Home ಜಿಲ್ಲೆ ಕೋಟಗೇರಾ ಗ್ರಾಮದ ಗೋಮಾಳ ಭೂಮಿ ಕಬಳಿಕೆ: ಎಫ್‌ಐಆರ್ ಬಳಿಕವೂ ಅಧಿಕಾರಿಗಳ ನಿರ್ಲಕ್ಷ್ಯ

ಕೋಟಗೇರಾ ಗ್ರಾಮದ ಗೋಮಾಳ ಭೂಮಿ ಕಬಳಿಕೆ: ಎಫ್‌ಐಆರ್ ಬಳಿಕವೂ ಅಧಿಕಾರಿಗಳ ನಿರ್ಲಕ್ಷ್ಯ

ಯಾದಗಿರಿ :ಮೇ.೬:ಜಿಲ್ಲೆಯ ಗುರುಮಠಕಲ್ ತಾಲ್ಲೂಕಿನ ಕೋಟಗೇರಾ ಗ್ರಾಮದಲ್ಲಿ ಸರ್ಕಾರಿ ಗೋಮಾಳ ಭೂಮಿಯ ಅಕ್ರಮ ಕಬಳಿಕೆ ಪ್ರಕರಣ ಮತ್ತೆ ತೀವ್ರ ಚರ್ಚೆಗೆ ಗ್ರಾಸವಾಗಿದೆ. ಸರ್ವೆ ನಂ. ೮೬ರಲ್ಲಿ ಒಳಗೊಂಡಿರುವ ಸುಮಾರು ೮೭ ಎಕರೆ ೨೦ ಗುಂಟೆಗಳ ಗೋಮಾಳ ಜಾಗವನ್ನು ಅಕ್ರಮವಾಗಿ ಬಳಸಿಕೊಂಡಿರುವ ಆರೋಪದ ಹಿನ್ನೆಲೆ ೬೭ ಮಂದಿಯ ವಿರುದ್ಧ ಎಫ್‌ಐಆರ್ ದಾಖಲಾಗಿದ್ದರೂ, ಇದುವರೆಗೂ ಯಾವುದೇ ಕಠಿಣ ಕ್ರಮ ಕೈಗೊಳ್ಳದಿರುವುದು ಸಾರ್ವಜನಿಕರ ಅಸಮಾಧಾನಕ್ಕೆ ಕಾರಣವಾಗಿದೆ.

ಈ ಪ್ರಕರಣವನ್ನು ನಿರಂತರವಾಗಿ ಬೆಳಕಿಗೆ ತಂದ ‘ಸಂಜೆವಾಣಿ’ ಪತ್ರಿಕೆಯ ವರದಿಗಳ ಪರಿಣಾಮವಾಗಿ ೬೭ ಮಂದಿಯ ವಿರುದ್ಧ ಎಫ್‌ಐಆರ್ ದಾಖಲಾಗಿದ್ದು, ಜಿಲ್ಲೆಯ ಮಟ್ಟದಲ್ಲಿ ಅಪರೂಪದ ಬೆಳವಣಿಗೆಯಾಗಿ ಗಮನ ಸೆಳೆದಿತ್ತು. ಸಾರ್ವಜನಿಕ ಆಸ್ತಿಯ ಸಂರಕ್ಷಣೆಗೆ ಮಾಧ್ಯಮದ ಹೋರಾಟಕ್ಕೆ ಇದು ಮಹತ್ವದ ಸಾಧನೆ ಎಂದು ಅರ್ಜಿದಾರ ಚಂದ್ರಯ್ಯ ಅಸಮಾಧಾನ ವ್ಯಕ್ತಪಡಿಸಿದ್ದಾರೆ

ಆದರೆ, ಎಫ್‌ಐಆರ್ ದಾಖಲಾಗಿದ ನಂತರವೂ ಅಕ್ರಮವಾಗಿ ಸಾಗುವಳಿ ಮಾಡುತ್ತಿರುವ ಭೂಮಿಯನ್ನು ತೆರವುಗೊಳಿಸುವ ಕಾರ್ಯ ಆರಂಭವಾಗದೇ ಇರುವುದರಿಂದ ಗ್ರಾಮಸ್ಥರ ಆಕ್ರೋಶ ಮತ್ತಷ್ಟು ತೀವ್ರಗೊಂಡಿದೆ. “ಸರ್ಕಾರಿ ಗೋಮಾಳ ಜಾಗವನ್ನು ರಕ್ಷಿಸುವುದು ಆಡಳಿತದ ಜವಾಬ್ದಾರಿ. ಎಫ್‌ಐಆರ್ ದಾಖಲಿಸುವುದರಲ್ಲೇ ಕೆಲಸ ಮುಗಿಯುವುದಿಲ್ಲ. ಅಕ್ರಮ ಕಬಳಿಕೆ ತೆರವುಗೊಳಿಸಿ ಭೂಮಿಯನ್ನು ಮೂಲ ಸ್ಥಿತಿಗೆ ತರಬೇಕು” ಎಂದು ಸ್ಥಳೀಯ ನಿವಾಸಿ ಶರಣಪ್ಪ ಗುತ್ತೇದಾರ
ಒತ್ತಾಯಿಸಿದ್ದಾರೆ.

ಪ್ರಕರಣದ ವಿಚಾರದಲ್ಲಿ ಅಧಿಕಾರಿಗಳ ನಡುವಿನ ಹೊಣೆತಪ್ಪಿಸುವ ಧೋರಣೆ ಸ್ಪಷ್ಟವಾಗುತ್ತಿದೆ. ಗುರುಮಠಕಲ್ ಸಿಪಿಐ ವೀರಣ್ಣ ದೊಡ್ಡಮನಿ ಅವರನ್ನು ಸಂಪರ್ಕಿಸಿದಾಗ, “ಸ್ಥಳಕ್ಕೆ ಕಂದಾಯ ಇಲಾಖೆಯ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ ನಂತರವೇ ನಾನು ತೆರಳುತ್ತೇನೆ” ಎಂದು ತಿಳಿಸಿದ್ದಾರೆ. ಮತ್ತೊಂದೆಡೆ ಕಂದಾಯ ನಿರೀಕ್ಷಕರನ್ನು ಸಂಪರ್ಕಿಸಲು ಪ್ರಯತ್ನಿಸಿದಾಗ, ಸ್ಥಳೀಯರ ಕರೆಗಳಿಗೆ ಪ್ರತಿಕ್ರಿಯೆ ಸಿಗುತ್ತಿಲ್ಲ ಎಂಬ ಆರೋಪ ಕೇಳಿಬಂದಿದೆ. ತಹಶೀಲ್ದಾರ್ ಅವರ ಗಮನಕ್ಕೂ ವಿಷಯ ತಲುಪಿದ್ದರೂ ಯಾವುದೇ ಪರಿಣಾಮಕಾರಿ ಕ್ರಮ ಕೈಗೊಳ್ಳಲಾಗಿಲ್ಲ ಎಂದು ಗ್ರಾಮಸ್ಥರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಇನ್ನೂ ವಿಪರ್ಯಾಸವೆಂದರೆ, ಮಾಧ್ಯಮಗಳಲ್ಲಿ ನಿರಂತರವಾಗಿ ಸುದ್ದಿಗಳು ಪ್ರಕಟವಾಗುತ್ತಿದ್ದರೂ ಮತ್ತು ೬೭ ಮಂದಿಯ ವಿರುದ್ಧ ಎಫ್‌ಐಆರ್ ದಾಖಲಾಗಿದ್ದರೂ ಅಕ್ರಮ ಸಾಗುವಳಿ ಮುಂದುವರಿದಿದೆ. ಸ್ಥಳೀಯರು ಹೇಳುವಂತೆ, ಆರೋಪಿಗಳು ಯಾವುದೇ ಭಯವಿಲ್ಲದೆ ಮತ್ತೆ ಭೂಮಿಯಲ್ಲಿ ಕೃಷಿ ಚಟುವಟಿಕೆ ನಡೆಸುತ್ತಿದ್ದಾರೆ. “ಎಫ್‌ಐಆರ್ ಆದರೂ ಕ್ರಮ ಕೈಗೊಳ್ಳದಿರುವುದು ಆಶ್ಚರ್ಯಕರ. ಪ್ರಭಾವಿ ವ್ಯಕ್ತಿಗಳ ಬೆಂಬಲದಿAದಲೇ ಅವರು ನಿರ್ಬಂಧವಿಲ್ಲದೆ ಅಕ್ರಮ ಸಾಗುವಳಿ ಮುಂದುವರಿಸುತ್ತಿದ್ದಾರೆ” ಎಂದು ಚಂದ್ರಯ್ಯ ಗುತ್ತೇದಾರ್ ಆರೋಪಿಸಿದ್ದಾರೆ.

ಈ ಹಿನ್ನೆಲೆಯಲ್ಲಿ ಗ್ರಾಮಸ್ಥರು ತಕ್ಷಣವೇ ಅಕ್ರಮ ತೆರವು ಕಾರ್ಯಾಚರಣೆ ಕೈಗೊಂಡು, ೮೭ ಎಕರೆ ಗೋಮಾಳ ಭೂಮಿಯನ್ನು ಸಂಪೂರ್ಣವಾಗಿ ಸಂರಕ್ಷಿಸುವAತೆ ಜಿಲ್ಲಾಡಳಿತಕ್ಕೆ ಆಗ್ರಹಿಸಿದ್ದಾರೆ.