
ಬೀದರ್:ಜೂ.5: ಶೈಕ್ಷಣಿಕ ಸಾಧನೆಯು ಜೀವನದ ಯಶಸ್ಸಿನ ಒಂದು ಭಾಗ ಮಾತ್ರ. ನಿಜವಾದ ಯಶಸ್ಸು ಉತ್ತಮ ವ್ಯಕ್ತಿತ್ವವನ್ನು ರೂಪಿಸಿಕೊಳ್ಳುವುದರಲ್ಲಿ ಅಡಗಿದೆ. ಆದಕಾರಣ ಪದವಿಧರ ವಿದ್ಯಾರ್ಥಿಗಳೆಲ್ಲರೂ ಮೌಲ್ಯಯುತ ಬದುಕು ರೂಪಿಸಿಕೊಳ್ಳಿ ಎಂದು ಲಿಂಗರಾಜ ಅಪ್ಪ ಇಂಜಿನಿಯರಿಂಗ್ ಕಾಲೇಜಿನ ನಿರ್ದೇಶಕರಾದ ಶ್ರೀ ಶರಣಬಸಪ್ಪ ದೇಶಮುಖ ಹೇಳಿದರು.
ಬೀದರನ ಲಿಂಗರಾಜ ಅಪ್ಪ ಇಂಜಿನಿಯರಿಂಗ್ ಕಾಲೇಜಿನ ಪದವಿ ಪ್ರದಾನ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಜ್ಞಾನವು ವಿನಯ, ಮಾನವೀಯತೆ, ಪ್ರಾಮಾಣಿಕತೆ ಮತ್ತು ಸಮಾಜದ ಬಗ್ಗೆ ಕಾಳಜಿಯೊಂದಿಗೆ ಕೂಡಿರಬೇಕು. ವಿದ್ಯಾರ್ಥಿಗಳು ತಮ್ಮ ವೃತ್ತಿಜೀವನದಲ್ಲಿ ಉನ್ನತ ಸ್ಥಾನಗಳನ್ನು ಅಲಂಕರಿಸುವುದರ ಜೊತೆಗೆ ಸಮಾಜಕ್ಕೆ ಸಕಾರಾತ್ಮಕ ಕೊಡುಗೆ ನೀಡಬೇಕೆಂದು ವಿದ್ಯಾರ್ಥಿಗಳಿಗೆ ಕರೆ ನೀಡಿದರು.
ಗ್ರಾಮೀಣ ಮತ್ತು ಆರ್ಥಿಕವಾಗಿ ಹಿಂದುಳಿದ ವಿದ್ಯಾರ್ಥಿಗಳಿಗೆ ಗುಣಮಟ್ಟದ ತಾಂತ್ರಿಕ ಹಾಗೂ ವೃತ್ತಿಪರ ಶಿಕ್ಷಣವನ್ನು ಒದಗಿಸುವ ಮಹತ್ತರ ಉದ್ದೇಶದಿಂದ ಶರಣಬಸವೇಶ್ವರ ಸಂಸ್ಥಾನದ 8ನೇ ಮಹಾದಾಸೋಹ ಪೀಠಾಧಿಪತಿ ಲಿಂಗೈಕ್ಯ ಪೂಜ್ಯ ಶರಣಬಸವಪ್ಪ ಅಪ್ಪಾಜಿಯವರು ಲಿಂಗರಾಜ ಅಪ್ಪ ಇಂಜಿನಿಯರಿಂಗ್ ಕಾಲೇಜು ಸ್ಥಾಪಿಸಿದರು ಎಂದು ತಿಳಿಸಿದ ಅವರು ಶೈಕ್ಷಣಿಕ ಶ್ರೇಷ್ಠತೆ ಮುಖ್ಯವಾದರೂ ನಿಜವಾದ ಯಶಸ್ಸು ಒಳ್ಳೆಯ ವ್ಯಕ್ತಿಯಾಗುವುದರಲ್ಲಿದೆ ಎಂದರು. ಬಳಿಕ ಪದವೀಧರ ವಿದ್ಯಾರ್ಥಿಗಳಿಗೆ ಪದವಿ ಪ್ರಮಾಣಪತ್ರಗಳನ್ನು ವಿತರಿಸಿ ಅಭಿನಂದಿಸಿದರು.
ಲಿಂಗರಾಜ ಅಪ್ಪ ಇಂಜಿನಿಯರಿಂಗ್ ಕಾಲೇಜಿನಲ್ಲಿ 13ನೇ ಪದವಿ ಪ್ರದಾನ ಸಮಾರಂಭವು ಗುರುವಾರ ಸಂಭ್ರಮ, ಸಡಗರ ಮತ್ತು ಶೈಕ್ಷಣಿಕ ಉತ್ಸಾಹದ ನಡುವೆ, ಶರಣಬಸವೇಶ್ವರ ವಿದ್ಯಾವರ್ಧಕ ಸಂಘದ ಅಧ್ಯಕ್ಷರು ಹಾಗೂ ಶರಣಬಸವ ವಿಶ್ವವಿದ್ಯಾಲಯದ ಕುಲಾಧಿಪತಿಗಳಾದ ಮಾತೋಶ್ರೀ ಪೂಜ್ಯ ಡಾ. ದಾಕ್ಷಾಯಣಿ ಅವ್ವಾಜಿ ಹಾಗೂ ಶರಣಬಸವೇಶ್ವರ ಸಂಸ್ಥಾನದ 9ನೇ ಮಹಾದಾಸೋಹ ಪೀಠಾಧಿಪತಿಗಳಾದ ಪೂಜ್ಯ ದೊಡ್ಡಪ್ಪ ಅಪ್ಪ ಅವರ ಆಶೀರ್ವಾದದೊಂದಿಗೆ, ಸಂಘದ ಕಾರ್ಯದರ್ಶಿಗಳಾದ ಶ್ರೀ ಬಸವರಾಜ ದೇಶಮುಖ ಅವರ ಮಾರ್ಗದರ್ಶನದಲ್ಲಿ ಸಮಾರಂಭ ಯಶಸ್ವಿಯಾಗಿ ನೆರವೇರಿತು.
ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯದ ಪ್ರಾದೇಶಿಕ ನಿರ್ದೇಶಕಿ ಡಾ. ಶುಭಾಂಗಿ ಮಾತನಾಡಿ, ಪದವಿ ಪ್ರದಾನ ಸಮಾರಂಭವು ವಿದ್ಯಾರ್ಥಿಗಳ ಜೀವನದಲ್ಲಿ ಮಹತ್ವದ ಮೈಲಿಗಲ್ಲಾಗಿದ್ದು, ಇದು ಅಂತ್ಯವಲ್ಲ, ಹೊಸ ಅವಕಾಶಗಳು ಮತ್ತು ಸವಾಲುಗಳ ಆರಂಭವಾಗಿದೆ. ವಿದ್ಯಾರ್ಥಿಗಳು ಮಾನವೀಯ ಮೌಲ್ಯಗಳು, ನೈತಿಕತೆ ಹಾಗೂ ಸಾಮಾಜಿಕ ಜವಾಬ್ದಾರಿಯನ್ನು ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು.
ಕಾರ್ಯಕ್ರಮದ ಸಂಚಾಲಕರು ಹಾಗೂ ಕಾಲೇಜಿನ ಪ್ರಾಂಶುಪಾಲೆ ಡಾ. ವಿನಿತಾ ಪಾಟೀಲ್ ಅವರು ಕಾಲೇಜಿನ ಶೈಕ್ಷಣಿಕ ಸಾಧನೆಗಳ ಕುರಿತು ವಿವರ ನೀಡಿ ಮಾತನಾಡಿದರು. 2011ರಲ್ಲಿ ಸ್ಥಾಪನೆಯಾದ ಲಿಂಗರಾಜ ಅಪ್ಪ ಇಂಜಿನಿಯರಿಂಗ್ ಕಾಲೇಜು ಇಂದು 6 ಪದವಿ, 4 ಸ್ನಾತಕೋತ್ತರ ಕೋರ್ಸಗಳು ಹಾಗೂ 2 ಸಂಶೋಧನಾ ಕೇಂದ್ರಗಳನ್ನು ಹೊಂದಿದ್ದು, ಗುಣಮಟ್ಟದ ಶಿಕ್ಷಣದ ಮೂಲಕ ವಿದ್ಯಾರ್ಥಿಗಳ ಸವಾರ್ಂಗೀಣ ಅಭಿವೃದ್ಧಿಗೆ ಶ್ರಮಿಸುತ್ತಿದೆ ಎಂದು ತಿಳಿಸಿದರು.
ಈ ವರ್ಷ ಕಾಲೇಜಿನಿಂದ 154 ಪದವಿ ವಿದ್ಯಾರ್ಥಿಗಳು, 20 ಎಂ.ಟೆಕ್ ವಿದ್ಯಾರ್ಥಿಗಳು ಹಾಗೂ 54 ಎಂಬಿಎ ವಿದ್ಯಾರ್ಥಿಗಳು ಪದವಿ ಪಡೆದಿದ್ದು, ಅನೇಕ ವಿದ್ಯಾರ್ಥಿಗಳು ಈಗಾಗಲೇ ದೇಶದ ಪ್ರತಿಷ್ಠಿತ ಸಂಸ್ಥೆಗಳಲ್ಲಿ ಉದ್ಯೋಗವನ್ನು ಪಡೆದುಕೊಂಡಿದ್ದಾರೆ. ಇದು ವಿದ್ಯಾರ್ಥಿಗಳ ಪ್ರತಿಭೆ ಹಾಗೂ ಕಾಲೇಜಿನ ಗುಣಮಟ್ಟದ ಶಿಕ್ಷಣಕ್ಕೆ ಸಾಕ್ಷಿಯಾಗಿದೆ ಎಂದು ಹೇಳಿದರು.
ಸಮಾರಂಭದಲ್ಲಿ ವಿವಿಧ ವಿಭಾಗಗಳ ವಿದ್ಯಾರ್ಥಿಗಳಿಗೆ ಪದವಿ ಪ್ರಮಾಣಪತ್ರಗಳನ್ನು ವಿತರಿಸಲಾಯಿತು. ಕಾರ್ಯಕ್ರಮದಲ್ಲಿ ಡಾ. ಸತೀಶ್ ಪ್ರತಾಪುರ, ಚನ್ನಬಸಮ್ಮ, ಡಾ. ವಿವೇಕ ಜಲಾದಿ, ಡಾ. ಭದ್ರಪ್ಪ ಹರಳಯ್ಯ, ಡಾ. ವಿಜಯಾನಂದ ಕಪ್ಪೆ, ಡಾ. ಸಂಗಪ್ಪ ಹಾಗೂ ಪ್ರಾಧ್ಯಾಪಕರಾದ ಕಿರಣ ಮೂಲಗೆ, ಡಾ. ಶ್ರೀಪಾಲ ರೆಡ್ಡಿ, ಸಂದೀಪ್ ಮಶೆಟ್ಟಿ, ಶ್ರುತಿ ಮೋದಿ ಸೇರಿದಂತೆ ಬೋಧಕ ಹಾಗೂ ಬೋಧಕೇತರ ಸಿಬ್ಬಂದಿ ಉಪಸ್ಥಿತರಿದ್ದರು.

























