Home ಜಿಲ್ಲೆ ಬ್ರಿಮ್ಸ್ ಅವ್ಯವಸ್ಥೆ ಸರಿಪಡಿಸದಿದ್ದರೆ ಹೋರಾಟ: ಸ್ವಾಮಿದಾಸ

ಬ್ರಿಮ್ಸ್ ಅವ್ಯವಸ್ಥೆ ಸರಿಪಡಿಸದಿದ್ದರೆ ಹೋರಾಟ: ಸ್ವಾಮಿದಾಸ

ಬೀದರ:ಮೇ.9: ರೋಗಿಗಳ ಚಿಕಿತ್ಸೆಗಾಗಿ ಸರ್ಕಾರ ಕೋಟಿ ಕೋಟಿ ಹಣ ಖರ್ಚು ಮಾಡಿ ಬ್ರಿಮ್ಸ್‍ನಲ್ಲಿ ವಿವಿಧ ಉಪಕರಣಗಳನ್ನು ನೀಡಿದೆ. ಆದರೆ ಅವುಗಳ ಸದುಪಯೋಗ ಆಗದಿರುವುದು ದುರಂತ. ಈ ಕುರಿತು ಜಿಲ್ಲಾ ಉಸ್ತುವಾರಿ ಸಚಿವರು ಹಾಗೂ ಜಿಲ್ಲಾಧಿಕಾರಿಗಳು ಕ್ರಮ ಕೈಗೊಳ್ಳಬೇಕೆಂದು ಬಹುಜನ ಸೇವಾ ಸಮಿತಿ ರಾಜ್ಯ ಸಂಚಾಲಕ ಸ್ವಾಮಿದಾಸ ಕೆಂಪೆನೋರ್ ತಿಳಿಸಿದರು.
ನಗರದ ಜಿಲ್ಲಾ ಪತ್ರಿಕಾ ಭವನದಲ್ಲಿ ಶುಕ್ರವಾರ ಕರೆದ ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡಿದ ಅವರು ಜಿಲ್ಲಾ ಉಸ್ತುವಾರಿ ಸಚಿವರು ಕ್ಯಾಥ್‍ಲ್ಯಾಬ್ ಉದ್ಘಾಟಿಸಿ ಒಂದು ವರ್ಷ ಕಳೆದರೂ ಜನತೆಗೆ ಅದರ ಉಪಯೋಗ ಆಗುತ್ತಿಲ್ಲ. ಡಯಾಲಿಸಿಸ್ ವಿಭಾಗ ಸರಿಯಾಗಿ ನಡೆಯುತ್ತಿಲ್ಲ. ಈ ನಡುವೆ ಲಕ್ಷಾಂತರ ಮೌಲ್ಯದ ಎಸಿ ಮತ್ತು ಕಾಪರ್ ತಂತಿ ಕಳವು ಆಗಿದೆ. ಇದನ್ನೆಲ್ಲ ಗಮನಿಸಿದರೆ ಬ್ರಿಮ್ಸ್ ಆಸ್ಪತ್ರೆಯ ವ್ಯವಸ್ಥೆ ಸಂಪೂರ್ಣ ಹದಗೆಟ್ಟಿದೆ ಎಂದರು. ದೂರದ ಹೈದರಾಬಾದ, ಸೋಲಾಪುರ ಕಡೆಗೆ ರೋಗಿಗಳು ಹೋಗಬಾರದು. ರೋಗಿಗಳ ಸಮಯ ಮತ್ತು ಹಣದ ಉಳಿತಾಯ ಮಾಡುವ ಸಲುವಾಗಿ ಇಲ್ಲಿಯೇ ಬ್ರಿಮ್ಸ್‍ನಲ್ಲಿ ಕ್ಯಾಥ್‍ಲ್ಯಾಬ್ ಮತ್ತು ಡಯಾಲಿಸಿಸ್ ಮತ್ತು ಇನ್ನಿತರ ಚಿಕಿತ್ಸೆಯ ವ್ಯವಸ್ಥೆ ಮಾಡಲಾಗಿದೆ ಎಂದು ಹೇಳುವ ಜನಪ್ರತಿನಿಧಿಗಳ ಮಾತು ಭಾಷಣಕ್ಕೆ ಮಾತ್ರ ಸೀಮಿತವಾಯಿತೇ? ಎಂದು ಸ್ವಾಮಿದಾಸ್ ಪ್ರಶ್ನಿಸಿದರು.
ಈಗಿರುವ ಬ್ರಿಮ್ಸ್ ನಿರ್ದೇಶಕಿ ಡಾ. ಶಾಂತಲಾ ಕೌಜಲಗಿಗೆ ಕೈಬಿಟ್ಟು ನುರಿತ ಅನುಭವಿ ನಿರ್ದೇಶಕರನ್ನು ನೇಮಕ ಮಾಡಬೇಕು. ತುರ್ತಾಗಿ ಕ್ಯಾಥ್‍ಲ್ಯಾಬ್ ಆರಂಭಿಸಬೇಕು. ವೈದ್ಯರು ಆಸ್ಪತ್ರೆಯಲ್ಲಿ ಠಿಕಾಣಿ ಹೂಡುವಂತೆ ಮಾಡಬೇಕು. ಅನಧಿಕೃತವಾಗಿ ಕರ್ತವ್ಯ ನಿರ್ವಹಿಸುತ್ತಿರುವ ಜೈಸಿಂಗ್ ಅವರನ್ನು ವಜಾ ಮಾಡಬೇಕು. ಎಸಿ ಮತ್ತು ಕಾಪರ್ ತಂತಿ ಕಳವು ಪ್ರಕರಣ ತನಿಖೆ ಮಾಡಬೇಕು. ತಪ್ಪಿತಸ್ಥರ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕು. ಹಲವು ವರ್ಷಗಳಿಂದ ಒಂದೇ ಕಡೆ ಠಿಕಾಣಿ ಹೂಡಿರುವ ಪ್ರಕಾಶ ಮಡಿವಾಳ ಅವರ ವರ್ಗಾವಣೆ ಮಾಡಬೇಕು. ಬ್ರಿಮ್ಸ್‍ನಲ್ಲಿರುವ ಎಲ್ಲಾ ಸಿಸಿ ಕ್ಯಾಮರಾಗಳು ಚಾಲೂ ಇರಬೇಕು ಎಂಬ ಇತ್ಯಾದಿ ಹಕ್ಕೊತ್ತಾಯ ಮಾಡಿದರು. 15 ದಿನಗಳ ಒಳಗಾಗಿ ಈ ಬೇಡಿಕೆ ಈಡೇರಿಸದಿದ್ದರೆ ಬ್ರಿಮ್ಸ್ ಆಸ್ಪತ್ರೆ ಮುಂದೆ ಹೋರಾಟ ಮಾಡಲಾಗುವುದು ಎಂದು ಸ್ವಾಮಿದಾಸ ತಿಳಿಸಿದರು.
ಬಹುಜನ ಸೇವಾ ಸಮಿತಿ ಜಿಲ್ಲಾ ಉಪಾಧ್ಯಕ್ಷ ಶ್ರೀನಾಥ ದರ್ಗಾ ಮಾತನಾಡಿ ಕಡಿಮೆ ಗುಣಮಟ್ಟದ ಸಲೈನ್ ಬಳಸಿದ್ದಕ್ಕಾಗಿ ಇತ್ತಿಚೆಗೆ 7 ಜನ ಮಕ್ಕಳಿಗೆ ರಿಯಾಕ್ಷನ್ ಆಗಿ ಅಸ್ವಸ್ಥಗೊಂಡಿದ್ದರು. ಆದ್ದರಿಂದ ಉತ್ತಮ ಗುಣಮಟ್ಟದ ಸಲೈನ್ ಮತ್ತು ಔಷಧಿಗಳನ್ನು ವೈದ್ಯರು ಬಳಸಬೇಕೆಂದು ತಿಳಿಸಿದರು.
ಇದೇ ವೇಳೆ ಸಮಿತಿಯ ಜಿಲ್ಲಾ ಕಾರ್ಯಕಾರಿಣಿ ಸದಸ್ಯ ಕಮಲ ಹಾಸನ್, ಕ.ಕ.ನಿರ್ಮಾಣ ಸೇನೆ ಜಿಲ್ಲಾಧ್ಯಕ್ಷ ಡಾ. ಜಾನಿಶ್ ಇಸ್ಲಾಂಪುರ, ಸೇನೆಯ ಜಿಲ್ಲಾ ಉಪಾಧ್ಯಕ್ಷ ಡಾನಿಯಲ್ ಮಂಗಲಪೇಟ್, ಪ್ರಮುಖರಾದ ನಾಗನಾಥ ಭೂರೆ, ನಾಗಣ್ಣ ಕೌಠಾ, ಅಮಿತ್ ಸ್ಟಾಲಿನ್ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.