
ಕಲಬುರಗಿ:ಮಾ.5: ಯಾವುದೇ ಒಂದು ಭಾಷೆಯ ಜೀವಂತಿಗೆಗೆ, ಬೆಳವಣಿಗೆಯಾಗಲು, ಶುದ್ಧವಾಗಿ ಮಾತನಾಡಲು, ಬರೆಯಲು ಮತ್ತು ಓದಲು ವ್ಯಾಕರಣ ಅಗತ್ಯವಾಗಿದೆ. ಇದು ಭಾಷೆಗೆ ಅಲಂಕಾರ, ಮೆರಗು ತರುತ್ತದೆ ಎಂದು ಇಂಗ್ಲೀಷ್ ಶಿಕ್ಷಕ ದತ್ತು ಹಡಪದ ಹೇಳಿದರು.
ನಗರದ ಆಳಂದ ರಸ್ತೆಯ, ಸಂತೋಷ ಕಾಲನಿ ಕ್ರಾಸ್ ಸಮೀಪವಿರುವ ‘ರಿಪಬ್ಲಿಕ್ ಸ್ಪೋಕನ್ ಇಂಗ್ಲೀಷ್ ಅಕಾಡೆಮಿ’ಯಲ್ಲಿ ‘ಬಸವೇಶ್ವರ ಸಮಾಜ ಸೇವಾ ಬಳಗ’ದಿಂದ ಮಂಗಳವಾರ ಸಂಜೆ ಏರ್ಪಡಿಸಲಾಗಿದ್ದ ‘ರಾಷ್ಟ್ರೀಯ ವ್ಯಾಕರಣ ದಿನಾಚರಣೆ’ಯನ್ನು ಉದ್ಘಾಟಿಸಿ ಅವರು ಮಾತನಾಡುತ್ತಿದ್ದರು.
ಉಪನ್ಯಾಸಕ ಎಚ್.ಬಿ.ಪಾಟೀಲ ಮಾತನಾಡಿ, ವ್ಯಾಕರಣವು ಭಾಷೆಯ ಬೆಳವಣಿಗೆಗೆ ಸಹಾಯಕವಾಗಿದೆ. ಉತ್ತಮ ಸಂವಹನ ಸಾಧ್ಯವಾಗುತ್ತದೆ. ಹೊಸ ಭಾಷೆ ಕಲಿಯಲು ಅಗತ್ಯವಾಗಿದೆ. ಪರಿಣಾಮಕಾರಿ ಸಂದೇಶ ನೀಡಲು, ಅಪಾರ್ಥ ದೂರಮಾಡಲು, ಭಾಷೆಯ ರಚನೆ ಹಾಗೂ ದಿನನಿತ್ಯದ ಬದುಕಿಗೆ ವ್ಯಾಕರಣ ಅವಶ್ಯಕವಾಗಿದೆ. ಆದ್ದರಿಂದ ವಿದ್ಯಾರ್ಥಿಗಳು ವ್ಯಾಕರಣವನ್ನು ಸರಿಯಾಗಿ ಅಧ್ಯಯನ, ಅರ್ಥ ಮಾಡಿಕೊಳ್ಳಬೇಕು ಎಂದರು.
ಕಾರ್ಯಕ್ರಮದಲ್ಲಿ ಲೇಖಕ ಶಿವಯೋಗೆಪ್ಪಾ ಎಸ್.ಬಿರಾದಾರ, ಯುವ ಸಮಾಜ ಸೇವಕ ಅಮರ ಜಿ.ಬಂಗರಗಿ, ಪ್ರಮುಖರಾದ ಸುಕೇಶ್ ಮಠ, ದಕ್ಷರಾಜ ಹಾಗೂ ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.























