಘೋಷಣೆಯೊಂದಿಗೆ ಗ್ರಾಮಸ್ಥರಿಗೆ ಆರೋಗ್ಯದ ಬಗ್ಗೆ ಜಾಗೃತಿ ಮೂಡಿಸಲಾಯಿತು. ಡಾನ್ ಬೋಸ್ಕೊ ಸಮಾಜ ಸೇವಾ ಕೇಂದ್ರದ ನಿರ್ದೇಶಕರಾದ ಫಾದರ್ ಶಾಬು ಫ್ರಾನ್ಸಿಸ್ ಅವರ ನೇತೃತ್ವದಲ್ಲಿ ನಡೆಯಿತು. ಮೊಬೈಲ್ ಕ್ಲಿನಿಕ್ ತಂಡದ ಸಿಬ್ಬಂದಿ ಸಿದ್ದಮ್ಮ (ನಸಿರ್ಂಗ್ ಆಫೀಸರ್), ಆರೋಗ್ಯ ಕಾರ್ಯಕರ್ತರಾದ ಮರೆಮ್ಮ ಮತ್ತು ಬಸವರಾಜ್ ಸೇರಿದಂತೆ ಇತರರಿದ್ದರು.