Home ಜಿಲ್ಲೆ ಡಿಡಿಯು ಶಿಕ್ಷಣ ಸಂಸ್ಥೆಯಿAದ ವಿದ್ಯಾರ್ಥಿಗಳಿಗೆ ಉಚಿತ ಕರಾಟೆ ತರಬೇತಿ

ಡಿಡಿಯು ಶಿಕ್ಷಣ ಸಂಸ್ಥೆಯಿAದ ವಿದ್ಯಾರ್ಥಿಗಳಿಗೆ ಉಚಿತ ಕರಾಟೆ ತರಬೇತಿ

ಯಾದಗಿರಿ:ಮೇ.೧೧: ಶಹಾಪುರ ಹಾಗೂ ಕಲಬುರಗಿ ನಗರಗಳ ವಿದ್ಯಾರ್ಥಿಗಳಿಗಾಗಿ ಡಿಡಿಯು ಶಿಕ್ಷಣ ಸಂಸ್ಥೆ ವತಿಯಿಂದ ಉಚಿತ ಕರಾಟೆ ತರಬೇತಿ ಶಿಬಿರವನ್ನು ಆಯೋಜಿಸಲಾಗಿದ್ದು, ಮೇ ೧೫ರಿಂದ ತರಬೇತಿ ಆರಂಭವಾಗಲಿದೆ ಎಂದು ಸಂಸ್ಥೆಯ ಆಡಳಿತಾಧಿಕಾರಿ ಮಲ್ಲಿಕಾರ್ಜುನ ಮೇಟಿ ತಿಳಿಸಿದ್ದಾರೆ.
ನಗರದ ಜಿಲ್ಲಾ ಪತ್ರಿಕಾ ಭವನದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಇಂದಿನ ದಿನಗಳಲ್ಲಿ ವಿದ್ಯಾರ್ಥಿಗಳು ಶಿಕ್ಷಣದ ಜೊತೆಗೆ ಆತ್ಮರಕ್ಷಣೆ ಹಾಗೂ ದೈಹಿಕ ಸಾಮರ್ಥ್ಯ ಬೆಳೆಸಿಕೊಳ್ಳುವುದು ಅತ್ಯಂತ ಅಗತ್ಯವಾಗಿದೆ. ಸಮಾಜದಲ್ಲಿ ಹೆಚ್ಚುತ್ತಿರುವ ಕಿರುಕುಳ ಹಾಗೂ ಅಪರಾಧ ಪ್ರಕರಣಗಳ ನಡುವೆ ವಿದ್ಯಾರ್ಥಿಗಳಲ್ಲಿ ಆತ್ಮವಿಶ್ವಾಸ ಮತ್ತು ಧೈರ್ಯ ಮೂಡಿಸುವ ಉದ್ದೇಶದಿಂದ ಈ ವಿಶೇಷ ತರಬೇತಿ ಶಿಬಿರ ಹಮ್ಮಿಕೊಳ್ಳಲಾಗಿದೆ ಎಂದು ಹೇಳಿದರು.
ಮೇ ೧೫ರಿಂದ ೨೫ರವರೆಗೆ ನಡೆಯುವ ಶಿಬಿರದಲ್ಲಿ ೬ನೇ ತರಗತಿಯಿಂದ ೧೦ನೇ ತರಗತಿಯವರೆಗೆ ಓದುತ್ತಿರುವ ವಿದ್ಯಾರ್ಥಿ ಹಾಗೂ ವಿದ್ಯಾರ್ಥಿನಿಯರಿಗೆ ಭಾಗವಹಿಸಲು ಅವಕಾಶ ಕಲ್ಪಿಸಲಾಗಿದೆ. ಯಾದಗಿರಿ ನಗರದಲ್ಲಿ ಮಿನಿ ವಿಧಾನಸಭೆ ಸಮೀಪದ ಚಿತ್ರಾಪುರ ರಸ್ತೆಯಲ್ಲಿರುವ ಡಿಡಿಯು ಸಿಬಿಎಸ್‌ಸಿ ಶಾಲೆಯಲ್ಲಿ ತರಬೇತಿ ನಡೆಯಲಿದ್ದು, ಶಹಾಪುರ ಹಾಗೂ ಕಲಬುರಗಿಯಲ್ಲೂ ಪ್ರತ್ಯೇಕ ಕೇಂದ್ರಗಳಲ್ಲಿ ತರಗತಿಗಳನ್ನು ನಡೆಸಲಾಗುತ್ತದೆ ಎಂದು ತಿಳಿಸಿದರು.
ವಿದ್ಯಾರ್ಥಿನಿಯರು ಮತ್ತು ಮಹಿಳೆಯರ ಸುರಕ್ಷತೆ ಇಂದಿನ ಸಂದರ್ಭದಲ್ಲಿ ಅತ್ಯಂತ ಮುಖ್ಯ ವಿಷಯವಾಗಿದ್ದು, ಕರಾಟೆ ತರಬೇತಿ ಆತ್ಮರಕ್ಷಣೆಯ ಜೊತೆಗೆ ದೈಹಿಕ ಕ್ಷಮತೆ, ಶಿಸ್ತು ಹಾಗೂ ಮಾನಸಿಕ ದೃಢತೆಯನ್ನು ಹೆಚ್ಚಿಸುತ್ತದೆ ಎಂದು ಹೇಳಿದರು. ಪ್ರತಿಯೊಬ್ಬ ವಿದ್ಯಾರ್ಥಿಗೂ ಪಾಠದ ಶಿಕ್ಷಣದ ಜೊತೆಗೆ ಬದುಕಿನ ಕೌಶಲ್ಯಗಳೂ ಅಗತ್ಯವೆಂದು ಅವರು ಅಭಿಪ್ರಾಯಪಟ್ಟರು.
ಈ ತರಬೇತಿಯನ್ನು ರಾಷ್ಟ್ರೀಯ ಕರಾಟೆ ಚಾಂಪಿಯನ್ ಮನೋಹರ ನಡೆಸಿಕೊಡಲಿದ್ದು, ಕರಾಟೆಯ ಮೂಲ ತಂತ್ರಗಳು, ಆತ್ಮರಕ್ಷಣಾ ವಿಧಾನಗಳು ಹಾಗೂ ಫಿಟ್ನೆಸ್ ಕುರಿತ ಸಮಗ್ರ ಮಾರ್ಗದರ್ಶನ ನೀಡಲಾಗುತ್ತದೆ ಎಂದು ತಿಳಿಸಿದರು.
ಯುವಕರು ಹಾಗೂ ಯುವತಿಯರಿಗಾಗಿ ಪ್ರತ್ಯೇಕ ತರಗತಿಗಳನ್ನು ನಡೆಸಲಾಗುತ್ತಿದ್ದು, ಸಂಪೂರ್ಣ ಉಚಿತವಾಗಿ ತರಬೇತಿ ನೀಡಲಾಗುತ್ತದೆ. ಕೇವಲ ೫೦೦ ವಿದ್ಯಾರ್ಥಿಗಳು ಹಾಗೂ ೫೦೦ ವಿದ್ಯಾರ್ಥಿನಿಯರಿಗೆ ಮಾತ್ರ ಅವಕಾಶ ಕಲ್ಪಿಸಲಾಗಿದ್ದು, ಮೊದಲು ನೋಂದಣಿ ಮಾಡಿಸುವವರಿಗೆ ಆದ್ಯತೆ ನೀಡಲಾಗುತ್ತದೆ ಎಂದು ಹೇಳಿದರು.
ಪ್ರತಿದಿನ ಬೆಳಿಗ್ಗೆ ೬ರಿಂದ ೮.೩೦ರವರೆಗೆ ಹಾಗೂ ಸಂಜೆ ೪ರಿಂದ ೬.೩೦ರವರೆಗೆ ತರಬೇತಿ ನಡೆಯಲಿದ್ದು, ಪೋಷಕರು ತಮ್ಮ ಮಕ್ಕಳ ಭವಿಷ್ಯ ಮತ್ತು ಸುರಕ್ಷತೆಯನ್ನು ಗಮನದಲ್ಲಿಟ್ಟುಕೊಂಡು ಈ ಅವಕಾಶವನ್ನು ಬಳಸಿಕೊಳ್ಳಬೇಕು ಎಂದು ಮನವಿ ಮಾಡಿದರು.
ಹೆಚ್ಚಿನ ಮಾಹಿತಿಗಾಗಿ ಯಾದಗಿರಿ ಕೇಂದ್ರಕ್ಕೆ ೯೬೮೬೩೬೭೬೯೮, ೭೭೬೦೪೧೯೭೦೫, ೯೦೧೯೮೫೨೪೭೯ ಹಾಗೂ ೯೧೪೮೩೦೮೧೨೪ ಸಂಖ್ಯೆಗೆ ಸಂಪರ್ಕಿಸಬಹುದು. ಶಹಾಪುರ ಕೇಂದ್ರಕ್ಕೆ ೯೫೯೧೪೧೦೪೩೭ ಹಾಗೂ ಕಲಬುರಗಿ ಕೇಂದ್ರಕ್ಕೆ ೯೯೪೫೦೬೦೫೬೯ ಸಂಖ್ಯೆಗೆ ಕರೆಮಾಡಬಹುದು ಎಂದು ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಪ್ರಾಚಾರ್ಯ ಬಬಿನ್ ರಾಜ್, ಗೋಪಾಲಕೃಷ್ಣ ಹಾಗೂ ರವಿ ಚೌಹಾನ್ ಸೇರಿದಂತೆ ಹಲವರು ಉಪಸ್ಥಿತರಿದ್ದರು.