
ಯಾದಗಿರಿ:ಏ.೨:ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘ (ಕೆಯುಡಬ್ಲ್ಯೂಜೆ) ನೀಡುವ ೨೦೨೪ನೇ ಸಾಲಿನ ವಾರ್ಷಿಕ ಪ್ರಶಸ್ತಿಗೆ ಯಾದಗಿರಿ ಜಿಲ್ಲೆಯ ನಾಲ್ವರು ಪತ್ರಕರ್ತರು ಆಯ್ಕೆಯಾಗಿರುವುದು ಜಿಲ್ಲೆಯ ಮಟ್ಟಿಗೆ ಹೆಮ್ಮೆಯ ಸಂಗತಿಯಾಗಿದೆ ಎಂದು ಸಂಘದ ಅಧ್ಯಕ್ಷ ಮಲ್ಲಪ್ಪ ಸಂಕೀನ್ ತಿಳಿಸಿದ್ದಾರೆ.
ಈ ಕುರಿತು ಪ್ರಕಟಣೆ ನೀಡಿದ ಅವರು, ಬೀದರನಲ್ಲಿ ಏಪ್ರಿಲ್ ೧೧ ಮತ್ತು ೧೨ರಂದು ನಡೆಯಲಿರುವ ೪೦ನೇ ರಾಜ್ಯ ಪತ್ರಕರ್ತರ ಸಮ್ಮೇಳನದಲ್ಲಿ ಪ್ರಶಸ್ತಿ ಪ್ರದಾನ ಸಮಾರಂಭ ನಡೆಯಲಿದೆ ಎಂದು ಹೇಳಿದರು. ಸಮಾರಂಭದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಹಾಗೂ ಸಂಘದ ರಾಜ್ಯಾಧ್ಯಕ್ಷ ಶಿವಾನಂದ ತಗಡೂರು ಸೇರಿದಂತೆ ಹಲವು ಗಣ್ಯರು ಉಪಸ್ಥಿತರಿದ್ದು ಪ್ರಶಸ್ತಿ ಪ್ರದಾನ ಮಾಡುವರು ಎಂದು ವಿವರಿಸಿದರು.
ಈ ಬಾರಿ ಪ್ರಶಸ್ತಿಗೆ ಪಾತ್ರರಾದವರಲ್ಲಿ ಮಲ್ಲಯ್ಯ ಪೋಲಂಪಲ್ಲಿ ಅವರಿಗೆ ‘ಪಟೇಲ್ ಭೈರಹನುಮಯ್ಯ ಪ್ರಶಸ್ತಿ’ (ಅತ್ಯುತ್ತಮ ಮಾನವೀಯ ವರದಿ), ಅಮರೇಶ ಹಿರೇಮಠ ಅವರಿಗೆ ‘ಅಭಿಮಾನಿ ಪ್ರಕಾಶನ ಪ್ರಶಸ್ತಿ’, ಬಸವರಾಜ ಕಟ್ಟಿಮನಿ ಅವರಿಗೆ ‘ಗಿರಿಧರ್ ಪ್ರಶಸ್ತಿ’ (ಅತ್ಯುತ್ತಮ ಅಪರಾಧ ವರದಿ) ಹಾಗೂ ಸಂಜೀವರಾವ್ ಕುಲಕರ್ಣಿ ಅವರಿಗೆ ‘ಕೆಯುಡಬ್ಲ್ಯೂಜೆ ವಿಶೇಷ ಪ್ರಶಸ್ತಿ’ ಲಭಿಸಿದೆ.
ಜಿಲ್ಲೆಯ ನಾಲ್ವರು ಪತ್ರಕರ್ತರ ಸಾಧನೆಯನ್ನು ಗುರುತಿಸಿ ರಾಜ್ಯ ಮಟ್ಟದಲ್ಲಿ ಗೌರವ ನೀಡಿರುವುದು ಯಾದಗಿರಿ ಜಿಲ್ಲೆಯ ಮಾಧ್ಯಮ ವಲಯಕ್ಕೆ ದೊಡ್ಡ ಪ್ರೋತ್ಸಾಹವಾಗಿದೆ. ವಿಶೇಷವಾಗಿ ಶಹಾಪುರ ತಾಲೂಕಿನ ಇಬ್ಬರು ಪತ್ರಕರ್ತರು ಪ್ರಶಸ್ತಿ ಪುರಸ್ಕೃತರಾಗಿರುವುದು ಸ್ಥಳೀಯ ಮಟ್ಟದಲ್ಲಿ ಹೆಮ್ಮೆಯನ್ನು ಹೆಚ್ಚಿಸಿದೆ.
ಸಣ್ಣ ಜಿಲ್ಲೆಯಾದರೂ ಪ್ರತಿಭೆಯಲ್ಲಿ ದೊಡ್ಡ ಹೆಜ್ಜೆ ಇಟ್ಟಿರುವ ಯಾದಗಿರಿ, ಪತ್ರಿಕೋದ್ಯಮ ಕ್ಷೇತ್ರದಲ್ಲೂ ತನ್ನದೇ ಗುರುತು ಮೂಡಿಸುತ್ತಿರುವುದು ಸಂತಸದ ವಿಷಯವಾಗಿದೆ ಎಂದು ಅವರು ಅಭಿಪ್ರಾಯಪಟ್ಟರು.






















