
ಭಾಲ್ಕಿ:ಮೇ.8: ವಿದ್ಯಾರ್ಥಿಗಳು ತಮ್ಮ ಗುರುಗಳಿಗೆ ನಿತ್ಯವೂ ಗೌರವ, ವಿಧೇಯತೆ ಮತ್ತು ಕೃತಜ್ಞತೆಯನ್ನು ಸಲ್ಲಿಸಬೇಕು. ಜ್ಞಾನದಾನ ಮಾಡುವ ಶಿಕ್ಷಕರ ಬಗ್ಗೆ ಭಕ್ತಿ, ನಮೃತೆ ಇಟ್ಟುಕೊಂಡು ಅವರ ಆದರ್ಶಗಳನ್ನು ಪಾಲಿಸುವುದೇ ವಿದ್ಯಾರ್ಥಿಗಳು ಗುರುವಿಗೆ ನೀಡುವ ಅತ್ಯುತ್ತಮ ಕಾಣಿಕೆಯಾಗಿದೆ ಎಂದು ಸಂಸದ ಸಾಗರ ಖಂಡ್ರೆ ಅಭಿಪ್ರಾಯ ಪಟ್ಟರು.
ನಗರದ ಶಾಂತಿವರ್ಧಕ ಶಿಕ್ಷಣ ಸಂಸ್ಥೆಯ ಕೈಗಾರಿಕೆ ತರಬೇತಿ ಕೇಂದ್ರದಲ್ಲಿ ಹಳೆಯ ವಿದ್ಯಾರ್ಥಿಗಳ ವತಿಯಿಂದ ಆಯೋಜಿಸಿದ್ದ ಗುರುವಂದನಾ ಮತ್ತು ಹಳೆಯ ವಿದ್ಯಾರ್ಥಿಗಳ ಪನರ್ಮಿಲನ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು. ಸಂಸ್ಥೆಯ ಹಳೆಯ ವಿದ್ಯಾರ್ಥಿಗಳು ಸೇರಿ ಗುರುವಂದನ ಕಾರ್ಯಕ್ರಮದ ಮೂಲಕ ತಮ್ಮ ಗುರುಗಳಿಗೆ ಗೌರವ ನೀಡುತ್ತಿರುವುದು ಮಾದರಿ ಎನಸಿದೆ.
ಈ ಸಂಸ್ಥೆಯಲ್ಲಿ ಇದು ವರೆಗೂ ಸಾವಿರಾರೂ ವಿದ್ಯಾರ್ಥಿಗಳು ಐಟಿಐ ಕೋರ್ಸ್ ಪೂರ್ಣಗೊಳಿಸಿ ವಿವಿಧ ಪ್ರತಿಷ್ಠಿತ ಕಂಪನಿಗಳಲ್ಲಿ ಉದ್ಯೋಗಿಗಳಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಇನ್ನೂ ಕೆಲ ವಿದ್ಯಾರ್ಥಿಗಳು ಸ್ವಂತ ಕಂಪನಿ ಆರಂಭಿಸಿ ನೂರಾರೂ ಯುವಕರಿಗೆ ಉದ್ಯೋಗ ಕಲ್ಪಿಸಿದ್ದಾರೆ ಎಂದು ಮೆಚ್ಚುಗೆ ವ್ಯಕ್ತ ಪಡಿಸಿದರು.
ಸಂಸ್ಥೆಯ ಪ್ರಧಾನ ವ್ಯವಸ್ಥಾಪಕ ಸುರೇಂದ್ರನ್ ಆರ್ ಮಾತನಾಡಿದರು. ಹಳೆಯ ವಿದ್ಯಾರ್ಥಿಗಳು ತಮ್ಮ ಅನುಭವ ಹಂಚಿಕೊಂಡರು. ಐಟಿಐ ಪ್ರಾಚಾರ್ಯ ಸಂಗಪ್ಪ ಹುಲಸೂರೆ, ಶಿವರಾಜ ತಡೋಳಗೆ, ವಾಮನರಾವ ಬಿರಾದಾರ್ ಮಾತನಾಡಿದರು. ಈ ಸಂದರ್ಭದಲ್ಲಿ ಅಕ್ಕಮಹಾದೇವಿ ಕಾಲೇಜಿನ ಪ್ರಾಚಾರ್ಯ ಭೀಮರಾವ ಗಿರಿ ಸೇರಿದಂತೆ ಹಲವರು ಇದ್ದರು. ಮಲ್ಲಿಕಾರ್ಜುನ ಮೇತ್ರೆ ಸ್ವಾಗತಿಸಿದರು. ದೀಪಕ ಠಮಕೆ ನಿರೂಪಿಸಿ, ವಂದಿಸಿದರು.






















