
ಯಾದಗಿರಿ:ಮೇ.10: ಗುರುಮಠಕಲ್ ತಾಲ್ಲೂಕಿನ ಗೋಪಾಳಪುರ ಗ್ರಾಮದಲ್ಲಿ ಹಲವು ದಶಕಗಳಿಂದ ಮುಂದುವರಿದಿರುವ ಭೂ ವಿವಾದ ಇದೀಗ ಮತ್ತೊಮ್ಮೆ ತೀವ್ರ ಸ್ವರೂಪ ಪಡೆದುಕೊಂಡಿದ್ದು, ಹಲ್ಲೆ, ಜಾತಿ ನಿಂದನೆ ಹಾಗೂ ಅಕ್ರಮ ಸಾಗುವಳಿ ಆರೋಪಗಳ ಹಿನ್ನೆಲೆಯಲ್ಲಿ ಗ್ರಾಮದಲ್ಲಿ ಉದ್ವಿಗ್ನ ವಾತಾವರಣ ನಿರ್ಮಾಣವಾಗಿದೆ.
ಗಂಗಪ್ಪ ತಂದೆ ಲಕ್ಷ್ಮಪ್ಪ ಕೋರ್ಮ ಅವರ ಕುಟುಂಬದವರ ಹೇಳಿಕೆಯ ಪ್ರಕಾರ, 1982-83ರಲ್ಲಿ ಸಂಬಂಧಿತ ಜಮೀನಿಗೆ ಅಧಿಕೃತ ಆದೇಶ ಗಂಗಪ್ಪ ಅವರ ಪರವಾಗಿ ಜಾರಿಯಾಗಿದ್ದು, ಅಂದಿನಿಂದಲೇ ಅವರು ಜಮೀನನ್ನು ಸಾಗುವಳಿ ಮಾಡಿಕೊಂಡು ಬಂದಿದ್ದಾರೆ ಎನ್ನಲಾಗಿದೆ.
ಆದರೆ, 2004-05ರ ಅವಧಿಯಲ್ಲಿ ಯಾವುದೇ ಅಧಿಕೃತ ದಾಖಲೆಗಳಿಲ್ಲದೇ ನಕಲಿ ದಾಖಲಾತಿಗಳನ್ನು ಸೃಷ್ಟಿಸಿ, ಮಲ್ಲಪ್ಪ ತಂದೆ ಭೀಮಣ್ಣ ಅಪಕ ಹಾಗೂ ಭೀಮಣ್ಣ ತಂದೆ ಭೀಮಶಪ್ಪ ಅವರ ಹೆಸರಿಗೆ ಜಮೀನು ಪಾಣಿ ಬದಲಾವಣೆ ಮಾಡಲಾಗಿದೆ ಎಂದು ಆರೋಪಿಸಲಾಗಿದೆ. 1999ರಲ್ಲಿ ಯಾವುದೇ ರೀತಿಯ ಪಾಣಿ ದಾಖಲೆಗಳೇ ಇಲ್ಲದಿದ್ದರೂ, ಬಳಿಕ ಹಣದ ಪ್ರಭಾವದಿಂದ ದಾಖಲೆ ತಿದ್ದುಪಡಿ ನಡೆಸಲಾಗಿದೆ ಎಂದು ಕುಟುಂಬಸ್ಥರು ದೂರಿದ್ದಾರೆ.
ಈ ಕುರಿತು ಮೇಲ್ಮನವಿ ಸಲ್ಲಿಸಿದ್ದ ವೇಳೆ ಸಹಾಯಕ ಆಯುಕ್ತರು ದಾಖಲೆಗಳನ್ನು ಪರಿಶೀಲಿಸಿ ಗಂಗಪ್ಪ ತಂದೆ ಲಕ್ಷ್ಮಪ್ಪ ಅವರ ಪರವಾಗಿ ಆದೇಶ ನೀಡಿದ್ದರು ಎಂದು ತಿಳಿದು ಬಂದಿದೆ. ನಂತರ ಭೀಮಣ್ಣ ತಂದೆ ಭೀಮಶಪ್ಪ ಅವರು ಜಿಲ್ಲಾಧಿಕಾರಿಗಳಿಗೆ ಮೇಲ್ಮನವಿ ಸಲ್ಲಿಸಿದ್ದು, ಪಿಟಿಸಿಎಲ್ ಕಾಯ್ದೆಯಡಿ ಸೂಕ್ತ ಪ್ರಕ್ರಿಯೆ ಅನುಸರಿಸದ ಕಾರಣ ಜಮೀನನ್ನು “ಕರ್ನಾಟಕ ಸರ್ಕಾರ” ಹೆಸರಿನಲ್ಲಿ ದಾಖಲಿಸಲಾಗಿದೆ ಎನ್ನಲಾಗಿದೆ.
ಆದರೂ ಸಹ, “ಜಮೀನು ನಮ್ಮ ಹೆಸರಿಗೆ ಬಂದಿದೆ” ಎಂದು ಗ್ರಾಮದಲ್ಲಿ ಸುಳ್ಳು ಪ್ರಚಾರ ನಡೆಸಿ, ಪಟಾಕಿ ಸಿಡಿಸಿ ಸಂಭ್ರಮಾಚರಣೆ ಮಾಡಿ, ಕೋರ್ಟ್ ಆದೇಶವಿದ್ದರೂ ಜಮೀನಿನಲ್ಲಿ ಅಕ್ರಮ ಸಾಗುವಳಿ ಮುಂದುವರಿಸಿದ್ದಾರೆ ಎಂದು ಆರೋಪಿಸಲಾಗಿದೆ.
ಈ ಪ್ರಕರಣದಲ್ಲಿ ಮಲ್ಲಪ್ಪ, ಸಾಬಣ್ಣ, ರವಿ, ಶರಣಪ್ಪ, ಭೀಮಪ್ಪ, ಹನುಮಂತ ಸೇರಿದಂತೆ ಹಲವರ ವಿರುದ್ಧ ಆರೋಪ ಕೇಳಿಬಂದಿದ್ದು, ರಾತ್ರಿ ವೇಳೆ ಜಮೀನಿಗೆ ನುಗ್ಗಿ ಅಕ್ರಮ ಸಾಗುವಳಿ ಮಾಡಿದ್ದಾರೆ ಎಂದು ದೂರು ನೀಡಲಾಗಿದೆ.
ಇದಲ್ಲದೆ, ಗಂಗಪ್ಪ ಕುಟುಂಬಸ್ಥರ ಮನೆಗೆ ನುಗ್ಗಿ ಹಲ್ಲೆ ನಡೆಸಿ, ಮಹಿಳೆಯರು ಮತ್ತು ಮಕ್ಕಳ ಮೇಲೂ ದೌರ್ಜನ್ಯ ಎಸಗಿದ್ದು, ಜಾತಿ ನಿಂದನೆ ಮಾಡಿ ಅವಾಚ್ಯ ಶಬ್ದಗಳಿಂದ ಬೈದಿದ್ದಾರೆ ಎಂದು ಕುಟುಂಬದವರು ಆರೋಪಿಸಿದ್ದಾರೆ. ಈ ಸಂಬಂಧ ಗುರುಮಠಕಲ್ ಪೆÇಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಹಂತದಲ್ಲಿದೆ ಎಂದು ತಿಳಿದು ಬಂದಿದೆ.
ಆದರೆ, 06-04-2026ರಂದು ಮತ್ತೆ 15ರಿಂದ 20 ಜನರ ಗುಂಪು ಮನೆ ಮೇಲೆ ಕಲ್ಲು ತೂರಾಟ ನಡೆಸಿ, ಕುಟುಂಬ ಸದಸ್ಯರ ಮೇಲೆ ಹಲ್ಲೆ ನಡೆಸಿದೆ ಎಂದು ಆನಂದ್ ತಂದೆ ಕಾಶಪ್ಪ ಭಜಂತ್ರಿ ಆರೋಪಿಸಿದ್ದಾರೆ. ಗೋಪಾಲಪುರ ಗ್ರಾಮದಲ್ಲಿ ಪರಿಶಿಷ್ಟ ಸಮುದಾಯಕ್ಕೆ ಸೇರಿದ ಕೊರಮ ಸಮಾಜದ ಏಕೈಕ ಕುಟುಂಬವಾಗಿರುವ ಕಾರಣ ತಮ್ಮ ಮೇಲೆ ನಿರಂತರ ದೌರ್ಜನ್ಯ ನಡೆಯುತ್ತಿದೆ ಎಂದು ಅವರು ಹೇಳಿದ್ದಾರೆ.
ಘಟನೆ ಕುರಿತು ಸಿಪಿಐ ಅವರಿಗೆ ಮಾಹಿತಿ ನೀಡಿದಾಗ, “ಈ ವಿಷಯ ನನ್ನ ಗಮನಕ್ಕೆ ಇಲ್ಲ, ಜಿಲ್ಲಾಧಿಕಾರಿ ಮತ್ತು ಡಿವೈಎಸ್ಪಿ ಅವರಿಗೆ ತಿಳಿಸಿ” ಎಂದು ಪ್ರತಿಕ್ರಿಯಿಸಿದ್ದಾರೆ ಎನ್ನಲಾಗಿದೆ. ಅಲ್ಲದೆ, ಘಟನೆಗೆ ಸಂಬಂಧಿಸದಿದ್ದರೂ ಆನಂದ್ ಭಜಂತ್ರಿ ಅವರ ವಿರುದ್ಧವೇ ಸುಳ್ಳು ಮಾಹಿತಿ ನೀಡಿ ಡಿವೈಎಸ್ಪಿ ಮತ್ತು ಎಸ್‍ಪಿ ಮಟ್ಟದಲ್ಲಿ ತಪ್ಪು ಪ್ರಚಾರ ಮಾಡಲಾಗಿದೆ ಎಂದು ಅವರು ಆರೋಪಿಸಿದ್ದಾರೆ.
06-04-2026ರಂದು ನಡೆದ ಹಲ್ಲೆ ಪ್ರಕರಣದ ಕುರಿತು ವಿವಿಧ ಅಧಿಕಾರಿಗಳ ಗಮನಕ್ಕೆ ತಂದಿದ್ದರೂ ಇದುವರೆಗೆ ಎಫ್‍ಐಆರ್ ದಾಖಲಾಗಿಲ್ಲ ಹಾಗೂ ಯಾವುದೇ ಕಾನೂನು ಕ್ರಮ ಕೈಗೊಂಡಿಲ್ಲ ಎಂದು ಆನಂದ್ ಭಜಂತ್ರಿ ಬೇಸರ ವ್ಯಕ್ತಪಡಿಸಿದ್ದಾರೆ.
ಜಿಲ್ಲಾಧಿಕಾರಿಗಳ ಆದೇಶ ಪ್ರಶ್ನಿಸಿ ಆನಂದ್ ತಂದೆ ಕಾಶಪ್ಪ ಭಜಂತ್ರಿ ಅವರು ಹೈಕೋರ್ಟ್ ಮೊರೆ ಹೋಗಿದ್ದು, ಪ್ರಕರಣಕ್ಕೆ ಸಂಬಂಧಿಸಿದಂತೆ 14-07-2025ರಂದು ನ್ಯಾಯಾಲಯದಲ್ಲಿ ವಿಚಾರಣೆ ನಡೆದಿರುವುದಾಗಿ ತಿಳಿದು ಬಂದಿದೆ.























