
ವಿಜಯಪುರ, ಮಾ.೨- ಪಟ್ಟಣದ ದೇವನಹಳ್ಳಿ ರಸ್ತೆಯ ಗುಡುವನಹಳ್ಳಿ ಕೆರೆ ಏರಿಯ ಮೇಲೆ ವಾಹನಗಳ ಸುರಕ್ಷತೆಗಾಗಿ ಅಳವಡಿಸಲಾಗಿದ್ದ ಕಬ್ಬಿಣದ ರೇಲಿಂಗ್ಸ್ (ತಡೆಗೋಡೆ) ಈಗ ನಿರ್ವಹಣೆ ಇಲ್ಲದೆ ಕಳ್ಳಕಾಕರ ಪಾಲಾಗುತ್ತಿವೆ. ಅಧಿಕಾರಿಗಳ ಮತ್ತು ಜನಪ್ರತಿನಿಧಿಗಳ ಕಣ್ಣ ಮುಂದೆಯೇ ಕೋಟ್ಯಂತರ ರೂಪಾಯಿ ಮೌಲ್ಯದ ಸಾರ್ವಜನಿಕ ಆಸ್ತಿ ನಾಶವಾಗುತ್ತಿದ್ದರೂ, ಸಂಬಂಧಪಟ್ಟ ಇಲಾಖೆಗಳು ಮಾತ್ರ ’ಕುರುಡು’ ಪ್ರದರ್ಶಿಸುತ್ತಿವೆ.’
ಸಾವಿರದ ರಿಪೇರಿಗೆ ಲಕ್ಷದ ಟೆಂಡರ್ ಕಾಯುತ್ತಿದ್ದಾರೆಯೇ?
ಕೆರೆಗೆ ವಾಹನಗಳು ಉರುಳದಂತೆ ರಕ್ಷಣೆ ನೀಡಲು ಅಳವಡಿಸಲಾಗಿರುವ ಈ ರೇಲಿಂಗ್ಸ್‌ಗಳ ನೆಟ್ಟು-ಬೋಲ್ಟ್‌ಗಳನ್ನು ಕಳ್ಳರು ಒಂದೊಂದಾಗಿ ಬಿಚ್ಚಿ ಸಾಗಿಸುತ್ತಿದ್ದಾರೆ. ಪರಿಣಾಮವಾಗಿ, ರೇಲಿಂಗ್ಸ್‌ಗಳು ಅಲುಗಾಡುತ್ತಿದ್ದು, ಕೆಲವು ಈಗಾಗಲೇ ಮಾಯವಾಗಿವೆ. ಕೇವಲ ಸಾವಿರಾರು ರೂಪಾಯಿ ವೆಚ್ಚದಲ್ಲಿ ನೆಟ್ಟು-ಬೋಲ್ಟ್‌ಗಳನ್ನು ಬಿಗಿಸಿ ಇದನ್ನು ಸರಿಪಡಿಸಬಹುದಾಗಿದೆ. ಆದರೆ, ಪಿಡಬ್ಲ್ಯೂಡಿ, ಸಣ್ಣ ನೀರಾವರಿ ಇಲಾಖೆ ಅಥವಾ ಹೆದ್ದಾರಿ ವಿಭಾಗದ ಅಧಿಕಾರಿಗಳು ಸಂಪೂರ್ಣ ಹಾಳಾದ ಮೇಲೆ ಲಕ್ಷಾಂತರ ರೂಪಾಯಿಗಳ ಹೊಸ ’ಟೆಂಡರ್ ಕರೆಯಲು ಕಾಯುತ್ತಿದ್ದಾರೆಯೇ? ಎಂಬ ಪ್ರಶ್ನೆ ಸಾರ್ವಜನಿಕರನ್ನು ಕಾಡುತ್ತಿದೆ.
ಸಚಿವರ ಓಡಾಟದ ಹಾದಿಯಲ್ಲೇ ಈ ಅವ್ಯವಸ್ಥೆ!
ವಿಶೇಷವೆಂದರೆ, ಜಿಲ್ಲಾ ಉಸ್ತುವಾರಿ ಸಚಿವರಾದ ಕೆ.ಹೆಚ್. ಮುನಿಯಪ್ಪ ಸೇರಿದಂತೆ ಉನ್ನತ ಅಧಿಕಾರಿಗಳು ಪ್ರತಿದಿನ ಇದೇ ರಸ್ತೆಯಲ್ಲಿ ಸಂಚರಿಸುತ್ತಾರೆ. ರಸ್ತೆಯ ಎರಡೂ ಬದಿಗಳಲ್ಲಿ ರೇಲಿಂಗ್ಸ್ ಬಾಯ್ತೆರೆದು ನಿಂತಿದ್ದರೂ ಯಾರೊಬ್ಬರೂ ಈ ಬಗ್ಗೆ ಗಮನಹರಿಸದಿರುವುದು ದುರಂತ. ಈ ಹಿಂದೆ ಇದೇ ಕೆರೆಗೆ ಲಾರಿಯೊಂದು ಬಿದ್ದು ಸಂಭವಿಸಿದ ಭೀಕರ ಅನಾಹುತದ ನೆನಪು ಇನ್ನೂ ಹಸಿರಾಗಿರುವಾಗಲೇ, ಅಧಿಕಾರಿಗಳು ಮತ್ತೊಂದು ಅನಾಹುತಕ್ಕೆ ದಾರಿ ಮಾಡಿಕೊಡುತ್ತಿದ್ದಾರೆ.
ಸಾರ್ವಜನಿಕರ ಆಕ್ರೋಶ
“ಒಮ್ಮೆ ಈ ರೇಲಿಂಗ್ಸ್ ಅಳವಡಿಸಲು ಸರ್ಕಾರ ಹತ್ತಾರು ವರ್ಷ ತಗೆದುಕೊಂಡಿತ್ತು. ಈಗ ಅಲ್ಪ ಮೊತ್ತದ ರಿಪೇರಿ ಕೆಲಸ ಮಾಡದಿದ್ದರೆ, ಇದು ಸಂಪೂರ್ಣ ನಾಶವಾಗುವುದು ಖಚಿತ. ಮತ್ತೊಮ್ಮೆ ಇದನ್ನು ನಿರ್ಮಿಸಲು ಎಷ್ಟು ವರ್ಷ ಕಾಯಬೇಕೋ ಗೊತ್ತಿಲ್ಲ,” ಎಂದು ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಒತ್ತಾಯ: ಕೂಡಲೇ ಸಂಬಂಧಪಟ್ಟ ಇಲಾಖೆಯವರು ಎಚ್ಚೆತ್ತುಕೊಂಡು, ಕಳ್ಳತನವಾಗುತ್ತಿರುವ ಬೋಲ್ಟ್‌ಗಳನ್ನು ಬಿಗಿಗೊಳಿಸಿ, ರೇಲಿಂಗ್ಸ್‌ಗಳನ್ನು ಸುಸ್ಥಿತಿಗೆ ತರಬೇಕು. ಸಂಭವನೀಯ ಅಪಘಾತಗಳನ್ನು ತಡೆಗಟ್ಟಿ ಸಾರ್ವಜನಿಕರ ಜೀವ ರಕ್ಷಿಸಬೇಕು ಎಂಬುದು ನಾಗರಿಕರ ಒಕ್ಕೊರಲ ಒತ್ತಾಯವಾಗಿದೆ.


























